ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ತುಂಬಿ ಹರಿದ ನೀರು
ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ತುಂಬಿ ಹರಿದ ನೀರು

ಬೆಂಗಳೂರಿನ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು 300 ಕೋಟಿ ರೂ. ಬಿಡುಗಡೆ: ಸಿಎಂ ಬಸವರಾಜ ಬೊಮ್ಮಾಯಿ

ಮೊನ್ನೆ ಭಾನುವಾರ ರಾತ್ರಿಯಿಂದ ನಿನ್ನೆಯವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿದ್ದ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಮೂಲಭೂತ ಸೌಕರ್ಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. 
Published on

ಬೆಂಗಳೂರು: ಮೊನ್ನೆ ಭಾನುವಾರ ರಾತ್ರಿಯಿಂದ ನಿನ್ನೆಯವರೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿದ್ದ ಮಳೆಯಿಂದ (Bengaluru rain) ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಮೂಲಭೂತ ಸೌಕರ್ಯ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಒಪ್ಪಿಕೊಂಡಿದ್ದಾರೆ. 

ಬೆಂಗಳೂರು ನಾಗರಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲಾಗುವುದು. ಬೆಂಗಳೂರಿನ ಮಳೆ ಪರಿಸ್ಥಿತಿ ಹಾಗೂ ಮೂಲಸೌಲಭ್ಯ ನಿರ್ವಹಣೆಗೆ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ನಿನ್ನೆ ಅವರು ಬೆಂಗಳೂರು ಜಲಮಂಡಳಿ, ರಾಜ್ಯ ಮಳೆ ಹಾಗೂ ಪ್ರವಾಹದ ಹಾನಿ ಕುರಿತು ಸಚಿವರು, ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾರ್ವಜನಿಕರು ತಮ್ಮ ಮೇಲೆ ವಿಶ್ವಾಸವಿಡಿ ಎಂದು ಮನವಿ ಮಾಡಿದರು. ಸೇತುವೆಗಳು ಮತ್ತು ಮಳೆನೀರು ಚರಂಡಿಗಳನ್ನು ನಿರ್ಮಿಸಲಾಗುವುದು. ಇದೊಂದು ಸವಾಲಾಗಿದ್ದು, ಈ ಸಮಯದಲ್ಲಿ ನಾವು ಜನರ ಸಹಕಾರವನ್ನು ಬಯಸುತ್ತೇವೆ. ಈ ತಿಂಗಳ ಮೊದಲ ಐದು ದಿನಗಳಲ್ಲಿ ನಗರದಲ್ಲಿ ಇಡೀ ತಿಂಗಳು ವಾಡಿಕೆಗಿಂತ ಶೇ.150ರಷ್ಟು ಹೆಚ್ಚು ಮಳೆಯಾಗಿದೆ. ಇದು ಕಳೆದ 42 ವರ್ಷಗಳಲ್ಲೇ ಗರಿಷ್ಠ. ಮಹದೇವಪುರ ಮತ್ತು ಕೆಆರ್ ಪುರಂನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಹೇಳಿದರು.

ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ತಲಾ 33 ಸದಸ್ಯರೊಂದಿಗೆ ಎರಡು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು. ತಂಡಗಳಿಗೆ ದೋಣಿಗಳನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಒಂದು ಸೇರಿದಂತೆ ಮೂರು ಎಸ್‌ಡಿಆರ್‌ಎಫ್ ತಂಡಗಳನ್ನು ಸ್ಥಾಪಿಸಲಾಗುವುದು ಮತ್ತು ಈಗಾಗಲೇ 9.5 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈ ತಂಡಗಳಿಗೆ ನಿವೃತ್ತ ಸೇನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರು ಮತ್ತು ರಾಜ್ಯದ ಪ್ರವಾಹ ನಿರ್ವಹಣೆಗೆ, ವಿಶೇಷವಾಗಿ ರಸ್ತೆ, ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಶಾಲಾ ಕೊಠಡಿ ದುರಸ್ತಿ ಸೇರಿದಂತೆ ಮೂಲಸೌಲಭ್ಯದ ನಿರ್ವಹಣೆಗೆ ರಾಜ್ಯ ಸರ್ಕಾರ 600 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿಗೆ 300 ರೂಪಾಯಿಗಳನ್ನು ನೀಡಲಾಗಿದ್ದು, 664 ಕೋಟಿ ಡಿ.ಸಿಗಳ ಬಳಿ ಇದ್ದು, ಮೂಲಭೂತ ಸೌಕರ್ಯಕ್ಕೆ 500 ಕೋಟಿ ರೂಪಾಯಿಗಳನ್ನು ಈಗಾಗಲೇ ನೀಡಲಾಗಿದೆ. ಬೆಂಗಳೂರಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, 1,500 ಕೋಟಿ ರೂಪಾಯಿಗಳನ್ನು ರಾಜಕಾಲುವೆಗಳ ನಿರ್ಮಾಣಕ್ಕೆ ಈಗಾಗಲೇ ನೀಡಲಾಗಿದ್ದು, ಮಳೆ ನಿಂತ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು ಎಂದರು.

