ಎಸ್ಸಿಗಳ ಯಾವುದೇ ಪಂಗಡಕ್ಕೆ ಅನ್ಯಾಯವಾಗಿಲ್ಲ: ಸಚಿವ ಗೋವಿಂದ ಕಾರಜೋಳ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳಮೀಸಲಾತಿಯಲ್ಲಿ ಯಾವುದೇ ಪಂಗಡಕ್ಕೂ ಅನ್ಯಾಯವಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮಂಗಳವಾರ ಹೇಳಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ,
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಹುಬ್ಬಳ್ಳಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳಮೀಸಲಾತಿಯಲ್ಲಿ ಯಾವುದೇ ಪಂಗಡಕ್ಕೂ ಅನ್ಯಾಯವಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಮಂಗಳವಾರ ಹೇಳಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ,

ಒಳಮೀಸಲಾತಿ ಮತ್ತು ಎಸ್‌ಸಿ ಕೋಟಾ ಹೆಚ್ಚಿಸುವ ನಿರ್ಧಾರಕ್ಕೆ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಕರ್ನಾಟಕ ರಾಜ್ಯ ಎಸ್‌ಸಿ ಫೆಡರೇಶನ್‌ನಿಂದ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದ ಸಿದ್ಧತೆಗಳನ್ನು ಮೇಲ್ವಿಚಾರಣೆ ನಡೆಸಲು ಕಾರಜೋಳ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ್ದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ 75 ವಷದಲ್ಲಿ 60 ವರ್ಷ ಕಾಂಗ್ರೆಸ್ ಆಡಳಿತ ಮಾಡಿದೆ. ತನ್ನ ಆಡಳಿತ ಅವಧಿಯಲ್ಲಿ ತಳ ಸಮುದಾಯಗಳನ್ನು ಕೇವಲ ವೋಟ್ ಬ್ಯಾಂಕ್ ಮಾಡಿ, ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದೆ. ಅಂಬೇಡ್ಕರ್ ಅವರಿಗೆ ಸಹ ಅವಮಾನ ಮಾಡಿದೆ. ಇದಕ್ಕಾಗಿ ಕಾಂಗ್ರೆಸ್‍ಗೆ ಮೀಸಲಾತಿ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಬಸವರಾಜ ಬೊಮ್ಮಾಯಿ ಸಫಾಯಿ ಕರ್ಮಚಾರಿಗಳನ್ನು ಸರ್ಕಾರಿ ನೌಕರರನ್ನಾಗಿ ಮಾಡಿದ್ದಾರೆ. ಮೀಸಲಾತಿ ವಿಚಾರ ಕೇವಲ ಚುನಾವಣೆಗಾಗಿ ಅಲ್ಲ, ಕೇಂದ್ರಕ್ಕೆ ಕಳಿಸಲಾಗಿದೆ. ನಮ್ಮ ಸರ್ಕಾರದ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ರಾಜ್ಯ ಸರ್ಕಾರದ ಪ್ರಕ್ರಿಯೆಗಳನ್ನು ಕಾನೂನು ಬದ್ಧವಾಗಿ ಮಾಡಿದ್ದೇವೆ ಎಂದು ಹೇಳಿದರು.

ಇದೇ ವೇಳೆ ಮಾಜಿ ಸಿಎಂ ಮತ್ತು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ನಿವಾಸದ ಮೇಲಿನ ದಾಳಿ ನಡೆದ ಘಟನೆ ಕುರಿತು ಪ್ರತಿಕ್ರಿಯಿಸಿ, ಇದು ದುರದೃಷ್ಟಕರ ಘಟನೆ ಎಂದರು,

ಪ್ರಚೋದನೆಗೊಳಾದ ಬಂಜಾರ ಸಮುದಾಯದ ಕೆಲವರು ಇಂತಹ ದಾಳಿ ನಡೆಸಿದ್ದಾರೆ. ಈಗಾಗಲೇ ಸಮುದಾಯದ ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ ಎಂದು ತಿಳಿಸಿದರು.

