ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಅಗತ್ಯವಿದೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ (ಸಂದರ್ಶನ)

ಕಂಪ್ಯೂಟರೀಕರಣದ ನಂತರ ಸರ್ಕಾರಿ ವಲಯದಲ್ಲಿ ಉದ್ಯೋಗಗಳು ಕ್ಷೀಣಿಸುತ್ತಿರುವ ಕಾರಣ, ಖಾಸಗಿ ವಲಯದಲ್ಲಿಯೂ ಮೀಸಲಾತಿಯ ಅಗತ್ಯವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಬೆಂಗಳೂರು: ಕಂಪ್ಯೂಟರೀಕರಣದ ನಂತರ ಸರ್ಕಾರಿ ವಲಯದಲ್ಲಿ ಉದ್ಯೋಗಗಳು ಕ್ಷೀಣಿಸುತ್ತಿರುವ ಕಾರಣ, ಖಾಸಗಿ ವಲಯದಲ್ಲಿಯೂ ಮೀಸಲಾತಿಯ ಅಗತ್ಯವಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ ನಾರಾಯಣಸ್ವಾಮಿ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೀಸಲಾತಿ ಹಾಗೂ ಚುನಾವಣೆ ಕುರಿತು ಮಾತನಾಡಿದ್ದಾರೆ.

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿ ಪಕ್ಷದ ಪ್ರಚಾರ ಯಾವ ರೀತಿ ಬದಲಾಗಲಿದೆ?
ನಮ್ಮ ಸರ್ಕಾರಗಳು ಏನು ಮಾಡಿದೆ ಎಂಬುದನ್ನು ನಾವು ಜನರಿಗೆ ಹೇಳುತ್ತಲೇ ಇರುತ್ತೇವೆ. ನಮ್ಮ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಸಂಘಟನಾ ಕೌಶಲ್ಯ, ಗೃಹ ಸಚಿವ ಅಮಿತ್ ಶಾ ಅವರ ಗುಜರಾತ್‌ನಲ್ಲಿ 6 ಚುನಾವಣೆಗಳನ್ನು ಎದುರಿಸಿದ ಅನುಭವ, ಆಡಳಿತ ವಿರೋಧಿಗಳಿದ್ದರೂ ಕೂಡ ಚುನಾವಣೆಗಳನ್ನು ಎದುರಿಸುವುದು ಮತ್ತು ಅಭಿವೃದ್ಧಿಯ ಮೇಲೆ ಚುನಾವಣೆ ಎದುರಿಸುವ ಪ್ರಧಾನಿ ಮೋದಿ ಅವರ ಪರಿಕಲ್ಪನೆ ಬಿಜೆಪಿಯ ವಿಶೇಷತೆ. ನಾವು ಏನು ಮಾಡಿದ್ದೇವೆ ಎಂಬುದನ್ನು ಫಲಾನುಭವಿಗಳಿಗೆ ಹೇಳುತ್ತಲೇ ಇರಬೇಕು, ನಮ್ಮ ಪಕ್ಷದ ನಾಯಕರು ಇದೀಗ ಆ ಕಾರ್ಯವನ್ನು ಮಾಡುತ್ತಿದ್ದಾರೆ.

ಮೀಸಲಾತಿ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯ?
ಮೀಸಲಾತಿ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದು, ವರ್ಗೀಕರಣದ ಅಗತ್ಯವಿತ್ತು. ನ್ಯಾಯಮೂರ್ತಿ ಉಷಾ ಮೆಹ್ರಾ ಆಯೋಗ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅಸ್ಪೃಶ್ಯತೆ ಇದೆ. ಪ್ರತಿ ವರ್ಷ ನಾವು ಅಸ್ಪೃಶ್ಯರ ಸಂಖ್ಯೆಯನ್ನು ಹೆಚ್ಚಿಸುತ್ತಿದ್ದೇವೆ. ಇಂದಿಗೂ ಶೋಷಿತ ಸಮುದಾಯಗಳನ್ನು ಗುರುತಿಸುತ್ತಿದ್ದೇವೆ. ಅಂದರೆ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂದರ್ಥ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಮಂಡಳಿ, ನಿಗಮಗಳನ್ನು ರಚಿಸಿ ಹಣ ಮಂಜೂರು ಮಾಡಿದರು. ಆದರೆ ಅದು ಕೇವಲ ಹೆಸರಿಗಷ್ಟೇ ಆಗಬಾರದು. ಆರ್ಥಿಕ ಉನ್ನತಿ ಇಲ್ಲದೆ ಯಾವ ಯೋಜನೆಯೂ ಈ ಜನರಿಗೆ ನೆರವಾಗುವುದಿಲ್ಲ. ಆರ್ಥಿಕ ಉನ್ನತಿಗಾಗಿ ಇಂತಹ ಉಪಕ್ರಮಗಳಿಗೆ ಬಜೆಟ್ ಮೀಸಲಿಟ್ಟಿಲ್ಲ. ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಈ ಬಾರಿಯ ಬಜೆಟ್ ಹೆಚ್ಚು ಗಮನಹರಿಸಿದೆ.

