ಮಂಗಳೂರಿನ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಮೇಲೆ ಎನ್‌ಐಎ ದಾಳಿ
ಮಂಗಳೂರಿನಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.
Published: 22nd September 2022 09:25 AM | Last Updated: 22nd September 2022 01:44 PM | A+A A-

ಎನ್ಐಎ ದಾಳಿ ಖಂಡಿಸಿ ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಕೂಗುತ್ತಿರುವ ಪಿಎಫ್ಐ ಕಾರ್ಯಕರ್ತರು
ಮಂಗಳೂರು: ಮಂಗಳೂರಿನಲ್ಲಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.
ಬಿಗಿ ಭದ್ರತೆಯ ನಡುವೆ ಎಸ್‌ಡಿಪಿಐ ಕಚೇರಿ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ರಿಯಾಜ್ ಫರಂಗಿಪೇಟೆ ಸೇರಿದಂತೆ ಕೆಲವು ಎಸ್‌ಡಿಪಿಐ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಗೆ ಅಡ್ಡಿಪಡಿಸಲು ಸಂಚು ರೂಪಿಸಿದ ಆರೋಪ ಹೊತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಹೆಚ್ಚಾಗಿ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಆದರೆ ಅದೇ ಇನ್ನೂ ದೃಢಪಟ್ಟಿಲ್ಲ.
ಇದೇ ವೇಳೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿದ್ದ ಹಲವು ಎಸ್ ಡಿಪಿಐ ಮತ್ತು ಪಿಎಫ್ ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಕೆಲವು ಎಸ್‌ಡಿಪಿಐ ಮತ್ತು ಪಿಎಫ್‌ಐ ಸದಸ್ಯರು ಕಚೇರಿ ಎದುರು ಪ್ರತಿಭಟನೆ ನಡೆಸಿ ದಾಳಿಯನ್ನು ಖಂಡಿಸಿದರು. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾವೂರು, ಜೋಕಟ್ಟೆ ಮತ್ತು ಉಪ್ಪಿನಂಗಡಿಯಂತಹ ಇತರ ಕೆಲವು ಸ್ಥಳಗಳಲ್ಲಿಯೂ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರಿನಲ್ಲಿ 4 ಕಡೆ ದಾಳಿ: ಎಸ್ಡಿಐಪಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಅಬುಬಕರ್ ಕುಳಾಯಿ ಸೋದರ ಅಬ್ದುಲ್ ಖಾದರ್ ಕುಳಾಯಿ ಮನೆ ಮೇಲೆಯೂ ಎನ್ಐಎ ದಾಳಿ ನಡೆದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಮತ್ತು ಎಸ್‌ಡಿಪಿಐ ಜಿಲ್ಲಾ ಕಚೇರಿಯ ಮೇಲೆಯೂ ಎನ್ಐಎ ದಾಳಿ ನಡೆದಿದೆ. ಕುಳಾಯಿ, ಕಾವೂರು, ಜೋಕಟ್ಟೆ, ಬಜಪೆಯ ಪಿಎಫ್ಐ ಮತ್ತು ಎಸ್‌ಡಿಪಿಐ ನಾಯಕರ ಮನೆಗಳ ಮೇಲೆಯೂ ದಾಳಿ ನಡೆದಿದೆ. ಎನ್‌ಐಎ ದಾಳಿಯ ನಂತರ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ದಾಳಿ ನಡೆಯುವ ಸ್ಥಳದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಭದ್ರತೆ ಒದಗಿಸಿದೆ.
ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್‌ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಎರಡು ಪುಸ್ತಕ, ಲ್ಯಾಪ್ಟಾಪ್, 1 ಪೆನ್ಡ್ರೈವ್, 10ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಭಿತ್ತಿಪತ್ರಗಳು, ಟೀ ಶರ್ಟ್ ವಶಕ್ಕೆ ಪಡೆದು ಅಧಿಕಾರಿಗಳು ಹೊರ ನಡೆದರು.
ಬೆಂಗಳೂರು, ಮಂಗಳೂರು, ಶಿರಸಿ ಮತ್ತು ಕೊಪ್ಪಳದಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್ಐ, ಎಸ್‌ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್ಐ ಕಚೇರಿಗಳಾಗಿವೆ.
#Davangere PFI district president Imamuddin probed by #NIA at an undisclosed location.@XpressBengaluru
— Subash_TNIE (@S27chandr1_TNIE) September 22, 2022
ಬೆಂಗಳೂರಿನ ಪಾದರಾಯನಪುರದಲ್ಲಿರುವ ಪಿಎಫ್ಐ ರಾಜ್ಯ ಘಟಕದ ಕಾರ್ಯದರ್ಶಿ ಅಫ್ಸರ್ ಪಾಷಾ ನಿವಾಸದ ಮೇಲೆ, ಟ್ಯಾನರಿ ರಸ್ತೆಯಲ್ಲಿರುವ ಪಿಎಫ್ಐ ರಾಜ್ಯ ಘಟಕದ ಅಧ್ಯಕ್ಷ ನಾಸಿರ್ ಪಾಷಾ ನಿವಾಸ, ರಿಚ್ಮಂಡ್ ಟೌನ್ನಲ್ಲಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್ ಮೇಲೆಯೂ ಎನ್ಐಎ ದಾಳಿ ನಡೆದಿದೆ.
