ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣ: ಸೈಬರ್ ಟೀಮ್ ನೆರವು ಕೋರಿದ ಪೊಲೀಸರು

ಒಂದೇ ಕುಟುಂಬದ ಮೂವರು ಸಜೀವ ದಹನ ಮಾಡಿಕೊಂಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಘಟನಾ ಸ್ಥಳದಲ್ಲಿ ಸಿಕ್ಕ ಮೊಬೈಲ್ ಫೋನ್‌ಗಳ ಡೇಟಾವನ್ನು ಪಡೆದುಕೊಳ್ಳಲು ಸೈಬರ್ ಕ್ರೈಂ ಪೊಲೀಸರ ನೆರವು ಕೋರಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದೇ ಕುಟುಂಬದ ಮೂವರು ಸಜೀವ ದಹನ ಮಾಡಿಕೊಂಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಎಚ್‌ಎಸ್‌ಆರ್ ಲೇಔಟ್ ಪೊಲೀಸರು, ಘಟನಾ ಸ್ಥಳದಲ್ಲಿ ಸಿಕ್ಕ ಮೊಬೈಲ್ ಫೋನ್‌ಗಳ ಡೇಟಾವನ್ನು ಪಡೆದುಕೊಳ್ಳಲು ಸೈಬರ್ ಕ್ರೈಂ ಪೊಲೀಸರ ನೆರವು ಕೋರಿದ್ದಾರೆ.

ಬೆಂಕಿ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ ಗಳು ಸುಟ್ಟು ಹೋಗಿದ್ದು, ಮೊಬೈಲ್ ನಲ್ಲಿದ್ದ ಮಾಹಿತಿಗಳು ಸಿಕ್ಕಿದ್ದೇ ಆದರೆ, ಘಟನೆಯ ಹಿಂದಿನ ಕಾರಣ ತಿಳಿಯಬಹುದಾಗಿದೆ. ಹೀಗಾಗಿ ಪೊಲೀಸರು ಸೈಬರ್ ಟೀಂ ನೆರವು ಪಡೆದುಕೊಳ್ಳಲು ಮುಂದಾಗಿದ್ದಾರೆ. 

ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉಪಕರಣ ತಯಾರಿಕಾ ಕಾರ್ಖಾನೆ ನಡೆಸುತ್ತಿದ್ದ ಉದ್ಯಮಿ ಸಂತೋಷ್, ಗೃಹಿಣಿಯಾಗಿರುವ ಅವರ ಪತ್ನಿ ಓಮನಾ (55) ಮತ್ತು ಅವರ ಪುತ್ರಿ ಅನುಷಾ (18) ಶುಕ್ರವಾರ ಮುಂಜಾನೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 

ಘಟನಾ ಸ್ಥಳದಿಂದ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಮೂವರ ಶವಗಳನ್ನು ಶನಿವಾರ ಕೇರಳದ ಪಾಲಕ್ಕಾಡ್‌ನಿಂದ ಬಂದಿದ್ದ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು.

ಎರಡು ವರ್ಷಗಳ ಹಿಂದೆ ಹೊಸೂರು ರಸ್ತೆಯ ಅತ್ತಿಬೆಲೆ ಬಳಿ ಸಂತೋಷ್ ಅವರ ಕಾರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಅದೃಷ್ಟವಶಾತ್ ಮೂವರು ಬದುಕುಳಿದಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. 

ಮನೆ ಬದಲಿಸುವ ಚಿಂತನೆಯಲ್ಲಿದ್ದ ಸಂತೋಷ್ ಮನೆ ಮಾಲೀಕರಿಗೂ ಈ ಬಗ್ಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಾಗಲೇ ಘಟನೆ ನಡೆದಿದೆ. ಶುಕ್ರವಾರ ಬೆಳಿಗ್ಗೆ 5.20ರಿಂದ 6.05ರ ನಡುವೆ ಈ ಘಟನೆ ನಡೆದಿರಬಹುದು. ಘಟನೆ ವೇಳೆ ಮನೆಯ ಬಾಗಿಲುಗಳು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. 

ಮೃತರು ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ಹೀಗಾಗಿ ಆತ್ಮಹತ್ಯೆಗೆ ಕಾರಣಗಳು ತಿಳಿದಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ಸಂತೋಷ್ ಕೆಲ ಹಣಕಾಸು ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com