ಹಳೆ ವಾಹನಗಳನ್ನು ರದ್ದಿಗೆ ಹಾಕಿ, ಹೊಸ ವಾಹನ ಖರೀದಿ ಮೇಲೆ ರಿಯಾಯಿತಿ ಪಡೆಯಿರಿ
ಕರ್ನಾಟಕ ಸರ್ಕಾರವು ಮುಂದಿನ 15 ದಿನಗಳಲ್ಲಿ ವಾಹನಗಳನ್ನು ರದ್ದಿಗೆ ಹಾಕುವ ನೀತಿ(vehicle scrappage policy)ಯನ್ನು ಹೊರತರಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ರದ್ದಿಗೆ ಹಾಕಬೇಕೆಂದು ಘೋಷಿಸಿದ ಬಳಿಕ ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.
Published: 27th November 2022 01:44 PM | Last Updated: 27th November 2022 01:44 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ಸರ್ಕಾರವು ಮುಂದಿನ 15 ದಿನಗಳಲ್ಲಿ ವಾಹನಗಳನ್ನು ರದ್ದಿಗೆ ಹಾಕುವ ನೀತಿ(vehicle scrappage policy)ಯನ್ನು ಹೊರತರಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 15 ವರ್ಷ ಪೂರೈಸಿದ ಎಲ್ಲಾ ಸರ್ಕಾರಿ ವಾಹನಗಳನ್ನು ರದ್ದಿಗೆ ಹಾಕಬೇಕೆಂದು ಘೋಷಿಸಿದ ಬಳಿಕ ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.
ಕೇಂದ್ರವು ಎಲ್ಲಾ ರಾಜ್ಯಗಳಿಗೆ ಕಳುಹಿಸಿದ ನೀತಿ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಕರ್ನಾಟಕದಲ್ಲಿ, ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವವರಿಗೆ ಹೊಸ ವಾಹನವನ್ನು ಖರೀದಿಸುವ ಮಾಲೀಕರಿಗೆ ರಿಯಾಯಿತಿ ನೀಡುವ ಪ್ರಸ್ತಾಪ ಕೂಡ ಇದೆ.
ಕಳೆದ ವರ್ಷ ಕರ್ನಾಟಕ ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ರಸ್ತೆಗಿಳಿದಿರುವ 2.8 ಕೋಟಿ ವಾಹನಗಳ ಪೈಕಿ 79 ಲಕ್ಷಕ್ಕೂ ಹೆಚ್ಚು ವಾಹನಗಳು 15 ವರ್ಷಕ್ಕಿಂತ ಹಳೆಯವು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಫಿಟ್‌ನೆಸ್ ಸರ್ಟಿಫಿಕೇಟ್ (FC) ಹೊಂದಿರದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿವೆ. ಇಂತಹ ಹಲವು ವಾಹನಗಳು ಈಗಲೂ ರಾಜ್ಯದ ರಸ್ತೆಗಳಲ್ಲಿ ಸಂಚರಿಸುತ್ತಿದ್ದು, ಪರಿಸರಕ್ಕೆ ಧಕ್ಕೆ ತಂದಿದ್ದು, ಅಪಘಾತಗಳಿಗೆ ತುತ್ತಾಗುತ್ತಿವೆ.
ವಾಣಿಜ್ಯ, ಖಾಸಗಿ ಮತ್ತು ಸರ್ಕಾರಿ ಸೇರಿದಂತೆ ವಿವಿಧ ವರ್ಗಗಳ ಅಡಿಯಲ್ಲಿ ವಾಹನಗಳಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ವರ್ಗದ ಅಡಿಯಲ್ಲಿ, ವಾಹನಗಳ ವಯಸ್ಸು ಮತ್ತು ದೃಢನೆಗೆ ಅನುಗುಣವಾಗಿ, ವಾಹನಗಳನ್ನು ರದ್ದಿಗೆ ಹಾಕಲಾಗುತ್ತದೆ. ತಮ್ಮ ವಾಹನಗಳನ್ನು ಸ್ವಯಂಪ್ರೇರಿತವಾಗಿ ಒಪ್ಪಿಸುವವರಿಗೆ ಪ್ರಮಾಣಪತ್ರವನ್ನು ನೀಡುವ ಮೂಲಕ ಪ್ರೋತ್ಸಾಹಕಗಳನ್ನು ನೀಡಲು ಯೋಚಿಸುತ್ತಿದ್ದೇವೆ, ಅದರ ಮೂಲಕ ಅವರು ಮುಂದಿನ ಹೊಸ ವಾಹನ ಖರೀದಿಯಲ್ಲಿ ಸಬ್ಸಿಡಿ ಅಥವಾ ರಿಯಾಯಿತಿಯನ್ನು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಮುಂದಿನ 10 ದಿನಗಳಲ್ಲಿ ನೀತಿ ಸಿದ್ಧ: ಕೇಂದ್ರದ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯು ರಾಜ್ಯಗಳು ತಮ್ಮದೇ ಆದ ನಿಯಮಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ, ಕರ್ನಾಟಕ ಸಾರಿಗೆ ಇಲಾಖೆಯು ಪ್ರಸ್ತುತ ವಿವಿಧ ತಜ್ಞರು ಮತ್ತು ಪಾಲುದಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ. "ಮುಂದಿನ ಹತ್ತು ದಿನಗಳಲ್ಲಿ ನಿಯಮ ಸಿದ್ಧವಾಗಲಿದೆ ಎಂದು ಸಾರಿಗೆ ಕಾರ್ಯದರ್ಶಿ ಎನ್ ವಿ ಪ್ರಸಾದ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.
ಆದರೆ, ಕೆಲ ಅಧಿಕಾರಿಗಳು ಕರ್ನಾಟಕದಲ್ಲಿ ಈ ನೀತಿ ಜಾರಿ ಮಾಡುವ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅನೇಕ ವಾಹನ ಮಾಲೀಕರ ಸಂಘಗಳಿವೆ, ಅವರು ನೀತಿಯನ್ನು ದುರ್ಬಲಗೊಳಿಸಲು ರಾಜಕೀಯ ಒತ್ತಡವನ್ನು ತರಬಹುದು. ಕರ್ನಾಟಕದಲ್ಲಿ 25 ವರ್ಷಕ್ಕಿಂತ ಹಳೆಯದಾದ ಸಾವಿರಾರು ವಾಹನಗಳಿವೆ. ಅಧಿಕಾರಿಗಳಿಗೆ ಲಂಚ ಕೊಟ್ಟು ಫಿಟ್ನೆಸ್ ಸರ್ಟಿಫಿಕೇಟ್ ಪಡೆಯುತ್ತಾರೆ. ಅಂತಹ ಅನೇಕ ಮಾಲೀಕರು ತಮ್ಮ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಸಿದ್ಧವಾಗಿರುವುದಿಲ್ಲ ಎನ್ನುತ್ತಾರೆ.