ಭಾರತದ ಏರೋಸ್ಪೇಸ್ ಸಾಧನೆಯಲ್ಲಿ ಕರ್ನಾಟಕದ ಕೊಡುಗೆ ಮಹತ್ತರ ಹೇಗೆ?

ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉದ್ಯಮದಲ್ಲಿ ರಾಜ್ಯದಲ್ಲಿ 60,000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು 70,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಆ ಮೂಲಕ ಕರ್ನಾಟಕವನ್ನು ಪ್ರಮುಖ ರಕ್ಷಣಾ ಉತ್ಪಾದನಾ ತಾಣವನ್ನಾಗಿಸುವ ಗುರಿ ಹೊಂದಿದೆ.
ಯುದ್ಧವಿಮಾನ
ಯುದ್ಧವಿಮಾನ

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬಲಿಷ್ಠ ಶಕ್ತಿಯಾಗಿ ರೂಪುಗೊಳ್ಳುತ್ತಿದೆ. ಭಾರತದ ಉತ್ಪಾದನಾ ವಲಯದಲ್ಲೂ ಅಪಾರ ಹೆಚ್ಚಳವಾಗುತ್ತಿದ್ದು, ಭಾರತ ಇತ್ತೀಚೆಗೆ ವಿದೇಶೀ ರಫ್ತನ್ನೂ ಹೇರಳವಾಗಿ ಹೆಚ್ಚಿಸಿದೆ.

ಪ್ರಸ್ತುತ ಕರ್ನಾಟಕ ಭಾರತದ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಭಾರತದ 25%ದಷ್ಟು ವೈಮಾನಿಕ ಮತ್ತು ಏರೋಸ್ಪೇಸ್ ಉತ್ಪನ್ನಗಳನ್ನು ಕರ್ನಾಟಕದಲ್ಲೇ ಉತ್ಪಾದಿಸಲಾಗುತ್ತದೆ. ಭಾರತದ 40% ಇಲೆಕ್ಟ್ರಾನಿಕ್ಸ್ ವ್ಯವಸ್ಥೆ ರಾಜ್ಯದಲ್ಲೇ ಉತ್ಪಾದನೆಯಾಗುತ್ತಿದ್ದು, ಭಾರತದ 65% ಏರೋಸ್ಪೇಸ್ ಸಂಬಂಧಿ ರಫ್ತು ಕರ್ನಾಟಕದಿಂದ ಆಗುತ್ತಿದೆ. 2013ರಲ್ಲಿ ಕರ್ನಾಟಕ ಭಾರತದಲ್ಲೇ ಪ್ರಥಮ ಬಾರಿಗೆ ವೈಮಾನಿಕ ಕಾರ್ಯತಂತ್ರವನ್ನು ಜಾರಿಗೆ ತಂದಿದ್ದು, ಅದು 2022ರವರೆಗೂ ಜಾರಿಯಲ್ಲಿತ್ತು. ಕರ್ನಾಟಕ (2022-27) ಅವಧಿಗೆ ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ಜಾರಿಗೆ ತಂದಿದ್ದು, ಇದು ಏರೋಸ್ಪೇಸ್ ಮತ್ತು ರಕ್ಷಣಾ ಸಂಬಂಧಿ ಉತ್ಪಾದನಾ ವಲಯಗಳಿಗೆ ಕರ್ನಾಟಕವನ್ನು ಪ್ರಥಮ ಆಯ್ಕೆಯನ್ನಾಗಿಸುವ ಗುರಿ ಹೊಂದಿದೆ. ಈ ನೀತಿಯಡಿ ಕರ್ನಾಟಕ ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಹಾಗೂ ಚಾಮರಾಜನಗರಗಳಲ್ಲಿ ಐದು ಏರೋಸ್ಪೇಸ್ ಮತ್ತು ರಕ್ಷಣಾ ವಲಯಗಳನ್ನು ಸ್ಥಾಪಿಸಲಿದೆ.

ನೂತನ ಏರೋಸ್ಪೇಸ್ ಮತ್ತು ರಕ್ಷಣಾ ನೀತಿ ಮುಂದಿನ ಐದು ವರ್ಷಗಳಲ್ಲಿ ರಕ್ಷಣಾ ಉದ್ಯಮದಲ್ಲಿ ರಾಜ್ಯದಲ್ಲಿ 60,000 ಕೋಟಿ ರೂಪಾಯಿಗಳ ಹೂಡಿಕೆ ಮತ್ತು 70,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ಆ ಮೂಲಕ ಕರ್ನಾಟಕವನ್ನು ಪ್ರಮುಖ ರಕ್ಷಣಾ ಉತ್ಪಾದನಾ ತಾಣವನ್ನಾಗಿಸುವ ಗುರಿ ಹೊಂದಿದೆ. ನೂತನ ನೀತಿ ಭಾರತೀಯ ಮತ್ತು ವಿದೇಶೀ ರಫ್ತಿನ ಬಾಹ್ಯಾಕಾಶ ಉತ್ಪನ್ನಗಳ ನಿರ್ವಹಣೆ, ದುರಸ್ತಿ, ಹಾಗೂ ಕೂಲಂಕಷ ಪರಿಶೀಲನೆಯನ್ನು ಒಳಗೊಂಡಿದೆ.

