KRS ನಲ್ಲಿ ಚಿರತೆ ಕಣ್ಣಾಮುಚ್ಚಾಲೆ; 15 ದಿನಗಳಿಂದ ಬೃಂದಾವನ ಬಂದ್, ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರ ಆಕ್ರೋಶ!

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿಗರ ಆಕರ್ಷಣೀಯ ತಾಣಗಳಲ್ಲಿ ಒಂದಾದ ಕೆಆರ್ಎಸ್ ಬೃಂದಾವನ ಗಾರ್ಡನ್ ಚಿರತೆ ಹಾವಳಿಯಿಂದಾಗಿ ಕಳೆದ 15 ದಿನಗಳಿಂದ ಬಂದ್ ಆಗಿದ್ದು, ಅರ್ಧ ತಿಂಗಳೇ ಕಳೆದರೂ ಚಿರತೆಗಳನ್ನು ಹಿಡಿಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೃಂದಾವನ ಗಾರ್ಡನ್ (ಸಂಗ್ರಹ ಚಿತ್ರ)
ಬೃಂದಾವನ ಗಾರ್ಡನ್ (ಸಂಗ್ರಹ ಚಿತ್ರ)

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿಗರ ಆಕರ್ಷಣೀಯ ತಾಣಗಳಲ್ಲಿ ಒಂದಾದ ಕೆಆರ್ಎಸ್ ಬೃಂದಾವನ ಗಾರ್ಡನ್ ಚಿರತೆ ಹಾವಳಿಯಿಂದಾಗಿ ಕಳೆದ 15 ದಿನಗಳಿಂದ ಬಂದ್ ಆಗಿದ್ದು, ಅರ್ಧ ತಿಂಗಳೇ ಕಳೆದರೂ ಚಿರತೆಗಳನ್ನು ಹಿಡಿಯುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

