ವೋಟರ್ ಐಡಿ ಅಕ್ರಮ: ಚಿಲುಮೆ ಸಂಸ್ಥೆ ಮೇಲೆ ಪೊಲೀಸರ ದಾಳಿ, ನಾಲ್ವರು ಸಿಬ್ಬಂದಿ ಬಂಧನ!

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ಸಂಬಂಧ ಮಲ್ಲೇಶ್ವರಂ ಚಿಲುಮೆ ಸಂಸ್ಥೆಯ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ಸಂಬಂಧ ಮಲ್ಲೇಶ್ವರಂ ಚಿಲುಮೆ ಸಂಸ್ಥೆಯ ಮೇಲೆ ಹಲಸೂರು ಗೇಟ್ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಸಂಬಂಧ ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸೇರಿದ ರೇಣುಕಾಪ್ರಸಾದ್, ಧರ್ಮೇಶ್​, ಸುಧಾಕರ್​ ಮತ್ತು ರಕ್ಷಿತ್ ಎನ್ನುವರನ್ನು ವಶಕ್ಕೆ ಪಡೆದುಕೊಂಡಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ. ಚಿಲುಮೆ ಸಂಸ್ಥೆಗೆ ಐಡಿ ಕಾರ್ಡ್ ನೀಡಿದ್ದ ಮಹದೇವಪುರ ವಲಯದ ಆರ್ ಒ ಚಂದ್ರಶೇಖರ್ ರನ್ನು ಸಸ್ಪೆಂಡ್ ಮಾಡಲಾಗಿದೆ. 

ಬೆಂಗಳೂರಿನ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ವರದಿ ನೀಡುವಂತೆ ಬಿಬಿಎಂಪಿಗೆ ಚುನಾವಣಾ ಆಯೋಗ ಹೇಳಿತ್ತು. ಅದರಂತೆ ಇದೀಗ ಬಿಬಿಎಂಪಿ ಚುನಾವಣಾ ಆಯೋಗಕ್ಕೆ ವರದಿ ನೀಡಿದೆ. ಅದರಲ್ಲಿ ಚಿಲುಮೆ ಸಂಸ್ಥೆಗೆ ವೋಟರ್ ಐಡಿ, ಆಧಾರ್ ಲಿಂಕ್ ಮಾಡುವ ಹೊಣೆ ನೀಡಲಾಗಿತ್ತು. ಉಚಿತವಾಗಿ ಜೋಡಣೆ ಮಾಡುವುದಾಗಿ ಚಿಲುಮೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಈ ಜವಾಬ್ದಾರಿಯನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಅನ್ ಲೈನ್ ಅಥವಾ VHA(Voter Helpline App) ಮುಖೇನಾ ಅರ್ಜಿಗಳನ್ನು ಸಲ್ಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸಲು ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿತ್ತು. ಆದರೆ, ಸದರಿ ಸಂಸ್ಥೆಯು ಪತ್ರದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿರುವ ದೂರಿನ ಹಿನ್ನೆಲೆಯಲ್ಲಿ ಬಿಬಿಎಂಪಿ ಅನುಮತಿಯನ್ನು ರದ್ದುಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com