social_icon

INTERVIEW: ಅಸಮಾನತೆ ಇರುವವರೆಗೂ ಮೀಸಲಾತಿ ಬೇಕು- ಸಚಿವ ಜೆಸಿ ಮಾಧುಸ್ವಾಮಿ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಮೀಸಲಾತಿ ವಿಚಾರ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ, ಬಿಜೆಪಿಯ ಕೆಲವು ಶಾಸಕರು ಸೇರಿದಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮುಖಂಡರು ಸರ್ಕಾರದ ನಿರ್ಧಾರದಿಂದ ಅಸಮಾಧಾನಗೊಂಡಿದ್ದು, ತಮ್ಮ ಪ್ರತಿಭಟನೆಯನ್ನು ಮತ್ತೆ ಮುಂದುವರೆಸಿದ್ದಾರೆ.

Published: 15th January 2023 10:45 AM  |   Last Updated: 16th January 2023 03:52 PM   |  A+A-


Madhu Swamy

ಸಚಿವ ಜೆಸಿ ಮಾಧುಸ್ವಾಮಿ

Posted By : Manjula VN
Source : The New Indian Express

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಮೀಸಲಾತಿ ವಿಚಾರ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ, ಬಿಜೆಪಿಯ ಕೆಲವು ಶಾಸಕರು ಸೇರಿದಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಮುಖಂಡರು ಸರ್ಕಾರದ ನಿರ್ಧಾರದಿಂದ ಅಸಮಾಧಾನಗೊಂಡಿದ್ದು, ತಮ್ಮ ಪ್ರತಿಭಟನೆಯನ್ನು ಮತ್ತೆ ಮುಂದುವರೆಸಿದ್ದಾರೆ.

ಈ ನಡುವೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧು ಸ್ವಾಮಿ ಅವರು, ಮೀಸಲಾತಿ ವಿಚಾರ ಹಾಗೂ ರಾಜ್ಯದ ಬೆಳವಣಿಗೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದು, ಸಚಿವರ ಮನದಾಳದ ಮಾತು ಈ ಕೆಳಕಂಡಂತಿದೆ...

ವಿವಿಧ ಸಮುದಾಯಗಳಿಂದ ಮೀಸಲಾತಿ ಬದಲಾವಣೆಯ ಬೇಡಿಕೆಯನ್ನು ಸರ್ಕಾರ ಹೇಗೆ ನೋಡುತ್ತಿದೆ?
103 ನೇ ಸಾಂವಿಧಾನಿಕ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ, ಅಂದರೆ ನಾವು ಈಗ ಶೇ.60ವರೆಗೆ ಮೀಸಲಾತಿ ನೀಡಲು ಸಮರ್ಥರಾಗಿದ್ದೇವೆ. ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವಿಭಾಗ) ಅನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ. ಅಂದರೆ ಶೇ.10ರಷ್ಟು ಹೆಚ್ಚಿನ ಮೀಸಲಾತಿಯನ್ನು ಅಂಗೀಕರಿಸಲಾಗಿದೆ. ನಾವು ಅದನ್ನು ಆಧಾರವಾಗಿ ತೆಗೆದುಕೊಳ್ಳುತ್ತೇವೆ. ಇಡಬ್ಲ್ಯೂಎಸ್ ನೊಂದಿಗೆ ಮುಂದುವರಿಯಲು, ನಮಗೆ ಸಂಪೂರ್ಣ ಶೇ.10ರಷ್ಟು ಮೀಸಲಾತಿಯ ಅಗತ್ಯವಿಲ್ಲ. ಏಕೆಂದರೆ ನಾವು ಪ್ರಮಾಣಾನುಗುಣವಾದ ಮೀಸಲಾತಿಯನ್ನು ನೀಡಬೇಕಾಗಿದೆ. ಉಳಿದಿರುವ ಸಂಪೂರ್ಣ ಸಮುದಾಯಗಳು ಸುಮಾರು ಶೇ.2.5 ರಿಂದ ಶೇ.3 ರಷ್ಟಿದ್ದು ಅವು ಯಾವುದೇ ಮೀಸಲಾತಿಯ ಅಡಿಯಲ್ಲಿ ಒಳಗೊಂಡಿರುವುದಿಲ್ಲ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳನ್ನು ಬಿಸಿ (ಹಿಂದುಳಿದ ವರ್ಗಗಳು) ಅಡಿಯಲ್ಲಿ ವಿಶೇಷ ಗುಂಪುಗಳಾಗಿ ಒಳಗೊಳ್ಳುವುದರಿಂದ, ಅದು 3ಎ ಒಕ್ಕಲಿಗ ಶೇ.4 ಮತ್ತು 3ಬಿ ಲಿಂಗಾಯತ ಮತ್ತು ಇತರರು ಶೇ.5ರಷ್ಟು ಮೀಸಲಾತಿಗೆ ಅರ್ಹರಾಗಿರುತ್ತಾರೆ, ಅವರ ಆದಾಯವು ವರ್ಷಕ್ಕೆ 8.5 ಲಕ್ಷಕ್ಕಿಂತ ಕಡಿಮೆ ಇರಬೇಕು.  ಈಗಾಗಲೇ ಅವರು ಆರ್ಥಿಕವಾಗಿ ದುರ್ಬಲ ವರ್ಗದಲ್ಲಿದ್ದಾರೆ.