15 ದಿನಗಳ ಹಿಂದೆ ಬೃಂದಾವನ ಗಾರ್ಡನ್ ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಒಂದು ವಾರದ ಮಟ್ಟಿಗೆ ಗಾರ್ಡನ್ ಬಂದ್ ಮಾಡಿ ಜನರು-ಪ್ರವಾಸಿಗರ ಪ್ರವೇಶ ತಡೆದಿದ್ದರು. ಇದೀಗ ಈ ವಾರ ಪದೇ ಪದೇ ವಿಸ್ತರಣೆಯಾಗಿ ಇದೀಗ 15 ದಿನಗಳಿಗೆ ಬಂದು ನಿಂತಿದೆ. ಅದಾಗ್ಯೂ ಅರಣ್ಯ ಇಲಾಖೆಯಾಗಲೀ ಅಥವಾ ಬೃಂದಾವನ ಅಧಿಕಾರಿಗಳಾಗಲಿ ಗಾರ್ಡನ್ ತೆರೆಯುವ ಕಾರ್ಯಕ್ಕೆ ಮುಂದಾಗಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಾ ಇದ್ದಾರೆ. ಇತ್ತ ಪ್ರವಾಸಿ ಸ್ಥಳವನ್ನು ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದ ವ್ಯಾಪಾರಸ್ಥರು ಕಣ್ಣೀರು ಹಾಕುತ್ತ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಳೆದ 1 ತಿಂಗಳಿನಿಂದ ಕೆಆರ್‌ಎಸ್ ಹಾಗೂ ಬೃಂದಾವನದಲ್ಲಿ ಚಿರತೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಇದರಿಂದ ಕಳೆದ 15 ದಿನಗಳಿಂದ ಸುಧೀರ್ಘವಾಗಿ ಬೃಂದಾವನಕ್ಕೆ ಪ್ರವಾಸಿಗರ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕಾವೇರಿ ನೀರಾವರಿ ನಿಗಮ ಬೃಂದಾವನವನ್ನು ಬಂದ್ ಮಾಡಿದೆ. ಇತ್ತ ನಾವು ಚಿರತೆಯನ್ನು ಹಿಡಿಯುತ್ತೇವೆ ಎಂದು ಕಾಟಚಾರಕ್ಕೆ 8 ಬೋನ್‌ಗಳನ್ನು ಅರಣ್ಯ ಇಲಾಖೆ ಇರಿಸಿದೆ. ಇದಲ್ಲದೆ ಕೆಲ ಟ್ರ‍್ಯಾಪ್ ಕ್ಯಾಮೆರಾವನ್ನು ಸಹ ಅಳವಡಿಸಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜವಾಗುತ್ತಿಲ್ಲ. ಕೂಂಬಿಂಗ್ ಮಾಡಿ ಚಿರತೆ ಕಾರ್ಯಾಚರಣೆ ಮಾಡಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ಚಿರತೆಯ ಆತಂಕದಲ್ಲಿ ಬೃಂದಾವನವನ್ನು 15 ದಿನಗಳಿಂದ ಬಂದ್ ಮಾಡಲಾಗಿದ್ದು, ಇತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ನಾವು ಚಿರತೆ ಹಿಡಿಯುತ್ತಿದ್ದೇವೆ, ಆದರೆ ಚಿರತೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪ್ರತಿ ದಿನ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಚಲನವಲನಗಳು ಸೆರೆಯಾಗುತ್ತಿದೆ. ನಿನ್ನೆಯೂ ಸಹ ಉತ್ತರ ಬೃಂದಾವನದ ವ್ಯಾಪ್ತಿಯಲ್ಲಿ ಮುಳ್ಳು ಹಂದಿಯ ಜೊತೆ ಚಿರತೆ ಸೆಣೆಸಾಡುವ ದೃಶ್ಯ ಕಾಣಿಸಿಕೊಂಡಿದೆ. ಆದರೆ ಕಾಟಾಚಾರದ ಅಧಿಕಾರಿಗಳಿಗೆ ಮಾತ್ರ ಚಿರತೆ ಕಾಣಿಸುತ್ತಿಲ್ಲ. ದೊಡ್ಡದಾದ 8 ಬೋನ್ ಇಟ್ಟಿದ್ದೇವೆ ಎನ್ನುತ್ತಿದ್ದಾರೆ. ಬೋನ್ ಇಟ್ಟರೆ ಮಾತ್ರ ಚಿರತೆ ಬೀಳುವುದಿಲ್ಲ. ಸರಿಯಾದ ರೀತಿಯ ಕೂಂಬಿಂಗ್ ಮಾಡಿದರೆ ಮಾತ್ರ ಚಿರತೆ ಸೆರೆಯಾಗುವುದು. ಬೋನ್ ಇಟ್ಟು ಕೂಂಬಿಂಗ್‌ಗೆ ಇವರು ಬಂದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಇಷ್ಟಾದರೂ ಸಹ ಸಚಿವರು ಆಗಲಿ, ಜಿಲ್ಲಾಧಿಕಾರಿಯಾಗಲಿ ಇತ್ತ ತಲೆಹಾಕಿಲ್ಲ ಎಂದು ಸ್ಥಳೀಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳಿಂದ ಬೃಂದಾವನ ಬಂದ್ ಆಗಿರುವ ಕಾರಣ ಇದನ್ನೇ ಜೀವನ ನಿರ್ವಹಣೆಗೆ ಆಧಾರವನ್ನಾಗಿ ಮಾಡಿಕೊಂಡಿರುವ ವ್ಯಾಪಾರಸ್ಥರ ಸ್ಥಿತಿ ಚಿಂತಾಜನಕವಾಗಿದ್ದು, ಪ್ರವಾಸಿಗರನ್ನೇ ನಂಬಿಕೊಂಡಿದ್ದ ವ್ಯಾಪಾರಸ್ಥರು ಇದೀಗ ವ್ಯಾಪಾರವಿಲ್ಲದೇ ಕುಟುಂಬ ನಿರ್ವಹಣೆಗೂ ಕಷ್ಟಪಡುವ ಸ್ಥಿತಿಗೆ ಬಂದಿದ್ದಾರೆ. ಇವರು ಚಿರತೆ ಇದೆ ಅಂತಾರೆ ಆದರೆ ಚಿರತೆ ಹಿಡಿಯೋಕೆ ಮಾತ್ರ ಬರ್ತಾ ಇಲ್ಲ. ನಮ್ಮ ಕಷ್ಟ ಕೇಳೋರು ಯಾರು ಸ್ವಾಮಿ ಎಂದು ವ್ಯಾಪಾರಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಬೃಂದಾವನಲ್ಲಿ ಚಿರತೆಯ ಕಣ್ಣಾಮುಚ್ಚಾಲೆಯಿಂದ ಪ್ರವಾಸಿಗರಿಗೆ ನೀರಾಸೆಯಾದರೆ, ಇದನ್ನೇ ನಂಬಿಕೊಂಡಿರುವ ವ್ಯಾಪಾರಸ್ಥರು ಕಷ್ಟಪಡುವಂತಾಗಿದೆ. ಈಗಲಾದರೂ ಅರಣ್ಯ ಇಲಾಖೆಯ ಅಧಿಕಾರಿಗಳು ತನ್ನ ಬೇಜವಾಬ್ದಾರಿತನ ಬಿಟ್ಟು ಚಿರತೆ ಸೆರೆಗೆ ಸರಿಯಾಗಿ ಕಾರ್ಯಾಚರಣೆ ಮಾಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com