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಲಿಲ್ಲವೇಕೆ?
ಮೊದಲು ಇರುವ ಸಮಸ್ಯೆ ಪರಿಹಾರವಾಗಬೇಕಿದೆ. ಸದಾಶಿವ ವರದಿಯಲ್ಲಿ ಎಸ್‌ಸಿ ಎಡಗೈಗೆ ಶೇ.6, ಎಸ್‌ಸಿ ಬಲಗೈಗೆ ಶೇ.5, ಸ್ಪೃಶ್ಯರಿಗೆ ಶೇ. 3 ಹಾಗೂ ಇತರರಿಗೆ ಶೇ. 1 ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದೆ. 26 ಲಕ್ಷ ಮಂದಿ ಸ್ಪೃಶ್ಯ ವರ್ಗದವರಿದ್ದಾರೆ. ಹೀಗಾಗಿ ವರದಿಯನ್ನು ಜಾರಿಗೆ ತರಲಾಗಲಿಲ್ಲ. ಆಯಾ ಸಮುದಾಯಗಳ ಜನಸಂಖ್ಯೆಗೆ ಹೋಲಿಸಿದರೆ ಮೀಸಲಾತಿಗಾಗಿ ಸದಾಶಿವ ಆಯೋಗದ ಶಿಫಾರಸು ಕಡಿಮೆ. ಹಾಗಾಗಿ ವರದಿಯನ್ನು ಹಾಗೆಯೇ ತೆಗೆದುಕೊಳ್ಳುವಂತಿಲ್ಲ. ಸ್ಪೃಶ್ಯ ವರ್ಗದವರಿಗೆ ಶಿಫಾರಸು ಮಾಡಲಾದ ಮೀಸಲಾತಿಗಳನ್ನು ಸರಿಪಡಿಸಲು ನಾವು ಅದನ್ನು ಬೈಪಾಸ್ ಮಾಡಬೇಕಾಗಿತ್ತು. ಅಲ್ಲದೆ, ಸದಾಶಿವ ವರದಿಯಲ್ಲಿ ಎಸ್ಸಿಗಳಿಗೆ ಶೇ.15ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಈಗ ಅದು ಶೇ 17ಕ್ಕೆ ಏರಿಕೆಯಾಗಿದೆ. ನಾವು ಅದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದೇವೆ ಎಂದು ಹೇಳಿದರೆ, ಅದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಈ ಎಲ್ಲ ವರದಿಗಳನ್ನು ಅಧ್ಯಯನ ಮಾಡಿ ಕಾನೂನು ಸಚಿವ ಜೆ.ಸಿ.ಮಾಧು ಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ತನ್ನ ವರದಿಯನ್ನು ನೀಡಿದ್ದು, ಸುಮಾರು 240 ವಿಷಯಗಳು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರ್ಪಡೆಯಾಗಲು ಕಾಯುತ್ತಿವೆ.