ಈ ನೂತನ ನೀತಿ ಡಿಫೆನ್ಸ್ ಟೆಸ್ಟಿಂಗ್ ಇನ್ಫ್ರಾಸ್ಟ್ರಕ್ಚರ್ (ಡಿಎಫ್ಐ) ಸ್ಥಾಪನೆಗೂ ಹೆಚ್ಚಿನ ಒತ್ತು ನೀಡುತ್ತದೆ. ಯಾಕೆಂದರೆ ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಉತ್ಪಾದನೆಗೆ ಎದುರಾಗುವ ಪ್ರಮುಖ ತೊಡಕೆಂದರೆ ಮೂಲಭೂತ ಪರೀಕ್ಷಾ ವ್ಯವಸ್ಥೆಯ ಕೊರತೆ. ಡಿಟಿಐಗಳು ಖಾಸಗಿ ವಲಯದ ವತಿಯಿಂದ, ಸರ್ಕಾರದ ಸಹಾಯದಿಂದ ಸ್ಥಾಪಿಸಲ್ಪಡುತ್ತವೆ.

ಕರ್ನಾಟಕ ಸರ್ಕಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲಿ, 400 ಹೆಕ್ಟೇರ್ ಪ್ರದೇಶದಲ್ಲಿ ಒಂದು ಹೈಟೆಕ್ ಏರೋಸ್ಪೇಸ್ ಮತ್ತು ರಕ್ಷಣಾ ಪಾರ್ಕ್ ಸ್ಥಾಪಿಸಲಾಗಿದೆ. ಈ ಪಾರ್ಕ್ 102 ಹೆಕ್ಟೇರ್ ಭೂಮಿಯಲ್ಲಿ ಏರೋಸ್ಪೇಸ್ ವಿಶೇಷ ವಿತ್ತ ವಲಯವನ್ನೂ ಒಳಗೊಂಡಿದೆ. ಕರ್ನಾಟಕ ಮೂಲದ ನಿಖರ ಉತ್ಪಾದನಾ ಸಂಸ್ಥೆ ಆಯ್ಕಸ್ ಗ್ಲೋಬಲ್ ಭಾರತದ ಪ್ರಥಮ ಖಾಸಗಿ ಏರೋಸ್ಪೇಸ್ ವಿಶೇಷ ವಿತ್ತ ವಲಯವನ್ನು ಬೆಳಗಾವಿಯಲ್ಲಿ ಸ್ಥಾಪಿಸಿದೆ.

ಭಾರತದ ವೈಮಾನಿಕ ಕ್ಷೇತ್ರಕ್ಕೂ ಕರ್ನಾಟಕವೇ ಕೇಂದ್ರವಾಗಿರಲಿದೆ ಎನ್ನಲಾಗುತ್ತಿದೆ. ಹಲವಾರು ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಘಟಕಗಳು ರಾಜ್ಯದಲ್ಲಿ ನೆಲೆಯಾಗಿವೆ. ಕರ್ನಾಟಕ ಸರ್ಕಾರವೂ ಸಹ ರಾಜ್ಯವನ್ನು ಐಟಿ, ವಾಹನ, ಉಕ್ಕು, ಹಾಗೂ ಏರೋಸ್ಪೇಸ್ ಸೇರಿದಂತೆ ವಿವಿಧ ವಲಯಗಳಲ್ಲಿನ ಹೂಡಿಕೆಗೆ ಆದ್ಯತೆಯ ರಾಜ್ಯವನ್ನಾಗಿಸಲು ಪ್ರಯತ್ನಿಸುತ್ತಿದೆ.

ಕರ್ನಾಟಕದಲ್ಲಿ ಉದ್ಯಮಗಳಿಗಾಗಿ ಸಮತೋಲಿತ ವ್ಯವಸ್ಥೆಯಿದ್ದು, ಉತ್ತಮ ಉತ್ಪನ್ನಗಳು ಮತ್ತು ಸೇವೆಯನ್ನು ಒದಗಿಸುತ್ತವೆ. ಕರ್ನಾಟಕದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ, ಎಚ್ಎಎಲ್, ಬಿಎಚ್ಇಎಲ್, ಎನ್ಎಎಲ್, ಜಿಟಿಆರ್‌ಇ, ಡಿಆರ್‌ಡಿಓ, ಬಿಇಎಂಎಲ್, ಇಸ್ರೋ, ಎಡಿಎ ಹಾಗೂ ಎಡಿಇ ಸೇರಿದಂತೆ ಇತರ ಸಂಸ್ಥೆಗಳೂ ಕಾರ್ಯ ನಿರ್ವಹಿಸುತ್ತಿವೆ. ಇದರಿಂದಾಗಿ ರಾಜ್ಯ ಭಾರತದ ಪ್ರಮುಖ ಏರೋಸ್ಪೇಸ್ ಉದ್ಯಮ ತಾಣವಾಗಿ ರೂಪುಗೊಂಡಿದೆ. ಅವುಗಳಲ್ಲಿ ಸಾಕಷ್ಟು ಬೃಹತ್ ಸಂಸ್ಥೆಗಳ ಪ್ರಧಾನ ಕಚೇರಿಗಳು ಬೆಂಗಳೂರಿನಲ್ಲಿವೆ. ಹಲವು ಸ್ಟಾರ್ಟಪ್‌ಗಳ ಕಚೇರಿಗಳೂ ಬೆಂಗಳೂರಿನಲ್ಲಿದ್ದರೆ, ಇನ್ನೂ ಹಲವು ಪ್ರಮುಖ ಉತ್ಪಾದನಾ ಸಂಸ್ಥೆಗಳು ಬೆಂಗಳೂರಿನ ಸನಿಹದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿವೆ. ಅದರೊಡನೆ ಹಲವು ಶೈಕ್ಷಣಿಕ, ವೈಜ್ಞಾನಿಕ, ಹಾಗೂ ತಾಂತ್ರಿಕ ಸಂಸ್ಥೆಗಳು ಪ್ರಸ್ತುತ ಐಟಿ, ಇಂಜಿನಿಯರಿಂಗ್ ಹಾಗೂ ವಿನ್ಯಾಸ ಕೌಶಲಗಳನ್ನು ಹೆಚ್ಚಿಸುತ್ತಿದ್ದು, ಆ ಮೂಲಕ ಏರೋಸ್ಪೇಸ್ ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಮಾಡುತ್ತಿವೆ.

