ಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾಗಿದ್ದ ಸಿಪಿಐ ಆರೋಗ್ಯ ಸ್ಥಿರ: ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್ ಲಿಫ್ಟ್

ಮಹಾರಾಷ್ಟ್ರ ಗಡಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಸುಮಾರು 50 ಜನರಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಮಲಾಪುರ ವೃತ್ತದ ಸಿಪಿಐ ಶ್ರೀಮಂತ ಇಲ್ಲಾಳ್ ಅವರ ಆರೋಗ್ಯ ಸ್ಥಿರವಾಗಿದೆ.
ಶ್ರೀಮಂತ್ ಇಲ್ಲಾಳ್
ಶ್ರೀಮಂತ್ ಇಲ್ಲಾಳ್

ಕಲಬುರಗಿ: ಮಹಾರಾಷ್ಟ್ರ ಗಡಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ದುಷ್ಕರ್ಮಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಸುಮಾರು 50 ಜನರಿಂದ ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಕಮಲಾಪುರ ವೃತ್ತದ ಸಿಪಿಐ ಶ್ರೀಮಂತ ಇಲ್ಲಾಳ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ  ಕಲಬುರಗಿ ಯುನೈಟೆಡ್ ಆಸ್ಪತ್ರೆ ನಿರ್ದೇಶಕ ಡಾ. ವಿಕ್ರಮ್ ಸಿದ್ದಾರೆಡ್ಡಿ, ಇಲ್ಲಾಳ್ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಅವರ ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲು ಬಯಸಿದ್ದಾರೆ, ಹೀಗಾಗಿ ಸೋಮವಾರ ಏರ್ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆದೊಯ್ಯಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ಇದೇ ವೇಳೆ ಹೊನ್ನಳ್ಳಿ ಗ್ರಾಮ ಸಮೀಪದ ಮಹಾರಾಷ್ಟ್ರದ ಗಡಿಯಲ್ಲಿ ಶುಕ್ರವಾರ ಕಲಬುರಗಿ ಗ್ರಾಮೀಣ ‌ಸಿಪಿಐ ಶ್ರೀಮಂತ ಇಲ್ಲಾಳ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಠಾಳ ಠಾಣೆಯಲ್ಲಿ 50 ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಎಸ್ ಪಿ ಪ್ರಸನ್ನ ದೇಸಾಯಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಹುಮನಾಬಾದ್ ಎಎಸ್ಪಿ ಶಿವಾಂಶು ರಜಪೂತ್ ಅವರನ್ನು ತನಿಖಾಧಿಕಾರಿಯನ್ನಾಗಿ ಮಾಡಲಾಗಿದೆ.  ಮಂಠಾಳ ಪೊಲೀಸರು ಈ ಸಂಬಂಧ ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ ಎಂದು ಬೀದರ್ ಎಸ್ಪಿ ಡೆಕ್ಕ ಕಿಶೋರ್ ಬಾಬು ಹೇಳಿದ್ದಾರೆ.

ಗಾಂಜಾ ದಂಧೆಕೋರರೊಬ್ಬರು ತುರೂರಿ ವಾಡಿ ಗ್ರಾಮದಿಂದ ಕಳ್ಳಸಾಗಣೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿ (ಗ್ರಾಮೀಣ) ಸಿಪಿಐ ಶ್ರೀಮಂತ ಇಲ್ಲಾಳ ನೇತೃತ್ವದ ಮಹಾಗಾಂವ ಪೊಲೀಸರ ತಂಡ ಶುಕ್ರವಾರ ರಾತ್ರಿ ಆರೋಪಿಯನ್ನು ಹಿಡಿಯಲು ತುರೂರಿ ವಾಡಿಗೆ ತೆರಳಿದ್ದರು. ಆದರೆ, ಸುಮಾರು 40-50 ಮಂದಿ ದುಷ್ಕರ್ಮಿಗಳು ಇಲ್ಲಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.  ಗಂಭೀರವಾಗಿ  ಗಾಯಗೊಂಡಿದ್ದ ಶ್ರೀಮಂತ್ ಇಲ್ಲಾಳ್ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com