ಇಂದು ಕೇಂದ್ರದ ತಂಡವೊಂದು ರಾಜ್ಯಕ್ಕೆ ಆಗಮಿಸಿ ಮಳೆ ಹಾನಿಯ ಅಂದಾಜು ಮಾಡಲಿದೆ. ಅವರ ವರದಿಗೆ ಕಾಯದೆ ರಾಜ್ಯ ಸರ್ಕಾರ 600 ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದು, ಅದರಲ್ಲಿ 300 ಕೋಟಿ ಬೆಂಗಳೂರಿಗೆ ಮಾತ್ರ. ಈ ಹಣವನ್ನು ರಸ್ತೆಗಳು, ಕಟ್ಟಡಗಳು, ಶಾಲೆಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಇತರ ಮೂಲಸೌಕರ್ಯಗಳನ್ನು ಸರಿಪಡಿಸಲು ಬಳಸಲಾಗುತ್ತದೆ. ಮಳೆನೀರು ಚರಂಡಿ ನಿರ್ಮಿಸಲು ಈಗಾಗಲೇ 1,500 ಕೋಟಿ ರೂಪಾಯಿ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ನಗರಕ್ಕೆ ನೀರು ಪೂರೈಕೆಗೆ ತೊಂದರೆಯಾಗಿರುವ ಪಂಪ್‌ಹೌಸ್‌ಗಳು ಜಲಾವೃತಗೊಂಡಿರುವ ಕುರಿತು, ನೀರನ್ನು ಹೊರತೆಗೆಯಲು ಮತ್ತು ದುರಸ್ತಿ ಮಾಡಲು ಎರಡು ಮೂರು ದಿನ ಬೇಕಾಗಬಹುದು ಎಂದರು. ಬೋರ್ ವೆಲ್ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲು ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಆಯುಕ್ತರಿಗೆ ತಿಳಿಸಲಾಗಿದೆ ಎಂದರು.

ಭಾರಿ ಮಳೆಯಿಂದಾಗಿ 164 ಕೆರೆಗಳು ಭರ್ತಿಯಾಗಿ ಬೆಂಗಳೂರು ಪ್ರವಾಹಕ್ಕೆ ಸಾಕ್ಷಿಯಾಗಿದೆ. ಕೆರೆಗಳನ್ನು ಉತ್ತಮವಾಗಿ ನಿರ್ವಹಿಸಲು, ಎಲ್ಲಾ ದೊಡ್ಡ ಕೆರೆಗಳಲ್ಲಿ ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಲಾಗುವುದು. ಹಲವೆಡೆ ಕೆರೆ ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿನ ಪ್ರವಾಹದ ಪರಿಸ್ಥಿತಿಯನ್ನು ಅವಲೋಕಿಸಿ ಬೆಂಗಳೂರಿನಲ್ಲಿ ಒಂದು ಎಸ್ ಡಿ ಆರ್ ಎಫ್ ಕಂಪನಿಯನ್ನು ಸ್ಥಾಪಿಸಲು , ಸಲಕರಣೆಗಳನ್ನು ಒದಗಿಸಲು 9.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಎಸ್ ಡಿ ಆರ್ ಎಫ್ ಕಂಪನಿ ಬೆಂಗಳೂರಿಗೆ ಸೀಮಿತವಾಗಿ ಕೆಲಸ ಮಾಡಲಿದೆ. ಇಡೀ ರಾಜ್ಯದಲ್ಲಿ ಮಾಜಿ ಯೋಧರನ್ನು ಒಳಗೊಂಡಂತೆ ಇನ್ನೆರಡು ಕಂಪನಿಗಳನ್ನು ಮುಂದಿನ ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದರು.

