ನಮ್ಮ ಕ್ಲಿನಿಕ್ ಮೂಲಕ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹ ತಪಾಸಣೆ: ಡಾ. ಕೆ.ಸುಧಾಕರ್
ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ʼನಮ್ಮ ಕ್ಲಿನಿಕ್ʼ ಮೂಲಕ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
Published: 28th November 2022 05:19 PM | Last Updated: 28th November 2022 06:36 PM | A+A A-

ಡಾ. ಕೆ. ಸುಧಾಕರ್
ಬೆಂಗಳೂರು: ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ʼನಮ್ಮ ಕ್ಲಿನಿಕ್ʼ ಮೂಲಕ 30 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಗೂ ಮಧುಮೇಹ ತಪಾಸಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಆರೋಗ್ಯ ಸಿಟಿ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಅಸಾಂಕ್ರಾಮಿಕ ರೋಗಗಳ ನಿರ್ವಹಣೆಗೆ ನಗರಗಳಲ್ಲಿ 438 ʼನಮ್ಮ ಕ್ಲಿನಿಕ್ʼಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ.ಕೊಳೆಗೇರಿ, ಬಡ ಜನರು ವಾಸಿಸುವ ಪ್ರದೇಶಗಳಲ್ಲಿ ಇಂತಹ ಕ್ಲಿನಿಕ್ ಆರಂಭಿಸಿ ಜನರಿಗೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಮಧುಮೇಹ ಸೇರಿದಂತೆ ಅಸಾಂಕ್ರಾಮಿಕ ರೋಗಗಳಿರುವ ಜನರ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಒಟ್ಟು ಮಧುಮೇಹಿಗಳಲ್ಲಿ ಶೇ. 75 ರಷ್ಟು ಜನರು ಚಿಕಿತ್ಸೆಯನ್ನೇ ಪಡೆಯುತ್ತಿಲ್ಲ. ಆದ್ದರಿಂದ 30 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಮಧುಮೇಹ ಪತ್ತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.
6,500 ಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಈಗಾಗಲೇ ಆರಂಭಿಸಲಾಗಿದೆ. ಇವುಗಳ ಮೂಲಕ ಕೂಡ ಮಧುಮೇಹ ತಪಾಸಣೆ ಮಾಡಲಾಗುವುದು. 200 ಕ್ಕೂ ಅಧಿಕ ನಮ್ಮ ಕ್ಲಿನಿಕ್ ಸಿದ್ಧವಾಗಿದ್ದು, ತಿಂಗಳಾಂತ್ಯದಲ್ಲಿ ಬೇರೆ ಪ್ರದೇಶಗಳಲ್ಲಿ 100 ಹಾಗೂ ಒಂದು ವಾರದ ಬಳಿಕ ಬೆಂಗಳೂರು ನಗರದಲ್ಲಿ ಕ್ಲಿನಿಕ್ ಉದ್ಘಾಟಿಸಲಾಗುವುದು ಎಂದು ವಿವರಿಸಿದರು. ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಶೇ. 50 ರಷ್ಟು ಜನರನ್ನು ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ಒಳಪಡಿಸಲಾಗಿದೆ. ಮುಂದಿನ 18 ತಿಂಗಳಲ್ಲಿ ರಾಜ್ಯದ ಶೇ. 100 ರಷ್ಟು ಜನರಿಗೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂಬುದು ಗುರಿಯಾಗಿದೆ ಎಂದು ಸಚಿವರು ತಿಳಿಸಿದರು.
Our IT City has to be an Arogya City too. Compared to 4 decades ago, our life expectancy has increased from 40 to 65 yrs. However, NCDs like diabetes, heart disease, cancer & chronic lung diseases are a bigger threat than Covid pandemic that we got past recently.
— Dr Sudhakar K (@mla_sudhakar) November 28, 2022
2/3 pic.twitter.com/ynNC3UgZRL
ರಾಜ್ಯದಲ್ಲಿ ಆರಂಭಿಸಿದ ಇ ಮನಸ್ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮಾದರಿಯಾಗಿಸಿಕೊಂಡು ಹೊಸ ಕಾರ್ಯಕ್ರಮ ಆರಂಭಿಸಿದೆ. ಅನೇಕರಿಗೆ ಮಾನಸಿಕ ಸಮಸ್ಯೆ ಇದೆ ಎಂದೇ ಗೊತ್ತಿರುವುದಿಲ್ಲ. ಕ್ಯಾನ್ಸರ್ ವಿಚಾರದಲ್ಲೂ ಹೀಗೆಯೇ ಆಗುತ್ತಿದೆ. ಕಿದ್ವಾಯಿ ಸಂಸ್ಥೆ ಮೂಲಕ ಕ್ಯಾನ್ಸರ್ ಬಗ್ಗೆ ಹೆಚ್ಚು ಅರಿವು ಮೂಡಿಸಲಾಗುತ್ತಿದೆ. ರೋಗ ಬರುವುದಕ್ಕಿಂತ ಮೊದಲು ರೋಗ ಪೂರ್ವದ ನಿಯಂತ್ರಣ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ ಎಂದರು.
ಬೆಂಗಳೂರು ನಗರ ಐಟಿ ನಗರವಾಗಿ ಅಭಿವೃದ್ಧಿಯಾಗಿದೆ. ಈಗ ಇದು ಆರೋಗ್ಯ ನಗರವಾಗಿ ಬೆಳೆಯುತ್ತಿದೆ. 1.3 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಮಾಲಿನ್ಯ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಕಳೆದ ಎರಡು ಮೂರು ದಶಕಕ್ಕೆ ಹೋಲಿಸಿದರೆ ಈಗ ಜನರ ಗರಿಷ್ಠ ವಯೋಮಿತಿ ಹೆಚ್ಚಾಗಿದೆ. ಹಿಂದೆ 40-52 ವಯೋಮಿತಿ ಇದ್ದು, ಈಗ 65-67 ಆಗಿದೆ. ವಯೋಮಿತಿ ಹೆಚ್ಚಳದ ಮೂಲಕ ನಾವು ಅಭಿವೃದ್ಧಿ ಸಾಧಿಸಿದ್ದೇವೆ ಎನ್ನಬಹುದು. ಆದರೆ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಎಷ್ಟು ಆರೋಗ್ಯಕರವಾಗಿ ಬದುಕುತ್ತೇವೆ ಎಂಬುದು ಮುಖ್ಯ ಎಂದರು.