ಟಿಪ್ಪು ಸುಲ್ತಾನ್ ಕುರಿತ ಕನ್ನಡ ನಾಟಕ, ಪುಸ್ತಕದ ಲೇಖಕ-ನಿರ್ದೇಶಕರಿಗೆ ಕೊಲೆ ಬೆದರಿಕೆ
ಟಿಪ್ಪು ಸುಲ್ತಾನ್ ಕುರಿತ ‘ಟಿಪ್ಪು ನಿಜಕನಸುಗಳು’ ಶೀರ್ಷಿಕೆಯ ಕನ್ನಡ ನಾಟಕ ಮತ್ತು ಪುಸ್ತಕದ ಲೇಖಕ-ನಿರ್ದೇಶಕರಿಗೆ ಜೀವಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
Published: 30th November 2022 06:11 PM | Last Updated: 30th November 2022 08:42 PM | A+A A-

ಟಿಪ್ಪು ನಿಜಕನಸುಗಳು ಮತ್ತು ಲೇಖಕ-ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ
ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತ ‘ಟಿಪ್ಪು ನಿಜಕನಸುಗಳು’ ಶೀರ್ಷಿಕೆಯ ಕನ್ನಡ ನಾಟಕ ಮತ್ತು ಪುಸ್ತಕದ ಲೇಖಕ-ನಿರ್ದೇಶಕರಿಗೆ ಜೀವಬೆದರಿಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಜಿಲ್ಲೆಯ ಅಪರಿಚಿತ ವ್ಯಕ್ತಿಗಳಿಂದ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಟಿಪ್ಪು ಸುಲ್ತಾನ್ ಕುರಿತ ‘ಟಿಪ್ಪು ನಿಜಕನಸುಗಳು’ ಶೀರ್ಷಿಕೆಯ ಕನ್ನಡ ನಾಟಕ ಮತ್ತು ಪುಸ್ತಕದ ಲೇಖಕ-ನಿರ್ದೇಶಕ ಅಡ್ಡಂಡ ಸಿ ಕಾರಿಯಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಟಿಪ್ಪು ನಿಜ ಕನಸು ನಾಟಕವನ್ನು ರಚಿಸಿದ್ದ ಅಡ್ಡಂಡ ಕಾರ್ಯಪ್ಪ ಅವರಿಗೆ ಶಿವಮೊಗ್ಗ ಬ್ರಾಹ್ಮಣ ಬೀದಿಯ ವಿಳಾಸದಿಂದ ‘ನೀವಿಗಾ ಸಾಯುವ ಕೊಲೆಯಾಗುವ ಹಂತ ತಲುಪಿದ್ದೀರಾ, ನಿಮ್ಮನ್ನು ನೀವು ನಂಬಿರುವ ದೇವರು ಸಹ ಉಳಿಸುವುದಿಲ್ಲ, ಎಂದು ಬರೆದ ಬೆದರಿಕೆ ಪತ್ರ ಬಂದಿರುವ ಕುರಿತು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದು, ಬೆದರಿಕೆ ನೀಡಿದವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಅಡ್ಡಂಡ ಸಿ ಕಾರ್ಯಪ್ಪ ಬರೆದಿದ್ದ ಟಿಪ್ಪು ಸುಲ್ತಾನ್ ಕುರಿತಾದ ಪುಸ್ತಕ ವಿತರಣೆ, ಮಾರಾಟಕ್ಕೆ ನ್ಯಾಯಾಲಯ ತಡೆ!
ಮೈಸೂರು ರಂಗಾಯಣದ ನಿರ್ದೇಶಕರೂ ಆಗಿರುವ ಅಡ್ಡಂಡ ಕಾರ್ಯಪ್ಪಗೆ ಪ್ರಾಣ ಬೆದರಿಕೆ ಹಿನ್ನಲೆ ದೂರು ನೀಡಿದ್ದಾರೆ. ಈ ಕುರಿತು ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತೀಚೆಗಷ್ಟೇ ತೀವ್ರ ವಿರೋಧದ ನಡುವೆ ಟಿಪ್ಪು ನಿಜಕನಸು ನಾಟಕ ಕೃತಿ ರಚಿಸಿ, ನಾಟಕವನ್ನು ನಿರ್ದೇಶನ ಮಾಡಿದ್ದರು. ಮೈಸೂರಿನ ಮಹೇಶ್ ಚಂದ್ರ ಗುರುವಿನಿಂದ ನಾಟಕ ಪ್ರದರ್ಶನ ಮಾಡಿದ ಮೇಲೆ ವಿಡಿಯೋ ಮಾಡಿ ನನ್ನ ಬಗ್ಗೆ ಟೀಕೆ ಮಾಡಿದ್ದರು ಇದರಿಂದ ಪ್ರಚೋದನೆಗೊಂಡು ಬೆದರಿಕೆ ಪತ್ರ ಬಂದಿದೆ ಎಂದಿದ್ದಾರೆ.
