ಬೆಂಗಳೂರಿನ ರಸ್ತೆಗುಂಡಿಗೆ ಮತ್ತೊಂದು ಬಲಿ: ಗುಂಡಿ ತಪ್ಪಿಸಲು ಹೋಗಿ ಕಾರು ಪಲ್ಟಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಹಾಳಾದ, ಹೊಂಡಬಿದ್ದ ರಸ್ತೆಗುಂಡಿಗಳನ್ನು ಮುಚ್ಚಲು ನವೆಂಬರ್ 15ರ ಗಡುವು ನೀಡಲಾಗಿದ್ದರೂ ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿತೆಗೆದುಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಾಳಾದ, ಹೊಂಡಬಿದ್ದ ರಸ್ತೆಗುಂಡಿಗಳನ್ನು ಮುಚ್ಚಲು ನವೆಂಬರ್ 15ರ ಗಡುವು ನೀಡಲಾಗಿದ್ದರೂ ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿತೆಗೆದುಕೊಂಡಿದೆ.

ಬೆಂಗಳೂರಿನ ರಸ್ತೆಗಳ ಸಮಪರ್ಕ ನಿರ್ವಹಣೆ ಇಲ್ಲದ ಕಾರಣ, ಅಪಘಾತಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಾಯಿ-ಮಗಳು ರಸ್ತೆಗುಂಡಿ ತಪ್ಪಿಸಲು ಹೋಗಿ ಬಿದ್ದು ತಾಯಿಯ ಮೇಲೆ ಕೆಎಸ್ ಆರ್ ಟಿಸಿ ಬಸ್ಸು ಹರಿದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.

ಇದೀಗ ಮತ್ತೊಂದು ಬಲಿ ಪಡೆದಿದೆ. ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ನಿನ್ನೆ ರಾತ್ರಿ ನಡೆದ ದುರ್ಘಟನೆಯಲ್ಲಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಕಾರೊಂದು ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ಮುಂದೆ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿವೆ. ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. 

ಯುವಕನಿಗೆ ಗಾಯ: ಇದೇ ಸ್ಥಳದಲ್ಲಿ ಸ್ವಲ್ಪ ಹೊತ್ತಿನ ನಂತರ ಬೈಕಿನಲ್ಲಿ ಸವಾರಿ ಮಾಡಿದ ಯುವಕನೊಬ್ಬ ಬಿದ್ದು ಸಣ್ಣಪುಟ್ಟ ಗಾಯಗೊಂಡಿದ್ದಾರೆ. 

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗುಂಡಿ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸುವುದಾಗಿ ಹೇಳಿದೆ. ಈ ಮಧ್ಯೆ ಇನ್ನೆಷ್ಟು ಜೀವ ಬಲಿಯಾಗಬೇಕೋ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com