ಭಾರತದ ಏರೋಸ್ಪೇಸ್ ಸಾಧನೆಯಲ್ಲಿ ಕರ್ನಾಟಕ ಹೇಗೆ ಮಹತ್ತರ ಕೊಡುಗೆ ನೀಡಿದೆ?

  • ಕರ್ನಾಟಕದಲ್ಲಿ ಬೃಹತ್ ಪ್ರಮಾಣದ ರಕ್ಷಣಾ ಪಿಎಸ್‌ಯುಗಳಿವೆ. ಅದರೊಡನೆ ವಿಜ್ಞಾನ ಮತ್ತು ತಂತ್ರಜ್ಞಾನದ 2,000 ಎಸ್ಎಂಇಗಳ ಜಾಲವಿದ್ದು, ಬಾಹ್ಯಾಕಾಶದಲ್ಲಿ ಪರಿಣತಿ ಸಾಧಿಸಿರುವ ಡಿಪಿಎಸ್‌ಯುಗಳಿಗೆ ಉಪಗುತ್ತಿಗೆ ನೀಡಲಾಗುತ್ತಿದೆ.
  • ಈ ಸಂಸ್ಥೆಗಳಿಗೆ ಇಂಜಿನಿಯರಿಂಗ್, ವಿನ್ಯಾಸ, ಐಟಿ ಸಾಮರ್ಥ್ಯವಿದ್ದು, ಜೊತೆಗೆ ಉತ್ಪಾದನಾ ಪರಿಣತಿಯೂ ಇದೆ.
  • ಅದರೊಡನೆ ಪೂರಕ ಸೇವಾ ಸಾಮರ್ಥ್ಯ, ಕಾರ್ಯಕ್ಷೇತ್ರದ ನಿರ್ವಹಣೆ, ಹಾಗೂ ಪೂರಕ ಬೆಂಬಲ ಉಪಕರಣಗಳ ಉತ್ಪಾದನೆಯೂ ರಾಜ್ಯದಲ್ಲಿ ನಡೆಯುತ್ತದೆ. ಕರ್ನಾಟಕ ಭಾರತದಲ್ಲೇ ಅತ್ಯಧಿಕ ಇಂಜಿನಿಯರಿಂಗ್ ಪದವೀಧರರನ್ನು ಹೊಂದಿದ್ದು, ಈ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನೂ ಒದಗಿಸುತ್ತದೆ.
  • ಅದರೊಡನೆ ಕರ್ನಾಟಕದಲ್ಲಿ ಅತ್ಯುತ್ತಮ ಸಂವಹನಾ ಜಾಲ, ಉತ್ತಮ ತಾಣಗಳು, ಗ್ರಾಹಕರಿಗೆ ಸನಿಹದಲ್ಲಿರುವಿಕೆ ಹಾಗೂ ಸರ್ಕಾರದ ಸಹಾಯವೂ ಇತರ ಗಣನೀಯ ಅಂಶಗಳಾಗಿವೆ.
  • ಕರ್ನಾಟಕದಲ್ಲಿ ಹಳೆಯ ಏರೋಸ್ಪೇಸ್ ಮತ್ತು ಇಂಜಿನಿಯರಿಂಗ್ ಉದ್ದಿಮೆಗಳಿಂದ ರೂಪಿತವಾಗಿರುವ ಪೂರೈಕೆ ಜಾಲ, ಹೂಡಿಕೆದಾರ ಸ್ನೇಹಿ ಸರ್ಕಾರ ಮತ್ತು ಸುವ್ಯವಸ್ಥಿತ ಕಾರ್ಯವಿಧಾನಗಳು ಹಾಗೂ ಕಂಪನಿಗಳ ಸ್ಥಾಪನೆಗೆ ಏಕ ಗವಾಕ್ಷಿ ಅನುಮತಿ ವ್ಯವಸ್ಥೆ ಇರುವುದರಿಂದ ಕರ್ನಾಟಕ ಉದ್ದಿಮೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.
  • ಏರೋಸ್ಪೇಸ್ ಸಂಸ್ಥೆಗಳಿಗೂ ಕರ್ನಾಟಕ ಉತ್ಪಾದನಾ ಮತ್ತು ನಿರ್ವಹಣಾ ತಾಣವಾಗಬೇಕೆಂಬ ಬಯಕೆಯಿದೆ. ಆದ್ದರಿಂದ ಅವು ವಿದೇಶೀ ಕಂಪನಿಗಳೊಡನೆ ಜಂಟಿ ಸಹಯೋಗ ಹೊಂದಿ, ಸಂಶೋಧನಾ ಮತ್ತು ಅಭಿವೃದ್ಧಿ ವ್ಯವಸ್ಥೆಗಳನ್ನು ಸ್ಥಾಪಿಸಿ, ಜಗತ್ತಿನ ಪ್ರಮುಖ ಏರೋಸ್ಪೇಸ್ ಸಂಸ್ಥೆಗಳಿಗೆ ಅಗತ್ಯ ವಸ್ತುಗಳು, ಲ್ಯಾಂಡಿಂಗ್ ಗೇರ್, ಐಟಿ ಡಿಸೈನ್ ಹಾಗೂ ಇತರ ಸೇವೆಗಳನ್ನು ಒದಗಿಸುತ್ತವೆ. ರಾಜ್ಯದ ಈ ಮೇಲುಗೈಯನ್ನು ಉಪಯೋಗಿಸಲು ವಿಶೇಷ ವಿತ್ತ ವಲಯಗಳನ್ನೂ ಸ್ಥಾಪಿಸಲಾಗುತ್ತಿದೆ.

