ಹೆಡ್ ಬುಷ್ ವಿವಾದ: ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ವಿರುದ್ಧ ಮುಗಿಬಿದ್ದ ನೆಟ್ವಿಗರು! ಅಷ್ಟಕ್ಕೂ ಆಗಿದ್ದೇನು?

ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ 'ಹೆಡ್ ಬುಷ್' ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಂತೆಯೇ, ಇದರಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂಬ ವಿವಾದಮೆತ್ತಿಕೊಂಡಿದೆ.
ಸಚಿವ ಸುನೀಲ್ ಕುಮಾರ್
ಸಚಿವ ಸುನೀಲ್ ಕುಮಾರ್

ಬೆಂಗಳೂರು: ಡಾಲಿ ಧನಂಜಯ್ ನಿರ್ಮಾಣ ಹಾಗೂ ಅಭಿನಯದ 'ಹೆಡ್ ಬುಷ್' ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಂತೆಯೇ, ಇದರಲ್ಲಿ ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂಬ ವಿವಾದ
ಮೆತ್ತಿಕೊಂಡಿದೆ.

ಈ ಸಿನಿಮಾಕ್ಕೆ ಪತ್ರಕರ್ತ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಶೂನ್ಯ ಅವರು ನಿರ್ದೇಶಿಸಿದ್ದಾರೆ. ವೀರಗಾಸೆ ಕಲಾವಿದನಿಗೆ ಅಪಮಾನ ಮಾಡಿರುವ ದೃಶ್ಯವನ್ನು ತೆಗೆಯುವಂತೆ ಒತ್ತಾಯಿಸಿ ಈ ಸಮುದಾಯದವರು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಇಂದು ಕೂಡಾ ಪ್ರತಿಭಟನೆ ನಡೆಸಿದರು. ಆದರೆ, ಕರಗದ ಬಗ್ಗೆ ವಿವಾದಿತ ಸಂಭಾಷಣೆಗೆ ಬೀಪ್ ಹಾಕಲು ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಮಧ್ಯೆ ಹೆಡ್ ಬುಷ್ ವಿವಾದ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಟ್ವೀಟ್ ಮಾಡುತ್ತಿದ್ದಂತೆಯೇ ಇದು ರಾಜಕೀಯ ಸ್ವರೂಪ ಪಡೆದುಕೊಂಡಿದೆ.ಒಂದೊಮ್ಮೆ ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆಗೆ ಅಪಮಾನವಾದರೆ ನಿರ್ಮಾಪಕರು ಹಾಗೂ ನಿರ್ದೇಶಕರು ಮರು ಚಿಂತನೆ ನಡೆಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.

ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನವಾಗಿದೆ ಎಂಬ ಚರ್ಚೆ ಮಾಧ್ಯಮ ಹಾಗೂ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೀರಗಾಸೆ ಕನ್ನಡದ ಹೆಮ್ಮೆಯ ಜಾನಪದ ಪರಂಪರೆ. ಚಲನಚಿತ್ರವೂ ಸೇರಿದಂತೆ ಯಾವುದೇ ಮನೋರಂಜನಾ ಮಾಧ್ಯಮದಿಂದ ಜಾನಪದ ಸಂಸ್ಕ್ರತಿಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದಿದ್ದಾರೆ. 

ಸಚಿವರು ಈ ರೀತಿ ಟ್ವೀಟ್ ಮಾಡುತ್ತಿದ್ದಂತೆಯೇ, ಟ್ವಿಟಿಗರು ಅವರ ಮೇಲೆ ಮುಗಿ ಬಿದಿದ್ದಾರೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಮಾಸಾಶನ ಕೊಟ್ಟಿದ್ದೀರಿ. ವೀರಗಾಸೆ, ಕಂಸಾಳೆ ಹೀಗೆ ಎಲ್ಲ ಜಾನಪದ ಪ್ರಕಾರದ ಕಲಾವಿದರಿಗೂ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸಿದ್ದಾರೆ.

ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com