ಮಳೆಗೆ ಬೆಂಗಳೂರಿನ ಸಮಸ್ಯೆ ಪರಿಹಾರಕ್ಕೆ ಯೋಜನೆ ರೂಪಿಸಿ ಶೀಘ್ರದಲ್ಲೇ ಕೆಲಸ ಆರಂಭಿಸಲು ಕೇಂದ್ರ ಸಚಿವ ಭರವಸೆ: ಸಿಎಂ ಬೊಮ್ಮಾಯಿ

ಮಳೆ ಬಂದಾಗ ಜಲಾವೃತ ಆಗುತ್ತಿರುವ ಮೈಸೂರು-ಬೆಂಗಳೂರು ರಸ್ತೆಯ ಚರಂಡಿ ಅಗಲೀಕರಣ ಮಾಡಲು ಕೇಂದ್ರ ಹೆದ್ದಾರಿ ಸಚಿವ ನಿತಿನ್​​ ಗಡ್ಕರಿ ನಿರ್ಧರಿಸಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಮಳೆ ಬಂದಾಗ ಜಲಾವೃತ ಆಗುತ್ತಿರುವ ಮೈಸೂರು-ಬೆಂಗಳೂರು ರಸ್ತೆಯ ಚರಂಡಿ ಅಗಲೀಕರಣ ಮಾಡಲು ಕೇಂದ್ರ ಹೆದ್ದಾರಿ ಸಚಿವ ನಿತಿನ್​​ ಗಡ್ಕರಿ ನಿರ್ಧರಿಸಿದ್ದಾರೆಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲೇ ಇರುವ ನಿತಿನ್​​​ ಗಡ್ಕರಿ ಅವರನ್ನು ಇಂದು ಬೆಳಗ್ಗೆ ಸಿಎಂ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಹೆದ್ದಾರಿ ಬಗ್ಗೆ ಚರ್ಚಿಸಿದರು. ರಸ್ತೆ ಪಕ್ಕದ ಚರಂಡಿಗಳನ್ನು ಅಗಲೀಕರಣ ಮಾಡಲು ಹೊಸ ಯೋಜನೆಯನ್ನೇ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರೊಂದಿಗೆ ಗೊರಗುಂಟೆಪಾಳ್ಯದ ಫ್ಲೈಓವರ್​​​​​​ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ.

ಪಿಲ್ಲರ್​ಗಳಲ್ಲಿ ಉಂಟಾಗಿರುವ ದೋಷದ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳುಗಳೇ ಕಳೆದಿವೆ. ಇದೀಗ ಮೇಲ್ಸೇತುವೆಯನ್ನು ಮರು ಬಳಕೆ ಮಾಡುವ ಸಂಬಂಧ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಕೇಬಲ್​​ ಬ್ರಿಡ್ಜ್​​ ಮಾದರಿಯಲ್ಲಿ ದುರಸ್ಥಿ ಮಾಡಲಾಗುವುದು ಎಂದು ಸಿ.ಎಂ.ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಮಳೆ ಬಂದಾಗ ನೀರು ನಿಲ್ಲುವ, ಚರಂಡಿಯಲ್ಲಿ ಸರಿಯಾಗಿ ನೀರು ಹೋಗದ ರಸ್ತೆಗಳ ಆಡಿಟ್ ಮಾಡಿಸುತ್ತಾರೆ. ಎಲ್ಲೆಲ್ಲಿ ಚರಂಡಿ ಸೌಕರ್ಯಗಳು, ರಸ್ತೆ ಅಗಲೀಕರಣ ಮಾಡಬೇಕೋ, ಹೊಂಡ-ಗುಂಡಿಗಳನ್ನು ರಿಪೇರಿ ಮಾಡಲು ಆಡಿಟ್ ಮಾಡಿಸುತ್ತಾರೆ. ಬೆಂಗಳೂರಿಗೆ ಬರುವ ಬಾಂಬೆ, ಚೆನ್ನೈ, ಹೈದರಾಬಾದ್ ಎಕ್ಸ್ ಪ್ರೆಸ್ ವೇಗಳು ಬೆಂಗಳೂರಿನ ರಸ್ತೆಗಳ ಅಂತರ ಸಂಪರ್ಕಗಳನ್ನು ತುಂಬುವ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈ ಓವರ್ ಮತ್ತು ಅಂಡರ್ ಪಾಸ್, ಕೆಲವು ಕಡೆ ಸ್ಕ್ರೈ ವಾಕ್ ನಿರ್ಮಿಸುವ ಬಗ್ಗೆ  ಗುರುತಿಸಿ ಕೇಂದ್ರ ಹೆದ್ದಾರಿ, ಸಾರಿಗೆ ಇಲಾಖೆಗೆ ನೀಡಿದ್ದೇವೆ. ಅವುಗಳ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಬೆಂಗಳೂರು ನಗರಕ್ಕೆ ಮತ್ತು ರಾಜ್ಯದಲ್ಲಿ ಆಗಬೇಕಿರುವ ತುರ್ತು ಕೆಲಸಗಳ ಬಗ್ಗೆ ಒಂದೂವರೆ ತಿಂಗಳೊಳಗೆ ಯೋಜನೆ ಸಿದ್ಧಪಡಿಸಿ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ. ಇದೇ ವರ್ಷ ಕೆಲಸ ಆರಂಭವಾಗಬೇಕೆಂಬುದು ನಮ್ಮ ಉದ್ದೇಶ ಎಂದರು.  