SC/ST ಗಳ ಮೀಸಲಾತಿ ಹೆಚ್ಚಳದ ನಂತರದ ಬೆಳವಣಿಗೆಗಳ ಬಗ್ಗೆ ಏನು ಹೇಳುತ್ತೀರಿ?
ಭೂಸುಧಾರಣೆ, ಬಡವರಿಗೆ ಭೂಮಿಯನ್ನು ಹಂಚಲು, ಉಳುಮೆದಾರರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು 'ಜಮೀಂದಾರಿ' ವ್ಯವಸ್ಥೆಯನ್ನು ಮೊಟಕುಗೊಳಿಸಲು 9ನೇ ಶೆಡ್ಯೂಲ್ ಅನ್ನು ತರಲಾಗಿದೆ. ಒಂದೊಮ್ಮೆ ಇದನ್ನು 9ನೇ ಶೆಡ್ಯೂಲ್‌ಗೆ ಸೇರಿಸಿದರೆ ಅದು ನ್ಯಾಯಾಂಗದ ವ್ಯಾಪ್ತಿಯಿಂದ ಹೊರಗಿರಬೇಕಾಗುತ್ತದೆ. ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ ಎಂಬ ಮಾರ್ಗಸೂಚಿ ಈ ಹಿಂದೆ ಇತ್ತು. ಆದರೆ ಇದೀಗ 9ನೇ ಶೆಡ್ಯೂಲ್‌ಗೆ ವಿಷಯ ಸೇರಿಸುವ ಸರ್ಕಾರದ ಆದೇಶವನ್ನೂ ಪ್ರಶ್ನಿಸಬಹುದಾಗಿದೆ. ಇದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಉದಾಹರಣೆಗೆ, ತಮಿಳುನಾಡು ಪ್ರಕರಣವೊಂದನ್ನು ಗಮನಿಸಿದರೆ, ಈ ಪ್ರಕರಣದಲ್ಲಿ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗಿದೆ. ಆದರೆ ಸುಪ್ರೀಂ ಕೋರ್ಟ್ ಪ್ರಕರಣವನ್ನು ಒಪ್ಪಿಕೊಳ್ಳದ ಅಥವಾ ಯಾವುದೇ ತೀರ್ಪು ನೀಡದ ಕಾರಣ ರಾಜ್ಯವು ಮೀಸಲಾತಿ ವರ್ಗೀಕರಣವನ್ನು ಜಾರಿಗೊಳಿಸುತ್ತಿದೆ. ಜನಸಂಖ್ಯೆಯ ಆಧಾರದ ಮೇಲೆ, ಕೆಲವು ರಾಜ್ಯಗಳಲ್ಲಿ 80 ಪ್ರತಿಶತದಷ್ಟು ಮೀಸಲಾತಿ ಇದೆ. ಗುಜರಾತ್‌ನಲ್ಲೂ ಕೂಡ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರದಿಂದ ಎಸ್‌ಸಿ/ಎಸ್‌ಟಿ ಕೋಟಾ ಹೆಚ್ಚಿಸುವ ಪ್ರಸ್ತಾವನೆ ಕೇಂದ್ರಕ್ಕೆ ತಲುಪಿದೆ.

ರಾಜ್ಯದ ಸಾಮಾಜಿಕ ನ್ಯಾಯ ಸಚಿವರಾಗಿರುವ ನೀವು ಮುಸ್ಲಿಮರು ಸೇರಿದಂತೆ ಎಲ್ಲರಿಗೂ ನ್ಯಾಯ ಒದಗಿಸಬೇಕು. ಮುಸ್ಲಿಮರಿಗೆ 4 ಪ್ರತಿಶತ ಒಬಿಸಿ ಮೀಸಲಾತಿಯನ್ನು ರದ್ದುಪಡಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅವರು ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿದ್ದ ಕಾರಣ 2ಬಿ ಅಡಿಯಲ್ಲಿ ಪ್ರತ್ಯೇಕ ಮೀಸಲಾತಿಯ ಅಗತ್ಯವಿರಲಿಲ್ಲ. ಅವರ ಸ್ಥಿತಿ ನಮಗಿಂತ ('ಅಸ್ಪೃಶ್ಯ ದಲಿತರು') ದಯನೀಯವಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಅವರು ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುವ ವ್ಯಾಪ್ತಿಯನ್ನು ಹೊಂದಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ದೇಶದಲ್ಲಿ 65 ವರ್ಷಗಳ ಆಡಳಿತದಲ್ಲಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮುದಾಯದ ಸ್ಥಾನಮಾನವನ್ನು ಉನ್ನತೀಕರಿಸುವಲ್ಲಿ ವಿಫಲವಾಗಿದೆ. ಇದೀಗ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳೆರಡರಲ್ಲೂ ಮೀಸಲಾತಿಗೆ ಅರ್ಹರಾಗಿದ್ದಾರೆ. ವಾಸ್ತವವಾಗಿ ಇಡಬ್ಲ್ಯೂಎಸ್ ಅಡಿಯಲ್ಲಿ ಬರುವವರು ಬೇರೆ ಯಾವುದೇ ವರ್ಗದ ಅಡಿಯಲ್ಲಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ.