ಉತ್ಪಾದನಾ ಕೇಂದ್ರವಾಗಿ ಕರ್ನಾಟಕ

ಕರ್ನಾಟಕದಲ್ಲಿ ಎಚ್ಎಎಲ್ ಸ್ಥಾಪನೆಯಾದ ಬಳಿಕ, ಕರ್ನಾಟಕ ಭಾರತೀಯ ಸೇನಾಪಡೆಗಳಿಗಾಗಿ ಮತ್ತು ನಾಗರಿಕ ವಿಮಾನಯಾನ ಉದ್ದೇಶಗಳಿಗಾಗಿ ಆಧುನಿಕ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ತಯಾರಿಕೆಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದೆ.

ಕ್ವೆಸ್ಟ್ ಗ್ಲೋಬಲ್ ಸಂಸ್ಥೆಯು ಕರ್ನಾಟಕದ ಬೆಳಗಾವಿಯಲ್ಲಿ ಉತ್ಪಾದನಾ ಮತ್ತು ನಿಖರ ಇಂಜಿನಿಯರಿಂಗ್ ವಿಶೇಷ ವಿತ್ತ ವಲಯವನ್ನೂ ಸ್ಥಾಪಿಸಿದೆ.

ಎಂಆರ್‌ಓ ಹಬ್ ಆಗಿ ಕರ್ನಾಟಕ

ಎಂಆರ್‌ಓ ಮಾರುಕಟ್ಟೆಯಲ್ಲಿ ಸಿಂಗಾಪುರ ಸೇರಿದಂತೆ ಇತರ ಆಗ್ನೇಯ ಏಷ್ಯಾ ರಾಷ್ಟ್ರಗಳು ಭಾರತದೊಡನೆ ಸ್ಪರ್ಧಿಸುತ್ತಿವೆ. ಈ ಸಂದರ್ಭದಲ್ಲೇ, ಬೆಂಗಳೂರಿನಲ್ಲಿ ಎಂಆರ್‌ಓ ವಲಯದಲ್ಲಿ ಹೂಡಿಕೆಯೂ ಸಹ ಹೆಚ್ಚಾಗಿದೆ. ಬೃಹತ್ ಎಂಆರ್‌ಓ ಸಂಸ್ಥೆಗಳೂ ಕರ್ನಾಟಕಕ್ಕೆ ಪ್ರವೇಶಿಸುತ್ತಿವೆ.

ಅದರೊಡನೆ, ಕರ್ನಾಟಕ ಬಾಹ್ಯಾಕಾಶ ವಲಯಕ್ಕೆ ಸಂಬಂಧಿಸಿದ ಐಟಿ ವಿನ್ಯಾಸ ಮತ್ತು ಇಂಜಿನಿಯರಿಂಗ್ ಸೇವೆಗಳಿಗೆ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ.

ಭಾರತದ ಸಿಲಿಕಾನ್ ವ್ಯಾಲಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಈಗ ಆಧುನಿಕ ಐಟಿ ಹಾಗೂ ಇಂಜಿನಿಯರಿಂಗ್ ಸೇವೆಗಳ ಸಾಕಷ್ಟು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಾದೇಶಿಕ ಸಾಫ್ಟ್‌ವೇರ್ ದೈತ್ಯ ಸಂಸ್ಥೆಗಳಾದ ಎಚ್‌ಸಿಎಲ್, ಇನ್ಫೋಸಿಸ್, ಹಾಗೂ ವಿಪ್ರೋಗಳು ಮೊದಲಿನಿಂದಲೂ ಅಂತಾರಾಷ್ಟ್ರೀಯ ವೈಮಾನಿಕ ಸಂಸ್ಥೆಗಳಿಗೆ ಮತ್ತು ವೈಮಾನಿಕ ಉದ್ದಿಮೆಗಳಿಗೆ ಸೇವೆ ಒದಗಿಸುತ್ತಾ ಬಂದಿವೆ. ಬೆಂಗಳೂರು ಪ್ರಸ್ತುತ ಹಲವು ವೈಮಾನಿಕ ಸಂಸ್ಥೆಗಳಿಗೆ ತಂತ್ರಜ್ಞಾನ ಮತ್ತು ಇಂಜಿನಿಯರಿಂಗ್ ಸೇವೆ ಒದಗಿಸುವ ಕೇಂದ್ರಗಳ ತಾಣವಾಗಿದೆ.