ಇಡೀ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಅದು ಮೆಟ್ರೊ, ರಸ್ತೆ, ರೈಲು ಸಂಚಾರದಲ್ಲಿನ ದಟ್ಟಣೆಯನ್ನು, ಕೇಬಲ್ ಕಾರ್ ಬಗ್ಗೆ ಸಂಪೂರ್ಣವಾದ ಪ್ರಾಧಿಕಾರ ರಚನೆ ಮಾಡಬೇಕೆಂದಿದ್ದು ಅದಕ್ಕೆ ಸಂಬಂಧಪಟ್ಟಂತೆ ಇದೇ ತಿಂಗಳು ನಡೆಯಲಿರುವ ಅಸೆಂಬ್ಲಿಯಲ್ಲಿ ಪಾಸ್ ಮಾಡಿ ಪ್ರಾಧಿಕಾರ ರಚನೆ ಮಾಡುತ್ತೇವೆ. ಹಲವಾರು ಏಜೆನ್ಸಿಗಳು ಕೆಲಸ ಮಾಡುತ್ತಿದ್ದು ಒಂದಕ್ಕೊಂದು ಸಮನ್ವಯದ ಅವಶ್ಯಕತೆಯಿದೆ. ಈಗ ಬಹಳಷ್ಟು ಕಡೆ ಸಮನ್ವಯತೆಯಿಲ್ಲದೆ ಕೆಲಸಗಳು ಬಾಕಿ ಉಳಿಯುತ್ತವೆ. ಹೀಗಾಗಿ ಒಂದೇ ಪ್ರಾಧಿಕಾರ ತರಬೇಕೆಂದಿದ್ದೇವೆ ಎಂದರು.

ಕೇಂದ್ರ ರಸ್ತೆ ಧನಸಹಾಯ (Central road fund-CRF) ಅಡಿಯಲ್ಲಿ ಶಿರಡಿ ರಸ್ತೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಹೊಸ ಪ್ರಸ್ತಾವನೆ ಕೇಂದ್ರ ಸರ್ಕಾರ ತರಲಿದೆ.

ಇಂದು ಲೋಕೋಪಯೋಗಿ ಇಲಾಖೆ, ಬಿಬಿಎಂಪಿ, ಹಣಕಾಸು ಇಲಾಖೆ ಅಧಿಕಾರಿಗಳು ಕೇಂದ್ರ ಭೂ ಸಾರಿಗೆ ಸಚಿವರ ಜೊತೆ ಸಭೆ ನಡೆಯಿತು. ಇಡೀ ಕರ್ನಾಟಕದ ಹೆದ್ದಾರಿ ಯೋಜನೆಗಳನ್ನು ಸುಧಾರಿಸಬೇಕೆಂದು, ಬೆಂಗಳೂರಿನ ಗೊರೆಗುಂಟೆಪಾಳ್ಯ ಫ್ಲೈ ಓವರ್ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ. ಶೀಘ್ರದಲ್ಲೇ ಕೇಬಲ್ ಬ್ರಿಡ್ಜ್ ಮಾದರಿಯಲ್ಲಿ ದುರಸ್ಥಿ ಮಾಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದರು. 

ಜನೋತ್ಸವ: ನಾಳೆ ರಾಜ್ಯ ಸರ್ಕಾರದ ಜನೋತ್ಸವ ಕಾರ್ಯಕ್ರಮ ದೊಡ್ಡಬಳ್ಳಾಪುರದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಬರಲು ಒತ್ತಾಯ ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಬರುತ್ತಾರೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com