ಬಳಿಕ ಅಧಿಕಾರಕ್ಕೆ ಬಂದರೆ ಎಸ್‌ಸಿಗಳ ಒಳಮೀಸಲಾತಿ ಕುರಿತ ಸರ್ಕಾರದ ನಿರ್ಧಾರವನ್ನು ಹಿಂಪಡೆಯುವ ಕುರಿತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದು ಶೋಷಿತ ವರ್ಗಗಳನ್ನು ತನ್ನ ವೋಟ್ ಬ್ಯಾಂಕ್'ಗೆ ಬಳಕೆ ಮಾಡಿಕೊಂಡಿದ್ದರ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದರು.

ಎಸ್‌ಸಿಗಳ ಒಳಮೀಸಲಾತಿ ಕುರಿತು ಬಿಜೆಪಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಭಾವನೆ ಕಾಂಗ್ರೆಸ್ ನಲ್ಲಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ದಿಟ್ಟ ಹೆಜ್ಜೆಯನ್ನಿಟ್ಟರು. ಬಿಜೆಪಿ ಯಾವಾಗಲೂ ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದು. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ಜಾರಿಗೊಳಿಸುತ್ತಿದೆ. ಸಮಾಜದ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ, ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ಬಿಜೆಪಿ ಶ್ರಮಿಸುತ್ತಿದೆ. ಇದಕ್ಕಾಗಿಯೇ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈ ನಡುವೆ ಒಳಮೀಸಲಾತಿ ಹೆಚ್ಚಳದ ನಿರ್ಧಾರಕ್ಕೆ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಎಸ್ಸಿ ಸಮುದಾಯಕ್ಕೆ ಸೇರಿದ ಹಲವು ಪಂಗಡಗಳು ಹುಬ್ಬಳ್ಳಿಯಲ್ಲಿ ಏಪ್ರಿಲ್ 6 ರಂದು ನೆಹರು ಮೈದಾನದಲ್ಲಿ ಕೃತಜ್ಞತಾ ಸಮಾವೇಶವನ್ನು ಆಯೋಜಿಸಿವೆ.

ರಾಜ್ಯದ ವಿವಿಧ ಭಾಗಗಳಿಂದ ಸಮುದಾಯದ ಎಲ್ಲಾ 101 ಪಂಗಡಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸಮಾವೇಶದ ಕುರಿತು ಮಾಹಿತಿ ನೀಡಿದ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಿ ನಾರಾಯಣಸ್ವಾಮಿ ಅವರು, ಕೆಲವು ನಿರ್ದಿಷ್ಟ ಪಂಗಡಗಳು ಎಸ್‌ಸಿ ಕೋಟಾದಿಂದ ಗರಿಷ್ಠ ಲಾಭವನ್ನು ಪಡೆಯುತ್ತಿರುವುದರಿಂದ ಒಳ ಮೀಸಲಾತಿ ವಿಷಯ ಹಳೆಯದಾಗಿದೆ. ಪಂಗಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿ ಆಯಾ ಗುಂಪಿಗೆ ಆಂತರಿಕ ಕೋಟಾವನ್ನು ನಿಗದಿಪಡಿಸುವ ಮೂಲಕ ರಾಜ್ಯ ಸರ್ಕಾರವು ಹಳೆಯ ಸಮಸ್ಯೆಗೆ ಪರಿಹಾರವನ್ನು ನೀಡಿದೆ. ಹೀಗಾಗಿ ಈ ಕುರಿತು ನಿರ್ಧಾರ ಕೈಗೊಂಡ ಸಿಎಂ ಬೊಮ್ಮಾಯಿ ಹಾಗೂ ಸಮಿತಿಯ ಇತರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಲು ಸಮುದಾಯ ಸಮಾವೇಶ ನಡೆಸುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com