ಏರೋಸ್ಪೇಸ್ ಕ್ಷೇತ್ರದ ಸಿಮ್ಯುಲೇಶನ್‌, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಕರ್ನಾಟಕವಾಗಿದೆ. ರಾಜ್ಯದಲ್ಲಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಪರಿಣತಿ ಹೊಂದಿರುವ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಲಭ್ಯತೆಯ ಕಾರಣದಿಂದ ಸಹಜವಾಗೇ ಈ ಕ್ಷೇತ್ರದಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ.

ಬೆಂಗಳೂರು ಕೇಂದ್ರಿತವಾಗಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಿಮ್ಯುಲೇಶನ್‌ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನದ ಸಂಶೋಧನಾ ವ್ಯವಸ್ಥೆ ಹೊಂದಿವೆ. ಹಲವು ಅತ್ಯುನ್ನತ ವಿದೇಶೀ ಏರೋಸ್ಪೇಸ್ ಸಂಸ್ಥೆಗಳೂ ಸಹ ಭಾರತೀಯ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿ, ಕರ್ನಾಟಕದಲ್ಲಿ ತಮ್ಮ ಕೇಂದ್ರ ಸ್ಥಾಪಿಸಿ, ಸಿಮ್ಯುಲೇಶನ್‌ ತಂತ್ರಜ್ಞಾನ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆ ಉತ್ತಮಪಡಿಸಲು ಪ್ರಯತ್ನಿಸುತ್ತಿವೆ. ಉದಾಹರಣೆಗೆ ಹನಿವೆಲ್ ಸಂಸ್ಥೆ ಎರಡು ಆರ್&ಡಿ ಘಟಕಗಳನ್ನು ಹೊಂದಿದೆ.

ಕರ್ನಾಟಕದಲ್ಲಿ ದೇಶದೆಲ್ಲೆಡೆಯಿಂದ ಮತ್ತು ವಿದೇಶೀ ಹೂಡಿಕೆ

ಬೋಯಿಂಗ್ ವಿಮಾನಯಾನ ಸಂಸ್ಥೆ ಮಾರ್ಚ್ 2009ರಲ್ಲಿ ಬೋಯಿಂಗ್ ರಿಸರ್ಚ್ ಆ್ಯಂಡ್ ಟೆಕ್ನಾಲಜಿ ಇಂಡಿಯಾ ಕೇಂದ್ರವನ್ನು ಭಾರತೀಯ ಆರ್&ಡಿ ಸಂಸ್ಥೆಗಳೊಡನೆ ಆರಂಭಿಸಿತು. ಸರ್ಕಾರಿ ಸಂಸ್ಥೆಗಳು, ಖಾಸಗಿ ಆರ್&ಡಿ ಪೂರೈಕೆದಾರರು, ವಿಶ್ವವಿದ್ಯಾಲಯಗಳು, ಹಾಗೂ ಇರತ ಉದ್ಯಮಗಳು ಇದರಲ್ಲಿ ಭಾಗಿಯಾಗಿವೆ.

ಏರ್‌ಬಸ್ ವಿಮಾನದ ಉತ್ಪಾದಕ ಸಂಸ್ಥೆಯಾದ ಯುರೋಪಿಯನ್ ಏರೋನಾಟಿಕ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಕೋ (ಇಎಡಿಎಸ್) 2009ರಲ್ಲಿ ಬೆಂಗಳೂರಿನಲ್ಲಿ ತನ್ನ ಸಂಶೋಧನೆಯನ್ನು ಆರಂಭಿಸಿತು. ಅದಕ್ಕಾಗಿ ಬೆಂಗಳೂರಿನಲ್ಲಿ ಒಂದು ನಾವೀನ್ಯತಾ ಕೇಂದ್ರವನ್ನು ಸ್ಥಾಪಿಸಿತು. ಈ ಕೇಂದ್ರವು ಮುಂಬೈ, ಕಾನ್ಪುರ, ಹಾಗೂ ದೆಹಲಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗಳೊಡನೆ ಮತ್ತು ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಕೇಂದ್ರ (ಐಐಎಸ್‌ಸಿ) ಜೊತೆ ಸಹಯೋಗದೊಂದಿಗೆ ಸಿಮ್ಯುಲೇಟರ್‌ ಮತ್ತು ಸಾಫ್ಟ್‌ವೇರ್‌ಗಳನ್ನು ನಿರ್ಮಿಸುತ್ತಿದೆ.

ರೋಲ್ಸ್ ರಾಯ್ಸ್ ಹಾಗೂ ಎಚ್ಎಎಲ್ ಸಂಸ್ಥೆಗಳು ಒಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ಬೆಂಗಳೂರಿನಲ್ಲಿ ಉತ್ಪಾದನಾ ಸಂಸ್ಥೆಯನ್ನು ಸ್ಥಾಪಿಸಲಿವೆ. ಈ ನೂತನ ಕಂಪನಿಯು ರೋಲ್ಸ್ ರಾಯ್ಸ್ ಮತ್ತು ಎಚ್ಎಎಲ್ ಮಧ್ಯ 50:50 ಜಂಟಿ ಉದ್ಯಮವಾಗಿರಲಿದೆ.