ಇದನ್ನೂ ಓದಿ: ಪರಿಶಿಷ್ಟ ಪಂಗಡಕ್ಕೆ ಕಾಡುಗೊಲ್ಲರ ಸೇರ್ಪಡೆ; ಜನವರಿಯಲ್ಲಿ ಮುಖ್ಯಮಂತ್ರಿಯವರಿಂದ ಕೇಂದ್ರ ಸಚಿವರ ಭೇಟಿ

ಶೇ.10 ಏರಿಸಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಸಂಸತ್ತಿನ ಮಸೂದೆ ಹೇಳುತ್ತದೆ. ಇದು ನಿಖರವಾಗಿ ಶೇ.10 ಇರಬೇಕಾಗಿಲ್ಲ. ಇದರಲ್ಲಿ ನಾವು ಶೇ.6 ಅಥವಾ ಶೇ.7ರಷ್ಟನ್ನು ಉಳಿಸಬಹುದು. ಏಕೆಂದರೆ ಶೇ.2 ಜನಸಂಖ್ಯೆಗೆ ಶೇ.10 ಮೀಸಲಾತಿಯನ್ನು ನೀಡಲು ಸಾಧ್ಯವಾಗುವುದಿಲ್ಲ. ಇಡಬ್ಲ್ಯೂಎಸ್ ಉಳಿತಾಯದಿಂದ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಕೆಲವು ಮೀಸಲಾತಿಯನ್ನು ಇನ್ನೊಂದು ಶೇ.2 ಅಥವಾ ಶೇ.3 ರಷ್ಟು ಹೆಚ್ಟಳ ಮಾಡಲು ಪ್ರಯತ್ನಿಸುತ್ತಿದ್ದೇವೆ. ರಾಜಕೀಯ ಮೀಸಲಾತಿಯಲ್ಲಿ ನಾವು ಹೆಚ್ಚುವರಿ ಏನನ್ನೂ ನೀಡುತ್ತಿಲ್ಲ ಮತ್ತು ಅದು ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕೆ ಸೀಮಿತವಾಗಿದೆ. ಹೀಗಾಗಿ ರಾಜಕೀಯ ಮೀಸಲಾತಿ ಅಥವಾ ಯಾವುದೇ ಕ್ಷೇತ್ರದಲ್ಲಿ 2ಎ ಅಥವಾ 2ಬಿಗೆ ಸಮಸ್ಯೆಗಳಾಗುವುದಿಲ್ಲ. ಸರ್ಕಾರ 2ಎ ಮತ್ತು 2ಬಿ ಮೀಸಲಾತಿಯನ್ನು ಮುಟ್ಟುವುದಕ್ಕೂ ಹೋಗಿಲ್ಲ.