ಇತ್ತೀಚೆಗಷ್ಟೇ ಟಿಪ್ಪು ನಿಜಕನಸು ನಾಟಕ ರಂಗಾಯಣದ ಭೂಮಿ ಗೀತದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು. 25 ಪಾತ್ರಧಾರಿಗಳು, ಐವರ ತಾಂತ್ರಿಕ ವರ್ಗ ಸೇರಿ ಒಟ್ಟು 30 ಜನರ ತಂಡದಿಂದ ನಾಟಕ ಪ್ರದರ್ಶನಗೊಂಡಿತ್ತು. ಒಟ್ಟು 3 ಗಂಟೆ 10 ನಿಮಿಷದ ನಡೆದ ಈ ನಾಟಕದಲ್ಲಿ ಮೇಲುಕೋಟೆ ದುರಂತ, ಮಂಡಿಯಂ ಅಯ್ಯಂಗಾರ್ರ 700 ಬ್ರಾಹ್ಮಣರ ಹತ್ಯೆ ವಿಚಾರ, ಕೊಡಗಿನಲ್ಲಿ ನಡೆದ ದೊಡ್ಡ ಸಂಖ್ಯೆಯ ಮತಾಂತರ, ಕೊಡವರ ಹತ್ಯೆ, ಟಿಪ್ಪು ಸುಲ್ತಾನ್ ಆಡಳಿತದಲ್ಲಿ ತೆಗೆದುಕೊಂಡ ಇಸ್ಲಾಮಿಕ್ ತೀರ್ಮಾನಗಳು, ಆತ ಬರೆದ ಪತ್ರಗಳ ದೃಶ್ಯಾವಳಿಗಳು, ಟಿಪ್ಪು ತಾಯಿ, ಪತ್ನಿಯಿಂದ ಮತಾಂಧತೆಗೆ ವಿರೋಧದ ದೃಶ್ಯಗಳು ಎಲ್ಲರ ಗಮನ ಸೆಳೆದಿತ್ತು.
ನವೆಂಬರ್ 20 ರಿಂದ ಕಾರ್ಯಕ್ರಮ ನಡೆಯುತ್ತಿದ್ದು, ಇದುವರೆಗೆ ಆರು ಶೋಗಳನ್ನು ಪ್ರದರ್ಶಿಸಲಾಗಿದೆ. ಇದಲ್ಲದೆ, ಇನ್ನೂ ಮೂರು ಡಿಸೆಂಬರ್ ಒಂದು, ಮೂರು ಮತ್ತು ನಾಲ್ಕರಂದು ನಡೆಯಲಿವೆ. ಕರ್ನಾಟಕದಾದ್ಯಂತ 75 ಸ್ಥಳಗಳಲ್ಲಿ ಪ್ರದರ್ಶನಗಳನ್ನು ನಡೆಸುವುದು ನನ್ನ ಆಲೋಚನೆಯಾಗಿದೆ, ಅದರಲ್ಲೂ ವಿಶೇಷವಾಗಿ ಚಿತ್ರಮಂದಿರಗಳಿರುವ ಸ್ಥಳಗಳಲ್ಲಿ ಬೆದರಿಕೆಯ ಕಾರಣ ಬಯಲು ರಂಗಮಂದಿರಗಳಲ್ಲಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಕರಿಯಪ್ಪ ಹೇಳಿದರು. ನಾಟಕದಲ್ಲಿ ಟಿಪ್ಪು ಸುಲ್ತಾನ್, ಅವರ ಪತ್ನಿ, ಮಗಳು, 'ದಿವಾನ್' ಪೂರ್ಣಯ್ಯ ಮತ್ತು ಬ್ರಿಟಿಷ್ ಆಡಳಿತಗಾರರು ಸೇರಿದಂತೆ 70 ಪಾತ್ರಗಳಿವೆ ಎಂದು ಅವರು ವಿವರಿಸಿದರು.