ಇದನ್ನೂ ಓದಿ: ಮಂಗಳೂರು, ಬೆಂಗಳೂರು ಸೇರಿ ದೇಶಾದ್ಯಂತ 11 ರಾಜ್ಯಗಳಲ್ಲಿ ಎನ್ಐಎ ದಾಳಿ, ತೀವ್ರ ಶೋಧ: ಸುಮಾರು 100 ಮಂದಿ ವಶ
ರಿಚ್ಮಂಡ್ ಟೌನ್ನ ಮೊಹಮದ್ ಸಾಕಿಬ್ ನಿವಾಸದ ಬಳಿ ಸೇರಿರುವ ಬೆಂಬಲಿಗರನ್ನು ಸ್ಥಳೀಯ ಪೊಲೀಸರು ದೂರ ಕಳಿಸುತ್ತಿದ್ದಾರೆ. ಪಾದರಾಯನಪುರ ಹಾಗೂ ಟ್ಯಾನರಿ ರಸ್ತೆಗಳಲ್ಲಿ ದಾಳಿ ನಡೆದ ಮನೆಗಳ ಸಮೀಪ ಸ್ಥಳೀಯ ಪೊಲೀಸರು ಭದ್ರತೆ ಒದಗಿಸಲು ಮುಂದಾಗಿದ್ದಾರೆ. ಮೊಹ್ಮದ್ ಸಾಕಿಬ್ ನಿವಾಸದಲ್ಲಿ ಎನ್ಐಎ ದಾಳಿ ಅಂತ್ಯಗೊಂಡಿದ್ದು, ಮನೆಯಲ್ಲಿ ಕೆಲ ದಾಖಲೆಗಳನ್ನ ವಶಕ್ಕೆ ಪಡೆದು ಹೊರನಡೆದಿದ್ದಾರೆ.
ಶಿರಸಿಯ ಎಸ್‌ಡಿಪಿಐ ಮುಖಂಡ ಅಬ್ದುಲ್ ಶುಕುರ್ ಹೊನ್ನಾವರ್ ಅವರ ಮನೆಯ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿ, ಕೆಲವು ದಾಖಲೆಗಳೊಂದು ಅಬ್ದುಲ್ ಶುಕುರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒಂದು ಲ್ಯಾಪ್ಟಾಪ್, ಎರಡು ಮೊಬೈಲ್, ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಲಾಗಿದೆ. ಪಿಎಫ್ಐ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಫಯಾಜ್ ಅವರನ್ನು ಎನ್ಐಎ ಅಧಿಕಾರಿಗಳು ಅವರ ಗಂಗಾವತಿ ನಿವಾಸದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಫಯಾಜ್ ಅವರನ್ನು ನಂತರ ಬೆಂಗಳೂರಿನ ಕೆ.ಜಿ.ಹಳ್ಳಿ ಠಾಣೆಗೆ ಕರೆದೊಯ್ಯಲಾಯಿತು.
ತಮಿಳು ನಾಡಿನ ವಿಲ್ಲಾಪುರಂ, ಗೋಮತಿಪುರಂ, ಕುಲಮಂಗಲಂ ಸೇರಿದಂತೆ ಮಧುರೈ ನಗರದ 8 ಸ್ಥಳಗಳಲ್ಲಿ ಎನ್‌ಐಎ ಶೋಧ ನಡೆಸುತ್ತಿದೆ.
ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಾಲ್ವರು ಪಿಎಫ್‌ಐ ಮುಖಂಡರನ್ನು ಎನ್‌ಐಎ ವಶಕ್ಕೆ ಪಡೆದಿದೆ. ಪಿಎಫ್‌ಐ ಕಚೇರಿಗಳು ಮತ್ತು ಮುಖಂಡರ ನಿವಾಸಗಳ ಮೇಲೆ ಇಡಿ ದಾಳಿ ಪೂರ್ಣಗೊಂಡಿದೆ. ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ, ಕೇರಳ ರಾಜ್ಯ ಮುಖ್ಯಸ್ಥ ಸಿಪಿ ಮೊಹಮ್ಮದ್ ಬಶೀರ್, ರಾಷ್ಟ್ರೀಯ ಕಾರ್ಯದರ್ಶಿ ವಿಪಿ ನಜರುದ್ದೀನ್ ಮತ್ತು ರಾಷ್ಟ್ರೀಯ ಕೌನ್ಸಿಲ್ ಸದಸ್ಯ ಪ್ರೊ ಪಿ ಕೋಯಾ ಅವರನ್ನು ಬಂಧಿಸಲಾಗಿದೆ.
10 ರಾಜ್ಯಗಳಲ್ಲಿ ದಾಳಿ, 100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರು ವಶಕ್ಕೆ: ಭಾರತ 10 ರಾಜ್ಯಗಳಲ್ಲಿ ಎನ್ಐಎ ಮತ್ತು ಇಡಿ ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿಗೆ ಅಡ್ಡಿಪಡಿಸಿದ 100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.