ರಾಜಕೀಯ ಮೀಸಲಾತಿ ಎಂದರೆ ಏನು?
ಇದೀಗ ರಾಜಕೀಯ ಮೀಸಲಾತಿ ವಿಚಾರವನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ನಾವು ಪ್ರಾಯೋಗಿಕ ವರದಿಗಳನ್ನು ಹೊಂದಬೇಕೆಂದು ಅವರು ಬಯಸುತ್ತಿದ್ದಾರೆ. ಪ್ರತಿ ಪಂಚಾಯಿತಿಯಿಂದ ಘಟಕವಾರು ಡೇಟಾವನ್ನು ಕೇಳುತ್ತಿದ್ದಾರೆ. ರಾಜಕೀಯವಾಗಿ ಹಿಂದುಳಿದ ಗುಂಪಿನ ಬಗ್ಗೆ ಈಗ ಪ್ರಾಯೋಗಿಕವಾಗಿ ವರದಿಯನ್ನು ಸಂಗ್ರಹಿಸಬೇಕಾಗಿದೆ. ಅದು ನಮ್ಮನ್ನು ಕಾಡುತ್ತಿರುವ ವಿಚಾರ. ಹೀಗಾಗಿಯೇ ನಗರಸಭೆ ಹಾಗೂ ಇತರೆ ಚುನಾವಣೆ ವಿಳಂಬವಾಗುತ್ತಿದೆ. ಹಾಗಾಗಿ ಪೌರ ಸಂಸ್ಥೆಗಳಲ್ಲಿ ಸ್ಥಾನಗಳನ್ನು ನಿಗದಿ ಪಡಿಸಲು ರಾಜಕೀಯ ಹಿಂದುಳಿದಿರುವಿಕೆಯ ಪ್ರಾಯೋಗಿಕ ದತ್ತಾಂಶವನ್ನು ನೀಡಬೇಕಾಗಿದೆ. ಅದು ನಮಗೆ ಕಠಿಣವಾಗಿ ಪರಿಣಮಿಸಿದೆ. ಈ ವರ್ಗಗಳನ್ನು ಗುರುತಿಸಲು ಕೆಲವು ಸೂತ್ರಗಳನ್ನು ನೀಡುವಂತೆ ನಾವು ಮತ್ತು ಮಧ್ಯಪ್ರದೇಶ ಸರ್ಕಾರವು ಸುಪ್ರೀಂಕೋರ್ಟ್'ಗೆ ಮನವಿ ಮಾಡಿದ್ದೇವೆ. ಈ ವರ್ಗಗಳನ್ನು ಗುರುತಿಸುವುದು ಹೇಗೆ? ಹಿಂದುಳಿದ ಸಮುದಾಯಗಳನ್ನು ರಾಜಕೀಯವಾಗಿ ಹಿಂದುಳಿದವರು ಎಂದು ನಿರ್ಧರಿಸುವ ಮಾನದಂಡವೇನು? ಎಂಬ ಪ್ರಶ್ನೆಗಳಿವೆ. ಆದರೆ, ನ್ಯಾಯಾಲಯವು ಅದು ನಿಮಗೆ (ಸರ್ಕಾರದ) ಸಂಬಂಧಿಸಿದ ವ್ಯವಹಾರವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ತಮ್ಮ ವರ್ಗದಲ್ಲಿ ಮೀಸಲಾತಿಯನ್ನು ಕಳೆದುಕೊಂಡಿರುವ ಲಿಂಗಾಯತರು ಮತ್ತು ಒಕ್ಕಲಿಗರು ಇಡಬ್ಲೂಎಸ್ ಗೆ ಅರ್ಹರಾಗುತ್ತಾರೆಯೇ?
ಇಲ್ಲ. ಲಿಂಗಾಯತರು ಮತ್ತು ಒಕ್ಕಲಿಗರು ಈಗಾಗಲೇ ಕೆಲವು ಮೀಸಲಾತಿಗೆ ಒಳಪಟ್ಟಿದ್ದಾರೆ. ಅವುಗಳನ್ನು ಇಡಬ್ಲೂಎಸ್ ಒಳಗೆ ತರಲು ಸಾಧ್ಯವಿಲ್ಲ. ಇಡಬ್ಲೂಎಸ್ ಅಡಿಯಲ್ಲಿ ಬ್ರಾಹ್ಮಣರು, ವೈಶ್ಯರು, ಜೈನರು ಮತ್ತು ಅಂತಹ ವರ್ಗಗಳನ್ನು ಮಾತ್ರ ಪರಿಗಣಿಸಬಹುದು.

