ಬೆಂಗಳೂರಿನಲ್ಲಿರುವ ಪಿಎಫ್‌ಐ ಕಚೇರಿ
ಬೆಂಗಳೂರಿನಲ್ಲಿರುವ ಪಿಎಫ್‌ಐ ಕಚೇರಿ

ಸಮಾಜದಲ್ಲಿ ಶಾಂತಿ ಕದಡಲು ಯತ್ನ, ಸರ್ಕಾರ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ: 14 ಮಂದಿ ಪಿಎಫ್ಐ ಕಾರ್ಯಕರ್ತರ ಬಂಧನ

ರಾಜ್ಯ ಪೊಲೀಸರು ನಿನ್ನೆ ಗುರುವಾರ ಬೃಹತ್ ಮಟ್ಟದಲ್ಲಿ ದಾಳಿ ನಡೆಸಿ 14 ಪಿಎಫ್‌ಐ ಸದಸ್ಯರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ ಮತ್ತು 120 ಬಿ ಅಡಿಯಲ್ಲಿ ಸಮಾಜದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ, ಸರ್ಕಾರ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದಡಿ ಬಂಧಿಸಿದ್ದಾರೆ. 

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ವಿರುದ್ಧ ರಾಜ್ಯ ಪೊಲೀಸರು ನಿನ್ನೆ ಗುರುವಾರ ಬೃಹತ್ ಮಟ್ಟದಲ್ಲಿ ದಾಳಿ ನಡೆಸಿ 14 ಪಿಎಫ್‌ಐ ಸದಸ್ಯರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ ಮತ್ತು 120 ಬಿ ಅಡಿಯಲ್ಲಿ ಸಮಾಜದಲ್ಲಿ ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ, ಸರ್ಕಾರ ವಿರುದ್ಧ ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದಡಿ ಬಂಧಿಸಿದ್ದಾರೆ. 

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಕೇಂದ್ರೀಯ ಏಜೆನ್ಸಿಗಳ ಕೆಲವು ವಿಶ್ವಾಸಾರ್ಹ ಮಾಹಿತಿಗಳ ಆಧಾರದ ಮೇಲೆ ನಗರ ಪೊಲೀಸರು ಬೆಂಗಳೂರು ಪೂರ್ವದ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ 19 ಪಿಎಫ್‌ಐ ಸದಸ್ಯರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಎಫ್‌ಐಆರ್ ಆಧರಿಸಿ, ನಾವು 19 ಶಂಕಿತರನ್ನು ಗುರುತಿಸಿ 14 ಮಂದಿಯನ್ನು ಬಂಧಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಸಿ ಎಚ್ ಪ್ರತಾಪ್ ರೆಡ್ಡಿ ಮಾಧ್ಯಮ ಸಂವಾದದಲ್ಲಿ ಹೇಳಿದರು.

ಎನ್ಐಎ ಬೃಹತ್ ಕಾರ್ಯಾಚರಣೆ: ನಿನ್ನೆ ಬೆಳಗ್ಗೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ದಾವಣಗೆರೆ, ಉಡುಪಿ, ಮೈಸೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪಿಎಫ್‌ಐ ಸಂಘಟನೆಯ 18 ಮಂದಿಯ ಕಚೇರಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪುದುಚೇರಿ, ಅಸ್ಸಾಂ, ಉತ್ತರ ಪ್ರದೇಶ, ರಾಜಸ್ಥಾನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಪಿಎಫ್‌ಐ ವಿರುದ್ಧ ರಾಷ್ಟ್ರವ್ಯಾಪಿ ಕಾರ್ಯಾಚರಣೆಗಿಳಿದಿದ್ದವು. ಅದರ ಭಾಗವಾಗಿ ಪಿಎಫ್‌ಐ ವಿರುದ್ಧ ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಕಾರ್ಯಾಚರಣೆಗಿಳಿದಿದ್ದವು. ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಣಿಪುರಗಳಲ್ಲಿ ಸಹ ದಾಳಿ, ಶೋಧ ನಡೆದಿದ. ಈ ಸಂದರ್ಭದಲ್ಲಿ ಕೇಂದ್ರ ಸಂಸ್ಥೆ ದಾಖಲಿಸಿದ ಐದು ಪ್ರಕರಣಗಳಲ್ಲಿ ಕರ್ನಾಟಕದ ಏಳು ಮಂದಿ ಸೇರಿದಂತೆ 45 ಹಿರಿಯ PFI ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಕರ್ನಾಟಕದಲ್ಲಿ, ರಾಜ್ಯ ಪೊಲೀಸರ ಬೆಂಬಲದೊಂದಿಗೆ NIA ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೋಧ ನಡೆಸಿತು. PFI ಭಯೋತ್ಪಾದಕ ನಿಧಿ, ಭಯೋತ್ಪಾದನಾ ಚಟುವಟಿಕೆಗಳು, ಸಶಸ್ತ್ರ ತರಬೇತಿ ಶಿಬಿರಗಳನ್ನು ಸಂಘಟಿಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ಪ್ರೇರೇಪಿಸುವ ಆರೋಪ ಕೇಳಿಬರುತ್ತಿದೆ. 