ಜನಗಣತಿಯ ನಂತರ ಮೀಸಲಾತಿ ಅಂಕಿಅಂಶಗಳನ್ನು ಪರಿಷ್ಕರಿಸಬಹುದೇ?
ಪ್ರಕ್ರಿಯೆಯು ಹಂತ ಹಂತವಾಗಿ ನಡೆಯಬೇಕು. ಆದರೆ, ಯಾವ ಸರಕಾರವೂ ಅದನ್ನು ಮಾಡಲು ಮುಂದೆ ಬಂದಿಲ್ಲ.

ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲಾತಿಯ ಬೇಡಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕಾರ್ಮಿಕ ನೀತಿಗಳನ್ನು ಬದಲಾಯಿಸದ ಹೊರತು ಕೈಗಾರಿಕೀಕರಣವಾಗುವುದಿಲ್ಲ. ನಾವು ನೀತಿಗಳನ್ನು ಬದಲಾಯಿಸಿದ್ದೇವೆ ಮತ್ತು ಕೈಗಾರಿಕೀಕರಣವನ್ನು ಹೆಚ್ಚಿಸಿದ್ದೇವೆ. ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಕೇವಲ ಜಾತಿಗಳ ಆಧಾರದ ಮೇಲೆ ಜಾರಿಗೆ ತರದೆ, ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ನೀಡಲು ಜಾರಿಗೆ ತರಬೇಕು. ಹೊರಗಿನವರು ಬಂದು ನಮ್ಮೆಲ್ಲರ ನೆರವಿನಿಂದ ಇಲ್ಲಿ ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸುತ್ತಾರೆ. ಕಂಪ್ಯೂಟರೀಕರಣ ಬಳಿಕ ಸರ್ಕಾರಿ ವಲಯದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿದೆ. ಹೀಗಾಗಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಯಾಗಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯ.

ಮೀಸಲಾತಿ ಬಗ್ಗೆ ಟೀಕೆ ಮಾಡಲಾಗುತ್ತಿದೆ. ಈ ಟೀಕೆಯಂತೆ ಮೀಸಲಾತಿ ವ್ಯವಸ್ಥೆಯು ಅಪ್ರಸ್ತುತವಾಗಿದೆಯೇ?
ಮೇಲ್ಜಾತಿಗಳು ಮತ್ತು ಜಮೀನ್ದಾರರು ಎಂದು ಪರಿಗಣಿಸಲ್ಪಟ್ಟ ಮತ್ತು ಈ ದೇಶವನ್ನು ಮುಖ್ಯವಾಹಿನಿಯಲ್ಲಿ 75 ವರ್ಷಗಳ ಕಾಲ ನಡೆಸಿದ ಆ ಸಮುದಾಯಗಳು ಸಹ ಮೀಸಲಾತಿಯನ್ನು ಬಯಸಿದಾಗ, ಮೀಸಲಾತಿಯ ಪರಿಕಲ್ಪನೆಯು ಅಪ್ರಸ್ತುತವಾಗುತ್ತದೆ ಎಂದು ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ರಾಜ್ಯ ಸರ್ಕಾರವು ಹೊಸ ವರ್ಗಗಳನ್ನು ಮಾಡಿದೆ. ಒಕ್ಕಲಿಗರು ಮತ್ತು ಲಿಂಗಾಯತರಿಗೆ ಮೀಸಲಾತಿ ನೀಡಲು 2ಸಿ ಮತ್ತು 2ಡಿಯನ್ನು ಸೃಷ್ಟಿಸಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಅನುಸರಿಸುವ ಅಧಿಕಾರವನ್ನು ರಾಜ್ಯಗಳು ಹೊಂದಿವೆ. ಮೀಸಲಾತಿಗಾಗಿ ಸಮುದಾಯಗಳನ್ನು ಸೇರಿಸುವ ಮತ್ತು ಹೊರಗಿಡುವ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ಅವಕಾಶ ನೀಡಲು ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಇನ್ನೂ ಹೆಚ್ಚಿನವರನ್ನು ಮುಖ್ಯವಾಹಿನಿಗೆ ತರುವ ಯೋಜನೆಗಳಾಗಬೇಕಿತ್ತು. ಹೆಚ್ಚಿನ ಸಮುದಾಯಗಳು ಮುಖ್ಯವಾಹಿನಿಯಲ್ಲಿಲ್ಲದಿದ್ದರೆ ಮತ್ತು ಹಿಂದುಳಿದ ಪಟ್ಟಿಗೆ ಸೇರಲು ಬಯಸಿದರೆ, ದೇಶವು ಹಿಂದುಳಿದಿದೆ ಎಂದರ್ಥ.

