ದೀಪಾವಳಿಯಂದು ಬೆಂಗಳೂರಿನ ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಖರೀದಿಸಿದರೆ ಅದೃಷ್ಟವೋ ಅದೃಷ್ಟ!

ದೀಪಾವಳಿ ಹಬ್ಬ ಬಂತೆಂದರೆ ಸಾಕು ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಈ ಪುಟ್ಟ ಅಂಗಡಿಯ ಮುಂದೆ ದೊಡ್ಡ ಕ್ಯೂ ನಿಂತಿರುತ್ತದೆ. ಅದು ಯಾಕೆಂದು ನಿಮಗೆ ಗೊತ್ತೇ...ಲೆಕ್ಕದ ಪುಸ್ತಕ ಖರೀದಿಗೆ!
ಅವೆನ್ಯೂ ರಸ್ತೆಯಲ್ಲಿರುವ ಅಂಗಡಿ
ಅವೆನ್ಯೂ ರಸ್ತೆಯಲ್ಲಿರುವ ಅಂಗಡಿ

ಬೆಂಗಳೂರು: ದೀಪಾವಳಿ ಹಬ್ಬ ಬಂತೆಂದರೆ ಸಾಕು ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ಈ ಪುಟ್ಟ ಅಂಗಡಿಯ ಮುಂದೆ ದೊಡ್ಡ ಕ್ಯೂ ನಿಂತಿರುತ್ತದೆ. ಅದು ಯಾಕೆಂದು ನಿಮಗೆ ಗೊತ್ತೇ...ಲೆಕ್ಕದ ಪುಸ್ತಕ ಖರೀದಿಗೆ!

ಚಿಕ್ಕಪೇಟೆಯ ಅವೆನ್ಯೂ ರಸ್ತೆಯಲ್ಲಿರುವ ಷಾ ಜಸ್ ರಾಜ್ ಜೈನ್ ಅಂಗಡಿ 'ಅದೃಷ್ಟ'ದ ಅಂಗಡಿಯಾಗಿ ಹೆಸರು ಮಾಡಿದೆ. ದೀಪಾವಳಿ ಬಂದರೆ ಸಾಕು, ಈ ಅಂಗಡಿಯಲ್ಲಿ ಪುಸ್ತಕ ಕೊಳ್ಳಲು ಜನರು ಮುಗಿ ಬೀಳುತ್ತಾರೆ. ಇಲ್ಲಿ ಲೆಕ್ಕದ ಪುಸ್ತಕ ಕೊಂಡು ಲಕ್ಷ್ಮೀ ಪೂಜೆಯ ದಿನ ತಮ್ಮ ಅಂಗಡಿಯಲ್ಲಿ ಈ ಪುಸ್ತಕವಿಟ್ಟು ಪೂಜೆ ಮಾಡಿದರೆ ಅದೃಷ್ಟ ಹಾಗೂ ಹಣದ ಹೊಳೆ ಹರಿಯುತ್ತದೆ ಎಂಬ ನಂಬಿಕೆಯಿದೆ. 

ಇದೇ ಕಾರಣಕ್ಕೆ ಲಕ್ಷ್ಮೀ ಪೂಜೆಗೂ ಮುನ್ನ ಈ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಕೊಳ್ಳಲು ಬೇರೆ ಬೇರೆ ಅಂಗಡಿಯ ಮಾಲೀಕರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. 

ರಾಹುಕಾಲ ಬಿಟ್ಟು ಶುಭ ಸಮಯದಲ್ಲಿ ಈ ಪುಸ್ತಕಗಳನ್ನು ಖರೀದಿ ಮಾಡುತ್ತಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತರೂ ಬೇಸರಗೊಳ್ಳದೆ ಎಷ್ಟು ಹೊತ್ತಾದರೂ ಸಾಲಿನಲ್ಲಿ ನಿಂತು ಲೆಕ್ಕದ ಪುಸ್ತಕ, ಪೆನ್ನುಗಳನ್ನು ಖರೀದಿ ಮಾಡುತ್ತಾರೆ.

“ಇದು ನನ್ನ ತಂದೆ ಜಸ್‌ರಾಜ್ ಜೈನ್ ಅವರ ಕಾಲದಲ್ಲಿ ಪ್ರಾರಂಭವಾದ ಸಂಪ್ರದಾಯವಾಗಿದೆ ಮತ್ತು ಇಂದಿಗೂ ಅದು ಮುಂದುವರೆದಿದೆ. ಹಲವಾರು ವ್ಯವಹಾರಸ್ಥರು ಖಾತೆಗಳ ದಾಖಲೆಗೆ ಕಂಪ್ಯೂಟರ್ ಬಳಸುತ್ತಾರೆ. ಆದರೆ, ಅದೃಷ್ಟ ಬರುವ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಇಂದಿಗೂ ಇಲ್ಲಿಗೆ ಬಂದು ಲೆಕ್ಕದ ಪುಸ್ತಕ ಖರೀದಿಸುತ್ತಾರೆ.

