ಬೆಂಗಳೂರು: ಪಡೆದ ಲಂಚದ ಹಣವನ್ನು ಹಿಂತಿರುಗಿಸುವ ವೇಳೆ ಪೊಲೀಸರಿಂದ ಕೆಎಎಸ್ ಅಧಿಕಾರಿ ಬಂಧನ
ಲಂಚ ಪಡೆಯುವಾಗ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸುವುದು ವಾಡಿಕೆ. ಆದರೆ ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಪಡೆದ ಲಂಚದ ಹಣವನ್ನು ವಾಪಸ್ ನೀಡುವ ವೇಳೆ ಕೆ ಎಎಸ್ ಅಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Published: 22nd September 2022 09:49 AM | Last Updated: 22nd September 2022 01:48 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಲಂಚ ಪಡೆಯುವಾಗ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸುವುದು ವಾಡಿಕೆ. ಆದರೆ ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಪಡೆದ ಲಂಚದ ಹಣವನ್ನು ವಾಪಸ್ ನೀಡುವ ವೇಳೆ ಕೆ ಎಎಸ್ ಅಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರ ಜಮೀನು ಭೂಸ್ವಾಧೀನಗೊಂಡಿಲ್ಲ ಎಂದು ಎನ್ ಒ ಸಿ ಪತ್ರ ನೀಡಲು 2.5 ಲಕ್ಷ ರು ಹಣ ಲಂಚ ಪಡೆದು, ಈ ಬಗ್ಗೆ ದೂರು ದಾಖಲಾದ ಬಳಿಕ ಲಂಚದ ಹಣವನ್ನು ಮರಳಿಸುತ್ತಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಭೂಮಾಪಕರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ–2 ಹುದ್ದೆಯಲ್ಲಿದ್ದ ಕೆಎಎಸ್ ಅಧಿಕಾರಿ ಎ.ಬಿ. ವಿಜಯಕುಮಾರ್ ಮತ್ತು ಅವರ ಕಚೇರಿಯ ಭೂಮಾಪಕ ರಘುನಾಥ್ ಬಂಧಿತರು. ಮೊದಲ ಆರೋಪಿ ಎಬಿ ವಿಜಯಕುಮಾರ್, ವಿಶೇಷ ಭೂಸ್ವಾಧೀನ ಅಧಿಕಾರಿ ಮತ್ತು ಎರಡನೇ ಆರೋಪಿ ರಘುನಾಥ್, ಭೂಮಾಪಕ. ದೂರುದಾರ ಭಗತ್ ಸಿಂಗ್ ಅರುಣ್ ಅವರಿಗೆ ಎನ್‌ಒಸಿ ನೀಡಲು ಅಧಿಕಾರಿಗಳು 2.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ 2.50 ಲಕ್ಷ ಲಂಚ ಪಡೆದು ಎನ್‌ಒಸಿ ನೀಡಿದ್ದರು.
ಇದನ್ನೂ ಓದಿ: ಎಫ್ ಡಿ ಎ ಹುದ್ದೆ ಕೊಡಿಸುವ ಆಮಿಷ: ಕಾಂಗ್ರೆಸ್ ಆರೋಪದ ನಂತರ ಮೈಸೂರು ಮಹಿಳಾ ಪಿಎಸ್ ಐ ಅಮಾನತು
ಈ ಸಂಬಂಧ ಅರ್ಜಿದಾರರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ್ದ ಆರೋಪಿಗಳು, ದೂರನ್ನು ಹಿಂಪಡೆದರೆ 2.5 ಲಕ್ಷದೊಂದಿಗೆ 50,000 ರು. ಸೇರಿಸಿ ವಾಪಸ್ ನೀಡುವುದಾಗಿ ಆಮಿಷ ಒಡ್ಡಿದ್ದರು. ದೂರುದಾರರಿಗೆ ಹಣ ವಾಪಸ್ ನೀಡುತ್ತಿದ್ದಾಗ ಇಬ್ಬರನ್ನೂ ಬಂಧಿಸಲಾಗಿದೆ.