ಗದಗ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ, ತನಿಖೆಗೆ ಆದೇಶ

ಗದಗ ಜಿಲ್ಲೆಯ ಶಾಲಾ ಆವರಣದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ ನಡೆಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಹುಬ್ಬಳ್ಳಿ: ಗದಗ ಜಿಲ್ಲೆಯ ಶಾಲಾ ಆವರಣದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ ನಡೆಸಿದ ಆರೋಪದ ಮೇಲೆ ಸರ್ಕಾರಿ ಶಾಲೆಯ ಪ್ರಾಂಶುಪಾಲರ ವಿರುದ್ಧ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.

ಕಳೆದ ವಾರ ಪ್ರಾಂಶುಪಾಲ ಮುನಾಫ್ ಬಿಜಾಪುರ ಅವರು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಆಕರ್ಷಕ ನಗದು ಬಹುಮಾನವನ್ನೂ ಘೋಷಿಸಿದ್ದರು. ಸ್ಪರ್ಧೆ ವಿಚಾರ ತಿಳಿದ ಕೆಲ ಪೋಷಕರು ಶಾಲೆಯ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಈ ವಿಚಾರ ತಿಳಿದು ಮಂಗಳವಾರ ಬಲಪಂಥೀಯ ಸಂಘಟನೆ ಸದಸ್ಯರು ನಾಗಾವಿ ಗ್ರಾಮದ ಶಾಲೆಗೆ ಭೇಟಿ ನೀಡಿ, ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು, ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಗದಗ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿ ಸಮಾಧಾನಪಡಿಸಿದ ಬಳಿಕ ಗುಂಪು ಅಲ್ಲಿಂದ ತೆರಳಿತು.

ಗದಗ ಬಿಇಒ ಎನ್‌.ಎಂ. ನಡುವಿನಮನಿ ಶಾಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 'ಪ್ರಾಂಶುಪಾಲರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ವಿಚಾರಣೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

'ಪ್ರಾಂಶುಪಾಲರು ಸರ್ಕಾರಿ ನೌಕರರಾಗಿದ್ದು, ಪಠ್ಯಕ್ರಮದಲ್ಲಿರುವುದನ್ನು ಹೇಳಿಕೊಡಬೇಕು. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಕ್ಕೆ 5 ಸಾವಿರ ಹಾಗೂ ಎರಡನೇ ಬಹುಮಾನವಾಗಿ 3 ಸಾವಿರ ಹಾಗೂ ಮೂರನೇ ಬಹುಮಾನವಾಗಿ 2 ಸಾವಿರ ರೂ.ಗಳನ್ನು ನೀಡಿ ಮಕ್ಕಳನ್ನು ಸೆಳೆಯಲು ಪ್ರಾಂಶುಪಾಲರು ಯತ್ನಿಸಿದ್ದರು. ಒಂದು ವೇಳೆ ಇದು ಮತಾಂತರದ ಯತ್ನವಾಗಿದ್ದರೆ ಹೇಗೆ. ಪ್ರಾಂಶುಪಾಲರನ್ನು ಅಮಾನತು ಮಾಡಬೇಕು ಹಾಗೂ ಪೊಲೀಸರು ತನಿಖೆ ನಡೆಸಬೇಕು' ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕ್ಷಮೆಯಾಚಿಸಿದ ಪ್ರಾಂಶುಪಾಲರು

ಪ್ರಾಂಶುಪಾಲ ಮುನಾಫ್ ಬಿಜಾಪುರ್ ಅವರು ನೆರೆದವರ ಮನವೊಲಿಸಲು ಪ್ರಯತ್ನಿಸಿದರು. 'ನಾನು ಯಾವುದೇ ತಪ್ಪು ಉದ್ದೇಶವಿಲ್ಲದೆ ಸ್ಪರ್ಧೆಯನ್ನು ಆಯೋಜಿಸಿದೆ. ಗದಗದ ಖ್ಯಾತ ಮುಸ್ಲಿಂ ಮುಖಂಡ ಜುನೇದಸಾಬ್ ಉಮಚಗಿ ಅವರು ಕೆಲವು ದಿನಗಳ ಹಿಂದೆ ನಮ್ಮ ಶಾಲೆಗೆ ಭೇಟಿ ನೀಡಿ ಮುಹಮ್ಮದ್ ಪೈಗಂಬರ್ ಅವರ ಕುರಿತಾದ ಎರಡು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ್ದರು. ನಂತರ ನಾನು ಸ್ಪರ್ಧೆಯನ್ನು ಆಯೋಜಿಸಿದ್ದೆ. ನಗದು ಬಹುಮಾನವು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ ಎಂದು ಭಾವಿಸಿದೆ. ನಾನು ಈಗಾಗಲೇ ಪ್ರತಿಭಟನಾಕಾರರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಕ್ಷಮೆಯಾಚಿಸಿದ್ದೇನೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com