11,000 ಕೋಟಿ ಬೇಡಿಕೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮಳೆಹಾನಿ ನಿಭಾಯಿಸಲು 11,000 ಕೋಟಿ ರೂಪಾಯಿಗಳನ್ನು ನೀಡುವಂತೆ ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿದೆ. ಇದು ಕಳೆದ ಒಂದು ವಾರದಲ್ಲಿ ವಿನಾಶವನ್ನು ಹೊರತುಪಡಿಸುತ್ತದೆ. ಇಂದು ಸಂಜೆಯೊಳಗೆ ಸ್ಪಷ್ಟ ಚಿತ್ರಣ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೇವೆ. ಮುಂದಿನ ನಾಲ್ಕು ದಿನಗಳಲ್ಲಿ ದಕ್ಷಿಣ ಮತ್ತು ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇಂದ್ರ ಅಧ್ಯಯನ ತಂಡ
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರ ತಂಡ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ಪ್ರಸ್ತುತ ಆಗಿರುವ ಹಾನಿಯ ಬಗ್ಗೆ ಮೆಮೊರೆಂಡಂ ನೀಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ತಂಡ ಅಧ್ಯಯನದ ನಂತರ ರಾಜ್ಯ ಸರ್ಕಾರ, ತಂಡದೊಂದಿಗೆ ಸಭೆ ನಡೆಸಲಿದೆ ಎಂದರು.

ಟಿ ಕೆ ಹಳ್ಳಿ ಪಂಪ್ ಹೌಸ್ ಎರಡು ದಿನಗಳೊಳಗೆ ಕಾರ್ಯಾರಂಭ
ಟಿಕೆಹಳ್ಳಿಗೆ ಪರಿಶೀಲನೆಗೆ ತೆರಳಲಾಗಿದ್ದು, ಬೆಂಗಳೂರು ನಗರ ಕಾವೇರಿ ನೀರನ್ನು ಪಂಪ್ ಮಾಡುವ ಕುಡಿಯುವ ನೀರಿನ ಘಟಕ ಇದಾಗಿದೆ. ಅದರ ಬಳಿ ಇರುವ ಭೀಮೇಶ್ವರ ನದಿ ಉಕ್ಕಿ ಹರಿದು, ಸುತ್ತಮುತ್ತಲಿನ ಕೆರೆಗಳು ತುಂಬಿ ಟಿ ಕೆ ಹಳ್ಳಿ ಪಂಪ್ ಹೌಸ್ ಗೆ ನುಗ್ಗಿದೆ. 2 ಪಂಪ್ ಹೌಸ್ ಗಳಿಗೆ ನೀರು ತುಂಬಿ ಹಾನಿಯಾಗಿದೆ. ಈಗಾಗಲೇ ನೀರನ್ನು ತೆರವುಗೊಳಿಸಲು ಕಾರ್ಯಾಚರಣೆ ಮಾಡಲಾಗುತ್ತಿದೆ.

ಕಾವೇರಿ 4ನೇ ಸ್ಟೇಜ್ 2ನೇ ಫೇಸ್ ಪಂಪ್ ಹೌಸ್, 550 ಎಂಎಲ್ಡಿ ನೀರು ಸಾಮರ್ಥ್ಯವಿರುವ ಪಂಪ್ ಹೌಸ್ ನಲ್ಲಿ ನಾಳೆ ಬೆಳಿಗ್ಗೆಯೊಳಗೆ ನೀರನ್ನು ತೆಗೆದು, ಯಂತ್ರಗಳನ್ನು ದುರಸ್ತಿಗೊಳಿಸಲಾಗುವುದು. ಕಾವೇರಿ ಸ್ಟೇಜ್ 3 ರ ನೀರು ಪಂಪ್ ಹೌಸ್ ನಲ್ಲಿ ನೀರನ್ನು ತೆಗೆದು 2 ದಿನಗಳಲ್ಲಿ ಕೆಲಸ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com