ದೆಹಲಿ ಭೇಟಿ: ಬಾಕಿ ಉಳಿದಿರುವ ಯೋಜನೆಗಳ ಕುರಿತು ಕೇಂದ್ರ ನಾಯಕರೊಂದಿಗೆ ಸಿಎಂ ಬೊಮ್ಮಾಯಿ ಚರ್ಚೆ

ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರಾಜ್ಯದಲ್ಲಿ ಬಾಕಿ ಉಳಿದಿರುವ ಯೋಜನೆಗಳ ಕುರಿತು ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ರಾಜ್ಯದಲ್ಲಿ ಬಾಕಿ ಉಳಿದಿರುವ ಯೋಜನೆಗಳ ಕುರಿತು ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.

ಸಿಎಂ ಬೊಮ್ಮಾಯಿ ಅವರು ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಬೆಳಗಾವಿಯಲ್ಲಿ ರಕ್ಷಣಾ ಅಧಿಕಾರಿಗಳಿಗೆ ನಿಹಿತವಾಗಿರುವ 732.24 ಎಕರೆ ಭೂಮಿಯನ್ನು ರಾಜ್ಯಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದರು.

‘ಅಭಿವೃದ್ಧಿ ದೃಷ್ಟಿಯಿಂದ ಭೂಮಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಬೇಕು’ ಎಂದು ರಾಜನಾಥ್‌ ಅವರಿಗೆ ಮನವಿ ಮಾಡಿದರು.

ಆ ಭೂಮಿಯಲ್ಲಿ ಐಟಿ ಪಾರ್ಕ್ ಸೇರಿದಂತೆ ಯೋಜನೆಗಳ ಪ್ರಸ್ತಾಪಗಳಿರುವುದರಿಂದ ರಾಜ್ಯ ಸರ್ಕಾರವು ಹಲವು ಬಾರಿ ಪ್ರಸ್ತಾವನೆಗಳನ್ನು ಕಳುಹಿಸಿತ್ತು ಎಂದು ಮೂಲಗಳಿಂದ ತಿಳಿದಬಂದಿದೆ.

ಇದಷ್ಟೇ ಅಲ್ಲದೆ, ಬೊಮ್ಮಾಯಿ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ, ರಾಜ್ಯ ಸಂಪುಟ ಈಗಾಗಲೇ ಅನುಮೋದನೆ ನೀಡಿರುವುದರಿಂದ ಗುಡೇಕೋಟೆ ಸ್ಲಾತ್ ಕರಡಿ ಧಾಮ ಮತ್ತು ಭೀಮಘಡ ಮೀಸಲು ಅರಣ್ಯದ ಬಫರ್ ವಲಯಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನ ಮಂತ್ರಿ ಮಿತ್ರ (ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಮತ್ತು ಅಪೆರಲ್) ಯೋಜನೆಯಡಿ ಕಲಬುರಗಿ, ವಿಜಯಪುರ ಮತ್ತು ತುಮಕೂರಿನಲ್ಲಿ ಮೆಗಾ ಟೆಕ್ಸ್‌ಟೈಲ್ ಪಾರ್ಕ್‌ಗಳನ್ನು ಸ್ಥಾಪಿಸಲು ಅನುದಾನ ನೀಡುವಂತೆ ಕೇಂದ್ರ ಜವಳಿ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದರು.

ನಡ್ಡಾ ಭೇಟಿಯಿಲ್ಲ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ರಾಜಕೀಯ ಮತ್ತು ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚಿಸಲು ಸಮಯ ಕೇಳಿದ್ದ ಬೊಮ್ಮಾಯಿ ಅವರಿಗೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಜೆಪಿ ನಡ್ಡಾ ಅವರು ಪ್ರಯಾಣದಲ್ಲಿದ್ದ ಕಾರಣ ಭೇಟಿಯಾಗಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಆದರೆ, ಉದ್ದೇಶಪೂರ್ವಕವಾಗಿಯೇ ಹೈಕಮಾಂಡ್ ಬೊಮ್ಮಾಯಿ ಅವರನ್ನು ಕಡೆಗಣಿಸುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಬೊಮ್ಮಾಯಿಯವರೇ ನಡ್ಡಾ ಅವರನ್ನು ಭೇಟಿ ಮಾಡಲು ಉತ್ಸುಕರಾಗಿರುವಾಗ ಅವರಿಗೇಕೆ ಕೇಂದ್ರ ಸಮಯ ನೀಡುತ್ತಿಲ್ಲ. ಬೊಮ್ಮಾಯಿ ಅಷ್ಟೊಂದು ಅಸಮರ್ಥನಾ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com