ಹನಿವೆಲ್ ಸಂಸ್ಥೆ 50 ಮಿಲಿಯನ್ ಡಾಲರ್ ಮೊತ್ತದಲ್ಲಿ ಸಂಶೋಧನೆ, ಅಭಿವೃದ್ಧಿ ಹಾಗೂ ಇಂಜಿನಿಯರಿಂಗ್ ವ್ಯವಸ್ಥೆಯನ್ನು ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿರುವ ಓರಿಯಾನ್‌ನಲ್ಲಿ ಸ್ಥಾಪಿಸಿದೆ. ಈ ನೂತನ ಆರ್&ಡಿ ಸಂಕೀರ್ಣದಲ್ಲಿ ತರಬೇತಿ ಕೇಂದ್ರ, ಸಿಮ್ಯುಲೇಟರ್‌, ಹಾಗೂ ಪ್ರಯೋಗಾಲಯ, ವ್ಯವಸ್ಥೆ ಇದ್ದು, 3,000 ಜನರಿಗೆ ವ್ಯವಸ್ಥೆ ಹೊಂದಿದೆ.

ಎಚ್ಎಎಲ್ ಮತ್ತು ಪ್ರಮುಖ ವಾಣಿಜ್ಯ ಜೆಟ್ ಇಂಜಿನ್ ಉತ್ಪಾದಕನಾದ ಸ್ನೆಕ್ಮಾ ಸಂಸ್ಥೆಗಳ ಜಂಟಿ ಉದ್ಯಮ ರೂಪುಗೊಂಡಿದ್ದು, ವಿಮಾನಗಳ ಜೆಟ್ ಇಂಜಿನ್ ಬಿಡಿಭಾಗಗಳನ್ನು ಉತ್ಪಾದಿಸುವ ಯೋಜನೆ ಹೊಂದಿವೆ.

ವಿಮಾನದ ಇಂಜಿನ್‌ಗಳ ಸಿಮ್ಯುಲೇಶನ್‌ ಪರೀಕ್ಷೆಗೆ ಎನ್ಎಎಲ್ ವಿಂಡ್ ಟನೆಲ್ ವ್ಯವಸ್ಥೆಯು ಪ್ರಾಥಮಿಕ ಪರೀಕ್ಷಾ ವ್ಯವಸ್ಥೆಯಾಗಿದೆ.

ವೈಮಾನಿಕ ಸಿಮ್ಯುಲೇಶನ್‌ ಉತ್ಪಾದನೆ ಮತ್ತು ತರಬೇತಿ ಸೇವೆಯಲ್ಲಿ ಜಾಗತಿಕ ನಾಯಕನಾಗಿರುವ ಸಿಎಇ ತನ್ನ ಭಾರತೀಯ ಪ್ರಧಾನ ಕಚೇರಿಯನ್ನು ಕರ್ನಾಟಕದಲ್ಲಿ ಸ್ಥಾಪಿಸಿದೆ. ಇದು‌ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲಿ ಸ್ಥಾಪಿತವಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸಿಎಇಯ ಏರ್‌ಬಸ್ ಎ320 ಹಾಗೂ ಬೋಯಿಂಗ್ 737 ಲೆವೆಲ್ ಡಿ ಫುಲ್ ಫ್ಲೈಟ್ ಸಿಮ್ಯುಲೇಟರ್‌ ಗಳನ್ನು ಪ್ರಮಾಣೀಕರಿಸಿದೆ.

2000 - 2008ರ ಮಧ್ಯ ಭಾರತ ಅತ್ಯಧಿಕ ಆರ್&ಡಿ ಹೂಡಿಕೆ ಮತ್ತು ಎರಡನೇ ಅತ್ಯಧಿಕ ಉತ್ಪಾದನಾ ಹೂಡಿಕೆ ಪಡೆದುಕೊಂಡಿತು. ಅದರಲ್ಲಿ ಸಿಂಹಪಾಲು ಕರ್ನಾಟಕದ್ದಾಗಿತ್ತು.

ಭವಿಷ್ಯದ ಮುನ್ನೋಟ

ಮುಂದಿನ ಇಪ್ಪತ್ತು ವರ್ಷಗಳಲ್ಲಿ ವೈಮಾನಿಕ ಉತ್ಪನ್ನಗಳ ಮಾರಾಟ 2 ಟ್ರಿಲಿಯನ್ ಡಾಲರ್‌ಗೂ ಹೆಚ್ಚು ಬೆಳೆಯುವ ಸಾಧ್ಯತೆಗಳಿವೆ. ಏಷ್ಯಾ ಪೆಸಿಫಿಕ್ ಪ್ರಾಂತ್ಯದ ಪಡೆಗಳ ಗಾತ್ರವೂ 2025ರಲ್ಲಿ ಮೂರು ಪಟ್ಟು ಹೆಚ್ಚಳವಾಗಲಿದೆ. ಆ ಮೂಲಕ ಮುಂದಿನ ಇಪ್ಪತ್ತು ವರ್ಷಗಳಲ್ಲಿ ಈ ಏರೋಸ್ಪೇಸ್ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುವ ಸಾಧ್ಯತೆಗಳಿವೆ.

