ರಾಜ್ಯಾದ್ಯಂತ 4,244 ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ

ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ 4,244  ಹೊಸ ಅಂಗನವಾಡಿ ಕೇಂದ್ರಗಳನ್ನು ರಾಜ್ಯದ ಅನುದಾನದಲ್ಲಿ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಅಂಗನವಾಡಿ ಕೇಂದ್ರ
ಅಂಗನವಾಡಿ ಕೇಂದ್ರ

ಬೆಂಗಳೂರು: ರಾಜ್ಯದ ಸುಮಾರು 16 ಲಕ್ಷ ಕುಟುಂಬಗಳ ಮಕ್ಕಳ ಪೌಷ್ಟಿಕಾಂಶ ಮತ್ತು ಶಾಲಾ ಪೂರ್ವ ಶಿಕ್ಷಣದ ಪ್ರಯೋಜನ ಪಡೆಯುವ ಹಾಗೂ 8100 ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವಂತಹ 4244 ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ. ಇದಕ್ಕಾಗಿ 268.98 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲಿ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶ್ರೀ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ. 

ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ 4,244 ಹೊಸ ಅಂಗನವಾಡಿ ಕೇಂದ್ರಗಳನ್ನು ರಾಜ್ಯದ ಅನುದಾನದಲ್ಲಿ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 76ನೇ ವರ್ಷದ ಸ್ವಾತಂತ್ರೋತ್ಸವ ಭಾಷಣದಲ್ಲಿ, ರಾಜ್ಯದಲ್ಲಿ 4,050 ಹೊಸ ಅಂಗನವಾಡಿ ಕೇಂದ್ರಗಳನ್ನು ಅವಶ್ಯಕತೆ ಆಧಾರದ ಮೇಲೆ ಪ್ರಾರಂಭಿಸುವ ಉದ್ದೇಶ ಹೊಂದಿರುವುದಾಗಿ ಘೋಷಿಸಿದ್ದರು.

ಅದರಂತೆ, ವಲಸೆ ಮತ್ತು  ಭೂಮಿ ರಹಿತ ಕಾರ್ಮಿಕರನ್ನು ಒಳಗೊಂಡಿರುವ ಗ್ರಾಮಾಂತರ ಪ್ರದೇಶದಲ್ಲಿ 1,655 ಮತ್ತು ನಗರ ಪ್ರದೇಶದಲ್ಲಿ 2,589 ಸೇರಿದಂತೆ ಒಟ್ಟು 4,244 ಅಂಗನವಾಡಿ ಕೇಂದ್ರಗಳನ್ನು ರೂ. 26,898.17 ವಾರ್ಷಿಕ ವೆಚ್ಚದಲ್ಲಿ ಪ್ರಾರಂಭಿಸಲು 2022-23ನೇ ಸಾಲಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಶ್ರೀ ಹಾಲಪ್ಪ ಆಚಾರ್‌, ಪ್ರಧಾನಿ ನರೇಂದ್ರ ಮೋದಿ ಯವರ ಪೋಷಣ್‌ ಮಾಸಾಚರಣೆಯ ಘೋಷಣೆಯ ಬೆನ್ನಲ್ಲೇ ಈ ಅಧಿಕೃತ ಆದೇಶ ಹೊರಟಿರುವುದು ಬಹಳ ಸಂತಸದ ವಿಷಯವಾಗಿದೆ. ಕರ್ನಾಟಕ ಅಂಗನವಾಡಿ ಮತ್ತು ಪೋಷನ್‌ ಅಭಿಯಾನ 2.0 ಎಂದು ಮರುನಾಮಾಂಕಿತಗೊಂಡಿರುವ ಸಮಗ್ರ ಮಕ್ಕಳ ಅಭಿವೃದ್ದಿ ಯೋಜನೆಯನ್ನು 1975 ರಲ್ಲಿ ಪ್ರಾರಂಭಿಸಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಈ ಯೋಜನೆಯ ಅಡಿಯಲ್ಲಿ ಒಟ್ಟು 66,361 ಅಂಗನವಾಡಿ ಕೇಂದ್ರಗಳು ಸ್ಥಾಪಿತವಾಗಿದ್ದು, ಅವುಗಳ ಮೂಲಕ ರಾಜ್ಯದ ಮಕ್ಕಳಿಗೆ, ಕಿಶೋರಿಯರಿಗೆ, ಗರ್ಭಿಣಿ ಸ್ತ್ರೀಯರಿಗೆ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಶಿಕ್ಷಣ ಮುಂತಾದ 6 ಸೇವೆಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಈ ಯೋಜನೆಯ ಅಡಿ ಶೇಕಡಾ 56 ರಷ್ಟು ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ನೀಡಲು ಸಾಧ್ಯವಾಗಿದೆ. ಈ ಯೋಜನೆಯಿಂದ ಹೊರಗಿರುವ ಕಡಿಮೆ ಆದಾಯದ ಜನಸಂಖ್ಯೆಯು ವಾಸಿಸುವ ಪ್ರದೇಶಗಳು ಹೆಚ್ಚಾಗಿದ್ದು, ಅವರಿಗೆ 6 ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ನಿರ್ಧಾರ ತಗೆದುಕೊಂಡಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com