ರೋಗಿಗಳ ಸಾವಿನ ದುರಂತದ ಹಿಂದೆ ಷಡ್ಯಂತ್ರ: ವಿಮ್ಸ್ ನಿರ್ದೇಶಕರ ಗಂಭೀರ ಆರೋಪ

ಪ್ರಮುಖ ಬೆಳವಣಿಗೆಯಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ರೋಗಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದ ಹಿಂದೆ ಷಡ್ಯಂತ್ರ ಅಡಗಿದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರಗೌಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ರೋಗಿಗಳ ಸಾವಿನ ದುರಂತದ ಹಿಂದೆ ಷಡ್ಯಂತ್ರ: ವಿಮ್ಸ್ ನಿರ್ದೇಶಕರ ಗಂಭೀರ ಆರೋಪ

ಬಳ್ಳಾರಿ: ಪ್ರಮುಖ ಬೆಳವಣಿಗೆಯಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ರೋಗಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತದ ಹಿಂದೆ ಷಡ್ಯಂತ್ರ ಅಡಗಿದೆ ಎಂದು ವಿಮ್ಸ್ ನಿರ್ದೇಶಕ ಗಂಗಾಧರಗೌಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌)ನ ಪ್ರತಿಷ್ಠೆಗೆ ಚ್ಯುತಿ ತರುವ ಷಡ್ಯಂತ್ರದ ಭಾಗವಾಗಿ ಐಸಿಯುನಲ್ಲಿದ್ದ ಇಬ್ಬರು ರೋಗಿಗಳ ಸಾವು ಪೂರ್ವಯೋಜಿತವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಗಂಗಾಧರಗೌಡ ಅವರು ಆರೋಪಿಸಿದ್ದು, ಅವರನ್ನು ಹುದ್ದೆಯಿಂದ ತೆಗೆದುಹಾಕಲು ಈ ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.

ವಿಮ್ಸ್‌ನ ಐಸಿಯುನಲ್ಲಿ ದಾಖಲಾಗಿದ್ದ ಇಬ್ಬರು ರೋಗಿಗಳು ವಿದ್ಯುತ್ ವೈಫಲ್ಯದಿಂದ ಸೆಪ್ಟೆಂಬರ್ 14 ರಂದು ಸಾವನ್ನಪ್ಪಿದ್ದರು. ಆದರೆ, ಘಟನೆಯಲ್ಲಿ ಸಾವಿನ ಸಂಖ್ಯೆಯ ಬಗ್ಗೆ ಗೊಂದಲವಿದೆ. ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಆಡಳಿತ ಹೇಳಿಕೊಂಡರೂ, ನಾಲ್ಕು ರೋಗಿಗಳ ಸಾವಿನ ವರದಿಗಳಿವೆ ಎಂದು ಗಂಗಾಧರ ಗೌಡ ಅವರು ದಿ ನ್ಯೂ ಸಂಡೆ ಎಕ್ಸ್ ಪ್ರೆಸ್ ಗೆ ಮಾಹಿಚಿ ನೀಡಿದ್ದಾರೆ. ಅಲ್ಲದೆ ಷಡ್ಯಂತ್ರ ಸಂಬಂಧ ನನ್ನ ಬಳಿ ಆಡಿಯೋ ಕ್ಲಿಪ್‌ಗಳ ರೂಪದಲ್ಲಿ ಪುರಾವೆಗಳಿವೆ ಎಂದು ಹೇಳಿಕೆ ನೀಡಿದ್ದಾರೆ.

ಅಂತೆಯೇ ಈ ಬಗ್ಗೆ ಶೀಘ್ರದಲ್ಲೇ ದೂರು ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇನೆ. ತನಿಖಾ ಸಮಿತಿಯ ಸದಸ್ಯರು ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿದಾಗ, ನಾನು ಅವರಿಗೆ ಘಟನೆಗಳ ಅನುಕ್ರಮವನ್ನು ವಿವರಿಸಿದ್ದೇನೆ. ಶೀಘ್ರದಲ್ಲೇ ಸತ್ಯ ಹೊರಬರುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಕಡೆಯಿಂದ ಯಾವುದೇ ಲೋಪವಾಗಿದ್ದರೆ, ನಾನು ಕ್ರಮವನ್ನು ಎದುರಿಸಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು. 

ಇದೇ ಸೆ.14ರಂದು ಆಸ್ಪತ್ರೆಯಲ್ಲಿ ಬೆಳಗ್ಗೆ 8ರಿಂದ 11ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಪರಿಣಾಮ ವೆಂಟಿಲೇಟರ್ ನಲ್ಲಿದ್ದ ಇಬ್ಬರು ರೋಗಿಗಳು ವಿದ್ಯುತ್ ವ್ಯತ್ಯಯದಿಂದ ಮೃತಪಟ್ಟಿದ್ದರು. ಮೃತ ರೋಗಿಗಳನ್ನು ಚೆಟ್ಟಮ್ಮ (36) ಮತ್ತು ಹುಸೇನ್ (39) ಎಂದು ಗುರುತಿಸಲಾಗಿತ್ತು. ಆಸ್ಪತ್ರೆ ಮೂಲಗಳ ಪ್ರಕಾರ ಅದೇ ದಿನ ಚಂದ್ರಮ್ಮ (65) ಮತ್ತು ಮನೋಜ್ ಕುಮಾರ್ (18) ಸಹ ಸಾವನ್ನಪ್ಪಿದ್ದಾರೆ. ಆದರೆ ವಿಮ್ಸ್ ಆಡಳಿತವು ಸಹಜ ಸಾವು ಎಂದು ಬಣ್ಣಿಸಿದೆ. 

ಆರೋಗ್ಯ ಸಚಿವರ ವಿರುದ್ಧ ಶಾಸಕ ಸೋಮಶೇಖರ್ ರೆಡ್ಡಿ ಆಕ್ರೋಶ
ಇದೇ ವೇಳೆ ಶಾಸಕ ಸೋಮಶೇಖರ್ ರೆಡ್ಡಿ ಅವರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಗಂಗಾಧರ ಗೌಡರನ್ನು ನಿರ್ದೇಶಕರನ್ನಾಗಿ ನೇಮಕ ಮಾಡುವ ಬಗ್ಗೆ ಅನುಮಾನ ಮೂಡಿಸಿದೆ ಎಂದರು. “ನಾನು ಮೊದಲ ದಿನದಿಂದ ಗೌಡರ ನೇಮಕವನ್ನು ವಿರೋಧಿಸಿದ್ದೆ. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com