ದಸರಾದಿಂದ ದೀಪಾವಳಿವರೆಗೂ ಪುಸ್ತಕಗಳನ್ನು ಖರೀದಿ ಮಾಡುತ್ತಾರೆ. ಈ ಬಾರಿ ಕನಿಷ್ಟ 6,000 ವ್ಯಾಪಾರಿಗಳು ಪುಸ್ತಕ ಖರೀದಿ ಮಾಡಿದ್ದಾರೆ. ಭಾನುವಾರ 650 ಮಂದಿ ಪುಸ್ತಕ ಖರೀದಿ ಮಾಡಿದ್ದಾರೆ. ಇದರಿಂದಾಗಿ ಬೆಳಿಗ್ಗೆ 6 ಗಂಟೆಗೆ ಅಂಗಡಿ ತೆರೆದು ರಾತ್ರಿ 10 ಗಂಟೆಗೆ ಬಾಗಿಲು ಹಾಕಲಾಗಿತ್ತು. ಅಂಗಡಿಗೆ ಬರುವ ಅಂಗಡಿಯ ಮಾಲೀಕರು ಲೆಕ್ಕದ ಪುಸ್ತಕ, ಪೆನ್ನು ಅಥವಾ ಜೈನ್ ಕ್ಯಾಲೆಂಡರ್ ಖರೀದಿ ಮಾಡುತ್ತಾರೆ. ಜನರಿಂದ ಜನರಿಗೆ ಬಾಯಿ ಮಾತಿನಿಂದ ಅಂಗಡಿಗೆ ಜನಪ್ರಿಯತೆ ಬಂದಿದೆ. ಬೆಂಗಳೂರಷ್ಟೇ ಅಲ್ಲದೆ, ದೇಶದ ವಿವಿಧೆಡೆಯಿಂದಲೂ ಜನರು ಪುಸ್ತಕ ಖರೀದಿಗೆ ಇಲ್ಲಿಗೆ ಬರುತ್ತಾರೆ ಎಂದು ಅಂಗಡಿಯ ಮಾಲೀಕ ಜೆ ಉತ್ತಮ್ ಚಂದ್ ಅವರು ಹೇಳಿದ್ದಾರೆ. 

ಪುಸ್ತಕ ಖರೀದಿಗೆ ಬಂದ ಆಭರಣ ಉದ್ಯಮಿ ಧರ್ಮಿಂದರ್ ಗಡಿಯಾ ಅವರು ಮಾತನಾಡಿ, ಕಳೆದ 15 ವರ್ಷಗಳಿಂದ ಲೆಡ್ಜರ್, ಕ್ಯಾಲೆಂಡರ್ ಮತ್ತು ಡೇ ಬುಕ್ ಅನ್ನು ಇಲ್ಲಿಂದ ಖರೀದಿಸುತ್ತಿದ್ದೇನೆ. ಇವುಗಳನ್ನು ಪೂಜೆಯ ಸಮಯದಲ್ಲಿ ಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಮುಂದೆ ಇಡುತ್ತೇವೆ. ಇಲ್ಲಿಂದ ಅವುಗಳನ್ನು ಖರೀದಿಸುವುದು ನನ್ನ ವ್ಯಾಪಾರವನ್ನು ಹೆಚ್ಚಿಸುತ್ತದೆ ಎಂಬುದು ನನ್ನ ನಂಬಿಕೆ, ನನ್ನ ತಂದೆಯೂ ಇದನ್ನು ಮಾಡುತ್ತಿದ್ದರು ಎಂದು ಹೇಳಿದ್ದಾರೆ. 

ಮಾಗಡಿ ರಸ್ತೆಯಲ್ಲಿ ಸಿಲ್ವರ್ ಮ್ಯಾಜಿಕ್ ಪ್ರಾಡಕ್ಟ್ಸ್ ಎಂಬ ಗಿಫ್ಟ್ ಶಾಪ್ ನಡೆಯುತ್ತಿರುವ ಪಂಕಜ್ ಎಂ ಜೈನ್ ಎಂಬುವವರು ಮಾತನಾಡಿ, “ನಾನು ಈ ಅಂಗಡಿಯಿಂದ ಲೆಕ್ಕ ಪುಸ್ತಕಗಳನ್ನು ಖರೀದಿಸಿ ದೇವರ ಮುಂದೆ ಇಟ್ಟು ಪೂಜೆ ಮಾಡುತ್ತೇನೆ. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com