ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ: ಪತ್ರಕರ್ತ ಪಿ ಸಾಯಿನಾಥ್ ರಿಂದ ‘ಬಸವ ಶ್ರೀ’ ಪ್ರಶಸ್ತಿ ವಾಪಸ್‌!

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಪೋಕ್ಸೋ ಪ್ರಕರಣದಡಿ ಬಂಧನಕ್ಕೀಡಾಗಿರುವ ಮುರುಘಾ ಶರಣರ ಪ್ರಕರಣದ ಹಿನ್ನಲೆಯಲ್ಲಿ ಖ್ಯಾತ ಹಿರಿಯ ಪತ್ರಕರ್ತ ಪಿ ಸಾಯಿನಾಥ್ ಅವರು ಮುರುಘಾ ಮಠದಿಂದ ಪಡೆದಿದ್ದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ.
ಪತ್ರಕರ್ತ ಪಿ ಸಾಯಿನಾಥ್
ಪತ್ರಕರ್ತ ಪಿ ಸಾಯಿನಾಥ್

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಪೋಕ್ಸೋ ಪ್ರಕರಣದಡಿ ಬಂಧನಕ್ಕೀಡಾಗಿರುವ ಮುರುಘಾ ಶರಣರ ಪ್ರಕರಣದ ಹಿನ್ನಲೆಯಲ್ಲಿ ಖ್ಯಾತ ಹಿರಿಯ ಪತ್ರಕರ್ತ ಪಿ ಸಾಯಿನಾಥ್ ಅವರು ಮುರುಘಾ ಮಠದಿಂದ ಪಡೆದಿದ್ದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ.

ಈ ಕುರಿತು ಸ್ವತಃ ಸಾಯಿನಾಥ್ ಅವರೇ ಮಾಹಿತಿ ನೀಡಿದ್ದು, ಚಿತ್ರದುರ್ಗದ ಮುರುಘಾಮಠವು ನೀಡಿದ್ದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್‌ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾಯಿನಾಥ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, 2017ರಲ್ಲಿ ಸಾಯಿನಾಥ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.

‘ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪಗಳ ಕುರಿತು ಮಾಧ್ಯಮಗಳ ವರದಿಯಿಂದ ತಿಳಿದು ವಿಚಲಿತನಾಗಿದ್ದೇನೆ ಮತ್ತು ಮನಸ್ಸಿಗೆ ನೋವಾಯಿತು. ಪೋಕ್ಸೊ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯದ ಅಡಿಯಲ್ಲಿ ಶರಣರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಮಕ್ಕಳ ಮೇಲೆ ದೌರ್ಜನ್ಯವೆಸಗಿರುವ ಕೃತ್ಯವನ್ನು ಖಂಡಿಸಲು ಶಬ್ದಗಳು ಸಾಕಾಗುವುದಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಪ್ರಕರಣದ ಸಂತ್ರಸ್ತ ಬಾಲಕಿಯರ ಜತೆ ನಾವಿದ್ದೇವೆ. ಇವರಿಗೆ ನ್ಯಾಯ ದೊರೆಯಬೇಕು ಎನ್ನುವ ಆಶಯದಿಂದ ಬಸವಶ್ರೀ ಪ್ರಶಸ್ತಿ ಮತ್ತು ಚೆಕ್‌ ಮೂಲಕ ನೀಡಲಾದ ₹5 ಲಕ್ಷ ಬಹುಮಾನವನ್ನು  ಹಿಂತಿರುಗಿಸುತ್ತಿದ್ದೇನೆ. ಈ ಪ್ರಕರಣವನ್ನು ಬಹಿರಂಗಪಡಿಸಲು ಶ್ರಮಿಸಿದ ಮೈಸೂರಿನ ಸರ್ಕಾರೇತರ ಸಂಸ್ಥೆಯಾದ ಒಡನಾಡಿ ಕಾರ್ಯ ಶ್ಲಾಘನೀಯ. ಕರ್ನಾಟಕ ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ಹಂತದಲ್ಲೂ ರಾಜಿಯಾಗದೆಯೇ ಸಮಗ್ರ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

12ನೇ ಶತಮಾನದ ಸಮಾಜ ಸುಧಾರಕ ಅಣ್ಣ ಬಸವಣ್ಣನ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 1997ರಿಂದ ಮುರುಘಾ ಮಠ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ, ಶಬಾನಾ ಆಜ್ಮಿ, ದಲೈಲಾಮಾ, ಬಲ್ಲಾದೀರ್ ಗದ್ದರ್, ಪಿ.ಟಿ ಉಷಾ ಅವರಿಗೆ ಬಸವಶ್ರೀ ಪ್ರಶಸ್ತಿ ಸಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com