ಮೀಸಲಾತಿಯನ್ನು ಕೇವಲ ಜಾತಿಗಳ ಆಧಾರದ ಮೇಲೆ ಏಕೆ ಜಾರಿಗೊಳಿಸಬಾರದು?
ಒಂದು ವರ್ಗದ ಜೀವನಶೈಲಿ ಮತ್ತು ವಿಶ್ವಾಸಾರ್ಹತೆಯು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತಲೇ ಇರುತ್ತದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ ಯಾದವರಾದ ಕಾಡುಗೊಲ್ಲರು ಆಡಳಿತಗಾರರು. ಆದರೆ, ಕರ್ನಾಟಕದ ಚಿತ್ರದುರ್ಗದಂತಹ ಪ್ರದೇಶಗಳಲ್ಲಿ ದಲಿತರಿಗೆ ಹೋಲಿಸಿದರೆ ಅವರ ಪರಿಸ್ಥಿತಿ ದಯನೀಯವಾಗಿದೆ.

ಕಾಡುಗೊಲ್ಲರ ಎಸ್ಟಿ ಮೀಸಲಾತಿ ಬಗ್ಗೆ ಏನು ಹೇಳುತ್ತೀರಿ?
ಸಮುದಾಯದ ಮೇಲಿನ ಮಾನವಶಾಸ್ತ್ರದ ಸಂಶೋಧನೆಗಳು ತಪ್ಪು ವರದಿಯನ್ನು ನೀಡಿದೆ. ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಲು ಇರುವ ಅಡೆತಡೆಗಳನ್ನು ನಿವಾರಿಸಲು ನಾನು ಪ್ರಾಮಾಣಿಕವಾಗಿ ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ.

ದೇಶದಲ್ಲಿ ಮೀಸಲಾತಿ ವ್ಯವಸ್ಥೆ ಎಷ್ಟು ದಿನ ಮುಂದುವರಿಯಬೇಕು?
ಹತ್ತು ವರ್ಷಗಳ ಕಾಲ ಇರಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆದರೆ ಹತ್ತು ವರ್ಷಗಳ ನಂತರ ಅದನ್ನು ತೆಗೆದರೆ ಜನರು ತಮಗೆ ಮತ ಹಾಕುವುದಿಲ್ಲ ಎಂದು ಪಕ್ಷಗಳು (ಕಾಂಗ್ರೆಸ್) ಭಾವಿಸಿದವು. ಹೀಗಾಗಿ ರಾಜಕಾರಣಿಗಳು ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ದೇಶದಲ್ಲಿ ಗ್ರಾಮೀಣ ಭಾಗಗಳಲ್ಲಿ ಮೇಲು ಕೀಳು ಎಂಬ ಭಾವನೆ ಇನ್ನೂ ಚಾಲ್ತಿಯಲ್ಲಿದೆ. ಹೀಗಾಗಿ ಮೀಸಲಾತಿ ತೆಗೆಯುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ.

