ರಸ್ತೆ ಗುಂಡಿ ಮುಚ್ಚಲು ಪ್ರತಿ ವರ್ಷ 30 ಕೋಟಿ ರು. ವೆಚ್ಚ: ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್

ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ ಮಳೆಯಿಂದ ಪ್ರಗತಿ ಕುಂಠಿತವಾಗಿದೆ. ಪ್ರಮುಖ ರಸ್ತೆಗಳಲ್ಲೇ ಇನ್ನೂ ಎರಡು ಸಾವಿರ ಗುಂಡಿಗಳಿವೆ
ತುಷಾರ್ ಗಿರಿನಾಥ್
ತುಷಾರ್ ಗಿರಿನಾಥ್

ಬೆಂಗಳೂರು: ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ನಾವು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ ಮಳೆಯಿಂದ ಪ್ರಗತಿ ಕುಂಠಿತವಾಗಿದೆ. ಪ್ರಮುಖ ರಸ್ತೆಗಳಲ್ಲೇ ಇನ್ನೂ ಎರಡು ಸಾವಿರ ಗುಂಡಿಗಳಿವೆ. ಶೀಘ್ರವೇ ಎಲ್ಲವನ್ನೂ ಮುಚ್ಚಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಇಂದು ಅಧಿಕಾರಿಗಳ ಜೊತೆಗೆ ನಿನ್ನೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದ ಜಾಗದಲ್ಲಿಯೂ ಪರಿಶೀಲನೆ ನಡೆಸಿದರು. ಸುಮಾರು 6 ಕಿ.ಮೀ ರಸ್ತೆಯನ್ನು ಕಾಲ್ನಡಿಗೆಯ ಮೂಲಕ ವಾಟಾಳ್ ನಾಗರಾಜ್ ರಸ್ತೆ(ಸುಜಾತ ಟಾಕೀಸ್ ಬಳಿಯಿಂದ), ಡಾ. ರಾಜ್ ಕುಮಾರ್ ರಸ್ತೆ, ರಾಜಾಜಿನಗರ 6ನೇ ಬ್ಲಾಕ್ ವೃತ್ತ, ಮಾಗಡಿ ಜಂಕ್ಷನ್ ನಿಂದ ವೆಸ್ಟ್ ಆಫ್ ಕಾರ್ಡ್ ರಸ್ತೆ(ಟೋಲ್ ಗೇಡ್ ಕಡೆಗೆ), ಟೋಲ್ ಗೇಟ್ ಜಂಕ್ಷನ್, ಜೈ ಮುನಿರಾವ್ ವೃತ್ತ ಹಾಗೂ ಹೌಸಿಂಗ್ ಬೋರ್ಡ್ ಜಂಕ್ಷನ್ ವರೆಗೆ ಪರಿಶೀಲನೆ ನಡೆಸಿದರು.

ಥಿಯೇಟರ್ ಬಳಿಯ ಗುಂಡಿ ತುಂಬಲಾಗಿದೆ. ಗುಂಡಿಯಿಂದಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಅಧಿಕೃತ ದೃಢೀಕರಣವಿಲ್ಲ. ಪೊಲೀಸ್ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದರು. ಪ್ರತಿ ವರ್ಷ ರಸ್ತೆ ಗುಂಡಿಗಳನ್ನು ಸರಿಪಡಿಸಲು ಬಿಬಿಎಂಪಿ ಸುಮಾರು 30 ಕೋಟಿ ರೂ.  ವೆಚ್ಚ ಮಾಡುತ್ತೇವೆ. ಪರಿಶೀಲನೆ ವೇಳೆ ಮೂಲ ಸೌಕರ್ಯಗಳ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸ್ಥಳೀಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಾಟಾಳ್ ನಾಗರಾಜ್ ರಸ್ತೆಯನ್ನು ಮಿಲ್ಲಿಂಗ್ ಮಾಡಿ ರಸ್ತೆ ಮೇಲ್ಮೈ ಸರಿಪಡಿಸಿ,  ಲೂಲು ಮಾಲ್‌ ಮುಂಭಾಗ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಿ, ಪಾದಚಾರಿ ಮಾರ್ಗದ ದುರಸ್ತಿ ಹಾಗೂ ಚರಂಡಿ ಸಮಸ್ಯೆಯನ್ನು ಬಗೆಹರಿಸಿ ಹಾಕಿರುವ ಬ್ಯಾರಿಕೇಟ್ ಅನ್ನು ತೆರವುಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಿದರು.

ಸುಜಾತಾ ಥಿಯೇಟರ್ ಮುಂಭಾಗದ ಗೋಡೆಗಳಿಗೆ ಅಂಟಿಸಿರುವ ಪೋಸ್ಟರ್ ಹಾಗೂ ಸುತ್ತಮುತ್ತಲಿನ ಫ್ಲೆಕ್ಸ್ ಗಳನ್ನು ತೆಗೆಯುವಂತೆ ಸೂಚಿಸಿದರು. ರಸ್ತೆ ಬದಿಯ ಮರಗಳ ಕೊಂಬೆಗಳನ್ನು ಕತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಒಎಫ್‌ಸಿ ಕೇಬಲ್‌ಗಳು ತೂಗಾಡುತ್ತಿರುವುದನ್ನು ಗಮನಿಸಿದ ಅವರು, ಕೇಬಲ್‌ಗಳು ಮತ್ತು ಮರದ ಕೊಂಬೆಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ನಗರದಲ್ಲಿ ಗುಂಡಿಗಳನ್ನು ಮುಚ್ಚಲು ಸಾಕಷ್ಟು ಕ್ರಮ ವಹಿಸಲಾಗಿದೆ. ಕೆಲವು ಬಾರಿ ತುರ್ತಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಮಳೆ ಬಿಡುವು ಕೊಡದೆ ಎಲ್ಲ ರೀತಿಯ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಇರುವ ಸೌಲಭ್ಯ ಬಳಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಈ ಹಿಂದೆ ಸಂಚಾರ ಪೊಲೀಸರು ನೀಡಿದ್ದ ರಸ್ತೆಗಳ ಪೈಕಿ ಇನ್ನೂ ಒಂದೂವರೆ ಸಾವಿರ ಗುಂಡಿಗಳನ್ನು ಮುಚ್ಚಬೇಕಿದೆ. ಸತತ ಮಳೆಯಿಂದ ಇದೀಗ ಗುಂಡಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ರಸ್ತೆ ಗುಂಡಿಗಳನ್ನು ತುರ್ತಾಗಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಕಲ್ಲು ಹಾಗೂ ಮರಳಿನ ಮಿಶ್ರಣವನ್ನು ಹಾಕಲಾಗುತ್ತಿದೆ ಎಂದು ಬಿಬಿಎಂಪಿ ಯೋಜನೆ ವಿಭಾಗ ವಿಶೇಷ ಆಯುಕ್ತ ರವೀಂದ್ರ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com