ಪಿಎಫ್‌ಐ ನಿಷೇಧ: ಆದೇಶ ಕಾಯ್ದಿರಿಸಿದ ಹೈಕೋರ್ಟ್
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಅಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
Published: 29th November 2022 12:56 PM | Last Updated: 29th November 2022 12:56 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಅಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕ ಹೊಂದುವ ಮೂಲಕ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದೆ ಎನ್ನುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಬೆಂಗಳೂರಿನ ನಿವಾಸಿ, ಪಿಎಫ್‌ಐ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಅಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿತು.
ಇದನ್ನೂ ಓದಿ: ದುಷ್ಕೃತ್ಯಕ್ಕೆ ಸಂಚು: ಮಂಗಳೂರಿನಲ್ಲಿ ನಿಷೇಧಿತ ಪಿಎಫ್‌ಐಗೆ ಸೇರಿದ ಐವರ ಬಂಧನ!
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್ ಪಾಟೀಲ್ ಅವರು “ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) 1967ರ ಸೆಕ್ಷನ್ 3, ಉಪ ನಿಯಮ 3ರ ಅಡಿ ಪಿಎಫ್‌ಐ ನಿಷೇಧಿಸಿರುವುದು ಕಾನೂನು ಬಾಹಿರ. ಪಿಎಫ್‌ಐ ಸಂಘಟನೆಯನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿರುವುದು ಸಂವಿಧಾನ ವಿರೋಧಿ ಕ್ರಮ. ಕಾನೂನುಬಾಹಿರ ಸಂಘಟನೆ ಎಂದು ಘೋಷಿಸುವುದಕ್ಕೆ ಮತ್ತು ಆ ನಿಷೇಧ ತಕ್ಷಣದಿಂದಲೇ ಅನ್ವಯಿಸಿರುವುದಕ್ಕೆ ಪ್ರತ್ಯೇಕ ಕಾರಣ ಆದೇಶದಲ್ಲಿ ತಿಳಿಸಿಲ್ಲ” ಎಂದು ಆಕ್ಷೇಪಿಸಿದರು.
“ಪಿಎಫ್‌ಐಗೆ ತನ್ನ ವಾದ ಮಂಡನೆಗೆ ಕಾಲಾವಕಾಶ ನೀಡದೇ ಏಕಾಏಕಿ ನಿಷೇಧ ಆದೇಶ ಮಾಡಲಾಗಿದೆ. ಯುಎಪಿಎ ಕಾಯಿದೆಗೆ ವಿರುದ್ಧವಾಗಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು” ಎಂದು ಕೋರಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಪಿಎಫ್‌ಐ ಸಂಘಟನೆ ದೇಶ ವಿರೋಧಿ ಕೃತ್ಯಗಳನ್ನು ನಡೆಸುತ್ತಿತ್ತು. ಅದು ಭಯೋತ್ಪಾದಕ ಸಂಘಟನೆಗಳ ಕೈ ಜೋಡಿಸಿ ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿತ್ತು. ಜೊತೆಗೆ ಸಂಘಟನೆಯ ಸದಸ್ಯರು ರಾಷ್ಟ್ರದಲ್ಲಿ ಭೀತಿಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ” ಎಂದು ನಿಷೇಧವನ್ನು ಸಮರ್ಥಿಸಿದರು.
ಇದನ್ನೂ ಓದಿ: ಪಿಎಫ್‌ಐ ಸಂಘಟನೆ ಬ್ಯಾನ್ ಮಾಡಿದ್ದೇಕೆ?: ಗೃಹ ಸಚಿವಾಲಯ ಹೊರಡಿಸಿರುವ ಗೆಜೆಟ್ ಅಧಿಸೂಚನೆಯಲ್ಲಿ ಏನಿದೆ?
“ಎಲ್ಲ ಆಧಾರಗಳನ್ನು ಸಂಗ್ರಹ ಮಾಡಿದ ನಂತರವೇ ಸಕಾರಣವಾಗಿಯೇ ಪಿಎಫ್‌ಐ ನಿಷೇಧಿಸಲಾಗಿದೆ. ಇದರಲ್ಲಿ ಕಾನೂನು ಬಾಹಿರವಾದುದೇನೂ ಇಲ್ಲ” ಎಂದರು.
ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್ 28ರಂದು ಐದು ವರ್ಷಗಳವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ದೇಶವ್ಯಾಪಿ ಪಿಎಫ್‌ಐ ಸಂಘಟನೆಯ ಕಚೇರಿ ಮತ್ತು ಅದರ ಸದಸ್ಯರ ನಿವಾಸಗಳ ಮೇಲೆ ದಾಳಿ ನಡೆಸಿದ್ದ ನಂತರ ಕೇಂದ್ರ ಸರ್ಕಾರ ನಿಷೇಧ ಆದೇಶ ಹೊರಡಿಸಿತ್ತು.