ಹಲವಾರು ಸಮುದಾಯಗಳಿಗೆ ಮೀಸಲಾತಿ ನೀಡಲಾಗುತ್ತಿದ್ದು, ಈ ನಿರ್ಧಾರಗಳು ವಿಧಾನಸಭೆ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಇದು ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಈ ಹಿಂದೆ ಮಾದಿಗ ಸಮುದಾಯದ ಶೇ 40ರಷ್ಟು ಜನರು ಬಿಜೆಪಿಗೆ ಮತ ಹಾಕುತ್ತಿದ್ದರು. ಇದೀಗ ಶೇ.80ರಷ್ಟು ಜನರು ಮತಹಾಕುತ್ತಿದ್ದಾರೆ.

ಈ ಬಾರಿ ಪಕ್ಷಕ್ಕಿರುವ ಅವಕಾಶಗಳೇನು?
ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದು ಮತ ಕೇಳಿತ್ತು. ಆದರೆ ಶೇ.40 ರಷ್ಟು ಜನರು ಅಭಿವೃದ್ಧಿ ಬದಲಾಗಿ ಊಳಿಗಮಾನ್ಯ ಪದ್ಧತಿಗೆ ಮತ ಹಾಕಿದ್ದರು. 2014ರ ನಂತರ ಅಭಿವೃದ್ಧಿಯ ಅಜೆಂಡಾದಲ್ಲಿ ಬಿಜೆಪಿ ಹಲವು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಯಡಿಯೂಪ್ಪ ಸರ್ಕಾರ ಮತ್ತು ಮೋದಿ ಸರ್ಕಾರ ಮಾಡಿದ ಅಭಿವೃದ್ಧಿಯಲ್ಲಿ ವ್ಯತ್ಯಾಸಗಳಿವೆ. ಯಡಿಯೂರಪ್ಪ ಅವರನ್ನು ಎಲ್ಲಾ ಸಮುದಾಯಗಳು ಒಪ್ಪಿಕೊಂಡಿವೆ.

ರಾಜ್ಯ ಸಚಿವರಾಗಿದ್ದಕ್ಕೂ ಈಗ ಕೇಂದ್ರ ಸಚಿವರಾಗಿದ್ದಕ್ಕೂ ಇರುವ ವ್ಯತ್ಯಾಸವೇನು?
ಕರ್ನಾಟಕದಲ್ಲಿ ನಾನು ಮಹಾಭಾರತದಲ್ಲಿ ಕರ್ಣನಂತೆ ಕೆಲಸ ಮಾಡಿದ್ದೆ. ಈಗ, ಕೆಲವು ಉತ್ತರ ಮತ್ತು ಈಶಾನ್ಯ ರಾಜ್ಯಗಳು ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ತುಳಿತಕ್ಕೊಳಗಾದವರಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಆಡಳಿತದ ಲೋಪವನ್ನು ನಾನು ಕಂಡುಕೊಳ್ಳುತ್ತಿರುವುದರಿಂದ ಅರ್ಜುನನಂತೆ ಕೆಲಸ ಮಾಡುತ್ತಿದ್ದೇನೆ. ದೀನದಲಿತರನ್ನು ಮೇಲೆತ್ತಲು ಯೋಜನೆಗಳನ್ನು ರೂಪಿಸಲು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ಕೇರಳದಲ್ಲಿ ಆಡಳಿತವು ಸುಸ್ಥಿರ ಮಾದರಿಗಳೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಇತರ ರಾಜ್ಯಗಳಿಗೆ ಮಾರ್ಗದರ್ಶನ ನೀಡಲು ಅರ್ಜುನನಾಗಿ ಕೆಲಸ ಮಾಡುತ್ತಿದ್ದೇನೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾಜರ್ನ್ ಖರ್ಗೆ ಕರ್ನಾಟಕದವರು. ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಖರ್ಗೆ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ. ಇಲ್ಲಿಯವರೆಗೂ ಅವರನ್ನು ಕರ್ನಾಟಕ ರಾಜಕೀಯದ ಮೇಲೆ ಪ್ರಭಾವ ಬೀರುವ ನಾಯಕನಾಗಿ ನಾನು ನೋಡಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com