ದೊಡ್ಡದಾದ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವ ಭಾರತದಲ್ಲಿ ಪ್ರಾದೇಶಿಕ ವೈಮಾನಿಕ ಸಾರಿಗೆಗೂ ಬೇಡಿಕೆ ಹೆಚ್ಚುತ್ತಿದೆ. ಅದರೊಡನೆ ರಕ್ಷಣಾ ಅಗತ್ಯಗಳಿಗೂ ವೈಮಾನಿಕ ಅಗತ್ಯ ಇರುವುದರಿಂದ ಪ್ರಮುಖ ವಿಮಾನ ಉತ್ಪಾದಕರು ಭಾರತವನ್ನು ಭವಿಷ್ಯದ ಮಾರುಕಟ್ಟೆ ಎಂದೇ ಪರಿಗಣಿಸಿದ್ದಾರೆ. ವಿಮಾನಗಳ ನಿರ್ವಹಣೆ ಮತ್ತು ದುರಸ್ತಿ ಸೇವೆಗಳೂ ಇದರಲ್ಲಿ ಸೇರಿವೆ. ಇದರೊಡನೆ ಕರ್ನಾಟಕ ತಾನು ಹೊಂದಿರುವ ಪ್ರತಿಭಾನ್ವಿತ ಇಂಜಿನಿಯರ್‌ಗಳು, ತರಬೇತಿ ಹೊಂದಿದ ಉದ್ಯೋಗಿಗಳು ಹಾಗೂ ಎಚ್ಎಎಲ್ ಹಾಗೂ ಬಿಇಎಲ್‌ಗಳು ಮತ್ತು ಪ್ರಾದೇಶಿಕ ಅನುಕೂಲವನ್ನು ತಾನು ಮೇಲುಗೈ ಸಾಧಿಸಲು ಬಳಸಬೇಕು.

ಭಾರತದ ಆಫ್‌ಸೆಟ್ ನೀತಿಯ ಪರಿಣಾಮವಾಗಿ, ಭಾರತದಲ್ಲಿ ಹೂಡಿಕೆಯಾದ 300 ಕೋಟಿ ರೂಪಾಯಿಗೂ ಹೆಚ್ಚಿನ ಹಣಕಾಸು ವ್ಯವಹಾರದ 30% ಮೊತ್ತ ಭಾರತದಲ್ಲೇ ಹೂಡಿಕೆಯಾಗಬೇಕಿದೆ. ಆದ್ದರಿಂದ ಏರೋಸ್ಪೇಸ್ ಸಹಯೋಗಿ ಸಂಸ್ಥೆಗಳು ಭಾರತದಲ್ಲಿ ಉಪಸಂಸ್ಥೆಗಳನ್ನು ಸ್ಥಾಪಿಸುವ, ಇತರ ಸಂಸ್ಥೆಗಳೊಡನೆ ಸೇರುವ, ಅಥವಾ ವಿನ್ಯಾಸ, ಉಪವ್ಯವಸ್ಥೆ, ಉಪಕರಣಗಳು ಮತ್ತು ಬಿಡಿಭಾಗಗಳ ಉತ್ಪಾದನೆಯನ್ನು ಭಾರತೀಯ ವೈಮಾನಿಕ ಉದ್ಯಮಕ್ಕೆ ಹೊರಗುತ್ತಿಗೆ ನೀಡುವ ಅನಿವಾರ್ಯತೆ ಎದುರಾಗುತ್ತದೆ.

ಈ‌ ನೀತಿ ಭಾರತದ ಏರೋಸ್ಪೇಸ್ ಎಂಆರ್‌ಓ ಅಭಿವೃದ್ಧಿಗೆ ಪೂರಕವಾಗಲಿದೆ. ಜಾಗತಿಕ ಏರೋಸ್ಪೇಸ್ ಸಂಸ್ಥೆಗಳು ಮತ್ತು ಅವುಗಳ ಪೂರೈಕೆದಾರರು ಭಾರತದಲ್ಲಿ ತಮ್ಮ ಕಾರ್ಯಾಚರಣೆ ಸ್ಥಾಪಿಸಲು ಸಹಕಾರಿಯಾಗಲಿವೆ. ಇಂತಹ ಆಫ್‌ಸೆಟ್ ನೀತಿ ಯಶಸ್ವಿಯಾಗಿ ಜಾರಿಗೆ ಬರುವುದರೊಂದಿಗೆ, ವಿದೇಶೀ ನೇರ ಬಂಡವಾಳ ಹೂಡಿಕೆ ನೀತಿಯೂ ದೇಶೀಯ ನಿರ್ಮಾಣದ ಗುರಿಗೆ ವೇಗ ನೀಡಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಸ್ಥಾಪನೆಯಾಗಿರುವ ಏರೋಸ್ಪೇಸ್ ಪಾರ್ಕ್ ಮೂರು ಹಂತಗಳಲ್ಲಿ ವಿಭಜಿಸಲ್ಪಟ್ಟಿದೆ.

ಮೊದಲ ಹಂತದಲ್ಲಿ (ಹೈಟೆಕ್, ಹಾರ್ಡ್‌ವೇರ್, ರಕ್ಷಣೆ, ಹಾಗೂ ಏರೋಸ್ಪೇಸ್ ಪಾರ್ಕ್), 1,000 ಎಕರೆ ಭೂಮಿಯನ್ನು ಎ&ಡಿಗಾಗಿ ಮೀಸಲಿಡಲಾಗಿದೆ. ಈ ಜಾಗದಲ್ಲಿ 252 ಎಕರೆ ವಿಶೇಷ ವಿತ್ತ ವಲಯಕ್ಕೆ ಒದಗಿಸಲಾಗಿದೆ.

ಇಂಟರ್ನ್ಯಾಷನಲ್ ಏರೋಸ್ಪೇಸ್ ಮ್ಯಾನುಫಾಕ್ಚರಿಂಗ್ ಲಿಮಿಟೆಡ್, ಬೋಯಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮ್ಯಾಗೆಲನ್ ಏರೋಸ್ಪೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಿಪ್ರೋ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಸಿಯೆಂಟ್ ಲಿಮಿಟೆಡ್, ಗುಡ್‌ರಿಚ್ ಏರೋಸ್ಪೇಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಸಾಫ್ರನ್-ಎಚ್ಎಎಲ್ ಸಂಸ್ಥೆಗಳು ರಾಜ್ಯದಲ್ಲಿ ಮಹತ್ವದ ಹೂಡಿಕೆ ಮಾಡಿವೆ.

