ಸಿಇಟಿ ರ‍್ಯಾಂಕಿಂಗ್‌: ಕೆಇಎ 'ಟಿಪ್ಪಣಿ' ರದ್ದುಗೊಳಿಸಿದ ಹೈಕೋರ್ಟ್, ಹೊಸ ಪಟ್ಟಿ ಪ್ರಕಟಿಸುವಂತೆ ಸೂಚನೆ

2021ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು 2022-23ರ ಸಾಲಿನ ಇನ್ನಿತರ ಪದವಿಗಳ ಪ್ರವೇಶಕ್ಕೆ ಪರಿಗಣಿಸಲಾಗಿದೆ. ಆದರೆ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಪರಿಗಣಿಸುವುದಿಲ್ಲ ಎಂಬ ಕೆಇಎಯ ಟಿಪ್ಪಣಿ ವಿವೇಚನಾ ರಹಿತ, ಅತಾರ್ಕಿಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್‌ ಹೇಳಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: 2021ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಪಡೆದ ಅಂಕಗಳನ್ನು 2022-23ರ ಸಾಲಿನ ಇನ್ನಿತರ ಪದವಿಗಳ ಪ್ರವೇಶಕ್ಕೆ ಪರಿಗಣಿಸಲಾಗಿದೆ. ಆದರೆ ಎಂಜಿನಿಯರಿಂಗ್‌ ಮತ್ತು ತಾಂತ್ರಿಕ ಕೋರ್ಸ್‌ಗಳಿಗೆ ಪರಿಗಣಿಸುವುದಿಲ್ಲ ಎಂಬ ಕೆಇಎಯ ಟಿಪ್ಪಣಿ ವಿವೇಚನಾ ರಹಿತ, ಅತಾರ್ಕಿಕ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಹೈಕೋರ್ಟ್‌ ಹೇಳಿದೆ.

ಅರ್ಜಿದಾರರಾದ ಸಿಇಟಿ ಪುನರಾವರ್ತಿತರು ಪಡೆದ ದ್ವಿತೀಯ ಪಿಯು ಅಂಕಗಳನ್ನು 2022-23ರ ಸಿಇಟಿ ರ‍್ಯಾಂಕಿಂಗ್‌ಗೆ ಪರಿಗಣಿಸಲಾಗದು ಎಂಬ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ‘ಟಿಪ್ಪಣಿ’ಯನ್ನು ರದ್ದುಗೊಳಿಸಿದೆ.

ಮರುಪರೀಕ್ಷೆ ಬರೆದ ಅಭ್ಯರ್ಥಿಗಳ ಪ್ರಸಕ್ತ ಸಾಲಿನ ಸಿಇಟಿ ಅಂಕಗಳ ಜೊತೆ ಕಳೆದ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಹೊಸ ಸಿಇಟಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸುವಂತೆ ನ್ಯಾಯಮೂರ್ತಿ ಎಸ್‌. ಆರ್‌. ಕೃಷ್ಣ ಕುಮಾರ್‌ ಅವರ ಏಕಸದಸ್ಯ ನ್ಯಾಯಪೀಠ ಮಹತ್ವದ ಆದೇಶ ಪ್ರಕಟಿಸಿದೆ.

ಕೋವಿಡ್ ಕಾರಣದಿಂದ 2021ರಲ್ಲಿ ದ್ವಿತೀಯ ಪಿಯು ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ, ಅಂತವರಿಗೆ ಆಂತರಿಕ ಮೌಲ್ಯಮಾಪನದ ಮೂಲಕ ಬಡ್ತಿ ನೀಡಲಾಗಿತ್ತು. ಸಿಇಟಿ 2021-22ರಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ ಮೆರಿಟ್ ನಿರ್ಧರಿಸಬೇಕು ಎಂದು ಸೂಚಿಸಿ, ನಿಯಮ 4ಕ್ಕೆ ತಿದ್ದುಪಡಿ ಮಾಡಿ ನಿಯಮಾವಳಿಯನ್ನು ಸೇರಿಸುವ ಮೂಲಕ ಸರ್ಕಾರವು ಸೆಪ್ಟೆಂಬರ್ 1, 2021 ರಂದು ಅಧಿಸೂಚನೆಯನ್ನು ಹೊರಡಿಸಿತು.

 2022 ರ ಸಿಇಟಿ ಪರೀಕ್ಷೆಯಲ್ಲಿ 2,10,829 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ಪೈಕಿ 1,69,328 ಮಂದಿ ಸೀಟು ಹಂಚಿಕೆಗೆ ಅರ್ಹರಾಗಿದ್ದಾರೆ. ಹಾಜರಾದ ಅಭ್ಯರ್ಥಿಗಳಲ್ಲಿ 23,344 ಮಂದಿ 2020-21ನೇ ಬ್ಯಾಚ್‌ಗೆ ಸೇರಿದವರು. ಕೆಇಎ ಜುಲೈ 30, 2022 ರಂದು ಸಿಇಟಿ ಫಲಿತಾಂಶಗಳು ಮತ್ತು ವಿದ್ಯಾರ್ಥಿಗಳ ಶ್ರೇಯಾಂಕಗಳನ್ನು ಬಿಡುಗಡೆ ಮಾಡಿತು ಮತ್ತು ಅದೇ ದಿನ ಟಿಪ್ಪಣಿಯನ್ನು ಸಹ ಬಿಡುಗಡೆ ಮಾಡಿತ್ತು.

ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದ (ಕೆಸಿಇಟಿ) ಫ್ರೆಶರ್ ವಿದ್ಯಾರ್ಥಿಗಳು ಅತೃಪ್ತರಾಗಿದ್ದಾರೆ. ಹೊಸ ರ‍್ಯಾಂಕಿಂಗ್‌ ಪಟ್ಟಿ  ಪ್ರಕಟಿಸಲು ಯೋಜಿಸಲಾಗುತ್ತಿದೆ ಮತ್ತು ನ್ಯಾಯಾಲಯದ ಆದೇಶದ ನಂತರ ಶೀಘ್ರದಲ್ಲೇ ಕೌನ್ಸೆಲಿಂಗ್ ಪ್ರಕ್ರಿಯೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com