ಕಳೆದ ಜುಲೈ 26 ರಂದು ದಕ್ಷಿಣ ಕನ್ನಡದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಮತ್ತು ಅದಕ್ಕೂ ಮೊದಲು ಫೆಬ್ರವರಿ 20 ರಂದು ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಿಎಫ್‌ಐ ಮೇಲೆ ರಾಷ್ಟ್ರೀಯ ತನಿಖಾ ದಳ ಈ ದಾಳಿ ನಡೆಸಿದೆ. 

ಶಿವಮೊಗ್ಗದಲ್ಲಿ, ಪಿಎಫ್‌ಐನ ಪ್ರಾದೇಶಿಕ ಮಟ್ಟದ ಅಧ್ಯಕ್ಷ ಶಾಹಿದ್ ಖಾನ್ ಅವರನ್ನು ನಿನ್ನೆ ಗುರುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿಯ ಅವರ ಮನೆಯಿಂದ ಕರೆತರಲಾಯಿತು. ದೃಢೀಕರಿಸದ ಮೂಲಗಳ ಪ್ರಕಾರ, ಪೊಲೀಸರು 20 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕನ್ನಡದಲ್ಲಿ ಐವರು ಪಿಎಫ್‌ಐ ಮುಖಂಡರಾದ ಅಬ್ದುಲ್ ಖಾದರ್ ಪುತ್ತೂರು, ಅಶ್ರಫ್ ಜೋಕಟ್ಟೆ, ತಫ್ಸೀರ್, ನವಾಝ್ ಕಾವೂರು ಮತ್ತು ಮೊಯ್ದೀನ್ ಹಳೆಯಂಗಡಿಯನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಡುಪಿಯಲ್ಲಿ ಪಿಎಫ್‌ಐ ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿರುವುದನ್ನು ವಿರೋಧಿಸಿ ಜಿಲ್ಲಾ ಪಿಎಫ್‌ಐ ಘಟಕದ ಸದಸ್ಯರು ಓಲ್ಡ್ ಡಯಾನಾ ಸರ್ಕಲ್ ಬಳಿ ರಸ್ತೆಗೆ ಆಗಮಿಸಿ ರಸ್ತೆ ತಡೆ ನಡೆಸಿದರು.

ದಾವಣಗೆರೆಯಲ್ಲಿ ಪಿಎಫ್‌ಐ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಸಂಘಟನೆಗೆ ಸಂಬಂಧಿಸಿದ ಇಬ್ಬರನ್ನು ಬೆಳಗಿನ ಜಾವ 4 ಗಂಟೆಗೆ ಅವರ ಮನೆಯಿಂದ ಕರೆದೊಯ್ದು ಅವರ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಹಾರ್ಡ್ ಡಿಸ್ಕ್ ಮತ್ತು ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಪಿಎಫ್‌ಐ ಮುಖಂಡರನ್ನು 24 ಗಂಟೆಯೊಳಗೆ ಬಿಡುಗಡೆಗೊಳಿಸುವಂತೆ ಎಸ್‌ಡಿಪಿಐ ಒತ್ತಾಯಿಸಿದೆ.

ಕೊಪ್ಪಳದಲ್ಲಿ, ಪಿಎಫ್‌ಐ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ಅವರನ್ನು ನಿನ್ನೆ ಬೆಳ್ಳಂಬೆಳಗ್ಗೆ ಎಗ್ದ ಕಾಲೋನಿಯಲ್ಲಿರುವ ಅವರ ನಿವಾಸದಿಂದ ಗಂಗಾವತಿಯಲ್ಲಿ ಕೊಪ್ಪಳ ಎಸ್ಪಿ ಅರುಣಾಂಗ್ಶು ಗಿರಿ ಸಮ್ಮುಖದಲ್ಲಿ ಕರೆತರಲಾಯಿತು. ಶಿರಸಿಯಲ್ಲಿ ಅಜೀಜ್ ಅಬ್ದುಲ್ ಶಾಕೂರ್ ಹೊನ್ನಾವರ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 

ಬೆಳಗಾವಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ನ್ನು ತಡೆದು PFI ಕಾರ್ಯಕರ್ತರು ಹಠಾತ್ ಪ್ರತಿಭಟನೆ ನಡೆಸಿದರು. ಪಿಎಫ್‌ಐ ಜಿಲ್ಲಾಧ್ಯಕ್ಷ ನವೀದ ಕಟಗಿ, ತಮ್ಮ ಹಾಗೂ ಸಂಘಟನೆಯ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದರು. 

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಿಎಫ್ಐ, ಸಮಾಜದ ಆಗುಹೋಗುಗಳ ಬಗ್ಗೆ ಅಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕಲು, ಮೌನಗೊಳಿಸಲು ತನಿಖಾ ಏಜೆನ್ಸಿಗಳನ್ನು ಬಳಸುವ ಫ್ಯಾಸಿಸ್ಟ್ ಆಡಳಿತದ ಕ್ರಮಗಳನ್ನು ಪ್ರತಿಭಟಿಸುತ್ತೇವೆ ಎಂದು ಟೀಕಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com