ಎರಡನೇ ಹಂತದಲ್ಲಿ (ಹರಳೂರು - ಮುದ್ದೇನಹಳ್ಳಿ) ಒಟ್ಟು 1094.69 ಎಕರೆ ಭೂಮಿ ಒದಗಿಸಲಾಗಿದ್ದು, 150.87 ಎಕರೆ ಎ&ಡಿಗೆ ಮೀಸಲಿಡಲಾಗಿದೆ. ಮೂರನೇ ಹಂತಕ್ಕಾಗಿ ಭೂ ಸ್ವಾಧೀನ ಪ್ರಗತಿಯಲ್ಲಿದೆ.

ಬೆಳಗಾವಿಯಲ್ಲಿ ಕಾರ್ಯಾಚರಿಸುತ್ತಿರುವ ಏಕಸ್ ಸಂಸ್ಥೆ ಅಂತಾರಾಷ್ಟ್ರೀಯ ಏರೋಸ್ಪೇಸ್ ವ್ಯವಸ್ಥೆ ಹೊಂದಿದೆ. ವೈಮಾನಿಕ ದೈತ್ಯ ಸಂಸ್ಥೆಗಳಾದ ಬೋಯಿಂಗ್ ಮತ್ತು ಏರ್‌ಬಸ್ ಅದರ ಗ್ರಾಹಕರಾಗಿವೆ. ಏಕಸ್ ತನ್ನ ಭಾರತ, ಫ್ರಾನ್ಸ್ ಮತ್ತು ಅಮೆರಿಕಾದ ಉತ್ಪಾದನಾ ಘಟಕಗಳಲ್ಲಿ 4,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.

ಒಂದು ರಾಜ್ಯವಾಗಿ, ಕರ್ನಾಟಕದ ಬಳಿ ತನ್ನನ್ನು ಏರೋಸ್ಪೇಸ್ ಸಂಶೋಧನೆಯ ಮತ್ತು ಗುಣಮಟ್ಟದ ಕೇಂದ್ರವಾಗಿಸಲು ಬೇಕಾದ ಎಲ್ಲಾ ಅಗತ್ಯತೆಗಳೂ ಇವೆ. ಆ ಮೂಲಕ ಕರ್ನಾಟಕ ಹೆಲಿಕಾಪ್ಟರ್ ಹಾಗೂ ವಿಮಾನಗಳ ನಿರ್ವಹಣೆ, ಇಂಜಿನಿಯರಿಂಗ್, ಹಾಗೂ ಅಗತ್ಯ ವಸ್ತುಗಳ ಪೂರೈಕೆಯ ವಿಚಾರದಲ್ಲಿ ನಾಯಕನಾಗಬಹುದು. ಸ್ವದೇಶಿ ನಿರ್ಮಾಣ ಮತ್ತು ನೂತನ ತಂತ್ರಜ್ಞಾನಗಳನ್ನು ಪಡೆಯಲು ರಾಜ್ಯದ ನೂತನ ನೀತಿಗಳು ಸಹಕಾರಿಯಾಗಲಿವೆ.

ಭಾರತದ ಪ್ರಸ್ತುತ ಮಾರುಕಟ್ಟೆ 7 ಬಿಲಿಯನ್ ಡಾಲರ್ ವ್ಯಾಪ್ತಿ ಹೊಂದಿದ್ದು, ಇದು ಕಾಂಪೌಂಡ್ ಆ್ಯನುವಲ್ ಗ್ರೋತ್ ರೇಟ್ (ಸಿಎಜಿಆರ್) 7.5% ದರದಲ್ಲಿ ಅಭಿವೃದ್ಧಿ ಹೊಂದಿ, 2032ರ ವೇಳೆಗೆ 15 ಬಿಲಿಯನ್ ಡಾಲರ್ ಮಾರುಕಟ್ಟೆ ಗಾತ್ರ ಹೊಂದುವ ಸಾಧ್ಯತೆಗಳಿವೆ. ಭಾರತೀಯ ರಕ್ಷಣಾ ಇಲೆಕ್ಟ್ರಾನಿಕ್ ಉತ್ಪಾದಕರಿಗೆ ಇದು ಮೇಲುಗೈ ಒದಗಿಸಲಿದೆ. ರಕ್ಷಣಾ ಸಚಿವಾಲಯ ಈಗಾಗಲೇ ಭಾರತ 2027ರ ವೇಳೆಗೆ ಆಯುಧಗಳ ವಿಚಾರದಲ್ಲಿ 70% ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದ್ದು, ಉದ್ಯಮದ ನೂತನ ಸಂಸ್ಥೆಗಳಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ. ಇಂತಹ ಅವಕಾಶಗಳನ್ನು ಎರಡೂ ಕೈಗಳಿಂದ ಪಡೆದುಕೊಳ್ಳಲು ಕರ್ನಾಟಕ ಸನ್ನದ್ಧವಾಗಿದೆ.

<strong>ಗಿರೀಶ್ ಲಿಂಗಣ್ಣ </strong>
ಗಿರೀಶ್ ಲಿಂಗಣ್ಣ 

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com