ಬೆಂಗಳೂರು ವಿವಿ ಕ್ಯಾಂಪಸ್ ನಲ್ಲಿ ಗಣೇಶ ದೇವಾಲಯ: ಕೇಸರಿಕರಣಕ್ಕೆ ಬಿಜೆಪಿ ಯತ್ನ ಎಂದು ವಿದ್ಯಾರ್ಥಿಗಳ ಆರೋಪ, ಪ್ರತಿಭಟನೆ
ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗಡೆ ಗಣೇಶ ದೇವಾಲಯ ಸ್ಥಾಪನೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರ್ಕಾರ ವಿವಿ ಕ್ಯಾಂಪಸ್ ನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
Published: 09th September 2022 07:45 PM | Last Updated: 09th September 2022 08:25 PM | A+A A-

ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗಡೆ ಗಣೇಶ ದೇವಾಲಯ ಸ್ಥಾಪನೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರ್ಕಾರ ವಿವಿ ಕ್ಯಾಂಪಸ್ ನ್ನು ಕೇಸರಿಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ದೇವಾಲಯ ನಿರ್ಮಾಣ ವಿರೋಧಿಸಿ ಕಳೆದ ಎರಡು ದಿನಗಳಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ವಿವಿ ಅಧಿಕಾರಿಗಳು ದೂರು ನೀಡುವುದರೊಂದಿಗೆ ಈ ವಿಚಾರ ಗಂಭೀರ ತಿರುವು ಪಡೆದುಕೊಂಡಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕುಲಪತಿ ಡಾ. ಜಯಕರ ಶೆಟ್ಟಿ, ದೇವಾಲಯ ನಿರ್ಮಾಣ ನಿರ್ಧಾರವನ್ನು ತಮ್ಮ ಅವಧಿಯಲ್ಲಿ ತೆಗೆದುಕೊಂಡಿಲ್ಲ. ಈ ಹಿಂದೆಯೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಇದೀಗ ಕೆಲಸ ಆರಂಭವಾಗಿದೆ. ದೇವಾಲಯ ವಿಚಾರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವಂತಿಲ್ಲ ಎಂದಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ದೇವಾಲಯ ನಿರ್ಮಾಣ ಕೆಲಸವನ್ನು ನಿಲ್ಲಿಸುವಂತೆ ಶೆಟ್ಟಿ ನಿರ್ದೇಶಿಸಿದ್ದರು. ಆದಾಗ್ಯೂ, ಕಾಮಗಾರಿ ಮುಂದುವರೆದ ಹಿನ್ನೆಲೆಯಲ್ಲಿ ಅವರೇ ಸ್ಥಳಕ್ಕೆ ಧಾವಿಸಿ, ಕೆಲಸವನ್ನು ಸ್ಥಗಿತಗೊಳಿಸಿದರು.
ಇದನ್ನೂ ಓದಿ: ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸಿ ಫತ್ವಾ; ಜೀವ ಬೆದರಿಕೆ ಹೊರತಾಗಿಯೂ ಗಣೇಶ ಕೂರಿಸಿ ವಿಸರ್ಜಿಸಿದ 'ರೂಬಿ ಆಸಿಫ್ ಖಾನ್'!
ಒಂದು ವೇಳೆ ದೇವಾಲಯ ನಿರ್ಮಾಣ ಕೆಲಸವನ್ನು ಮುಂದುವರೆಸಿದರೆ ಅವರ ವಿರುದ್ಧ ಪೊಲೀಸ್ ದೂರು ಸಲ್ಲಿಸಲಾಗುವುದು ಎಂದು ನೈಜ ಹೋರಾಟಗಾರರ ವೇದಿಕೆ, ಸ್ನಾತಕೋತ್ತರ ಮತ್ತು ಸಂಶೋಧಕ ವಿದ್ಯಾರ್ಥಿಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ವಿವಿ ಕ್ಯಾಂಪಸ್ ಒಳಗಡೆ ಕೇಸರಿಕರಣದ ಹುನ್ನಾರವಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು. ಯುಜಿಸಿ ಮಾರ್ಗಸೂಚಿ ಮತ್ತು ಕಾನೂನಿನಲ್ಲಿ ದೇವಾಲಯ, ಚರ್ಚ್, ಮಸೀದಿಗಳಂತ ಧಾರ್ಮಿಕ ಸ್ಥಳಗಳ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.
ಕ್ಯಾಂಪಸ್‌ನಲ್ಲಿ ಎಷ್ಟೇ ಖರ್ಚಾದರೂ ದೇವಾಲಯ ನಿರ್ಮಿಸಲಾಗುವುದು ಆದರೆ, ಪ್ರತಿಭಟನೆಗಳು ವಿರೋಧ ಪಕ್ಷಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳ ಪಿತೂರಿಯ ಭಾಗವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಆದರೆ, ಕ್ಯಾಂಪಸ್ ನಲ್ಲಿ ದೇವಾಲಯ ನಿರ್ಮಿಸಲು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಬಹಿರಂಗವಾಗಿ ಸವಾಲು ಹಾಕಿದ್ದಾರೆ.