2ಸಿ ಮತ್ತು 2ಡಿಯ ಉದ್ದೇಶವೇನು?
ನಾವು ಅವರನ್ನು ‘ಹಿಂದುಳಿದ'ವರು ಎಂದು ಹೆಸರಿಸಬೇಕು. ಹೀಗಾಗಿ ಅವರಿಗೆ ಹಿಂದುಳಿದವರ ಪಟ್ಟಿಯಲ್ಲಿ ಮೀಸಲಾತಿ ನೀಡುತ್ತಿದ್ದೇವೆ. ಭಾರತ ಸರ್ಕಾರವು ಇಡಬ್ಲೂಎಸ್ ಕಾನೂನನ್ನು ಜಾರಿಗೆ ತಂದ ನಂತರ, ಇನ್ನೂ ಶೇ.10ರಷ್ಟು ಮೀಸಲಾತಿ ನೀಡುವ ಅಧಿಕಾರ ನಮಗೆ ಸಿಕ್ಕಿದೆ. ಇಡಬ್ಲೂಎಸ್'ಗೆ ಕೇವಲ ಶೇ.3 ಅಥವಾ 4 ರಷ್ಟು ನೀಡಬಹುದು. ಉಳಿದ ಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಈ ಎರಡು ಗುಂಪುಗಳೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ಮೀಸಲಾತಿ ವಿಚಾರವು ಇನ್ನಷ್ಟು ವಿವಾದಗಳನ್ನು ಸೃಷ್ಟಿಸುತ್ತದೆ ಎಂದು ನಮಗನ್ನಿಸುತ್ತಿಲ್ಲವೇ?
ಹೌದು ಆಗುತ್ತದೆ. ಈ ರೀತಿಯ ಯಾವುದಾದರೂ ವಿವಾದ ಸೃಷ್ಟಿಯಾಗುವುದು ಖಚಿತ. ನಂತರ ದಿನಗಳಲ್ಲಿ ಶೇ.100ಕ್ಕೆ 100ರಷ್ಟು ಸರಿ ಹೋಗುತ್ತದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ವಿವಾದಗಳಾಗುತ್ತವೆ. ಇದು ನಮ್ಮ ಹಣೆಯಬರಹ. ಸಾಕಷ್ಟು ಬೇಡಿಕೆ ಇರುವುದರಿಂದ ನಾವು ಅದನ್ನು ಪರಿಹರಿಸಬೇಕಾಗಿದೆ.

ಪಂಚಮಸಾಲಿ ಸಮುದಾಯ ಸಮಾಧಾನಗೊಂಡಿಲ್ಲವೇ?
ಅವರೇಕೆ ಸಮಾಧಾನಗೊಂಡಿಲ್ಲ ಎಂಬುದು ನನಗೆ ಗೊತ್ತಿಲ್ಲ. ಸ್ವಾಮೀಜಿ (ಶ್ರೀ ಜಯ ಮೃತ್ಯುಂಜಯ ಸ್ವಾಮಿ)ಗಳು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ ಎಂದು ಹೇಳುತ್ತಾರೆ. ಅವರು ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲವಾದರೆ, ಅವರನ್ನು 2ಡಿಯಲ್ಲಿ ಗುಂಪು ಮಾಡಿರುವುದು ನ್ಯಾಯಯುತವಾಗಿದೆ. ಇದರಲ್ಲಿ ತಪ್ಪೇನಿಲ್ಲ. ನಮ್ಮಲ್ಲಿ ಈಗಾಗಲೇ ಶೇ.5ರಷ್ಟು ಮೀಸಲಾತಿ ಇದೆ. ಇನ್ನೂ ಶೇ.2 ಅಥವಾ 3 ಲಿಂಗಾಯತರಿಗೆ ಮತ್ತು ಶೇ.2 ರಿಂದ 3 ಒಕ್ಕಲಿಗರಿಗೆ ನೀಡಲಾಗುವುದು. ಲಿಂಗಾಯತ ಸಮುದಾಯವು ಅನೇಕ ಉಪಜಾತಿಗಳನ್ನು ಹೊಂದಿದೆ ಮತ್ತು ಪ್ರತಿಯೊಬ್ಬರೂ ಮೀಸಲಾತಿ ಕೇಳಲು ಪ್ರಾರಂಭಿಸಿದರೆ ನಾವು ಏನು ಮಾಡಬೇಕು? ನಾನು ಲಿಂಗಾಯತ, ಮತ್ತು ನಮ್ಮ ಸಮುದಾಯವನ್ನು ನೊಳಂಬ ಎಂದು ಕರೆಯಲಾಗುತ್ತದೆ; (ಮುಖ್ಯಮಂತ್ರಿ) ಬೊಮ್ಮಾಯಿ ಒಬ್ಬ ಲಿಂಗಾಯತ, ಮತ್ತು ಅವರ ಸಮುದಾಯವನ್ನು ಸದರು ಎಂದು ಕರೆಯಲಾಗುತ್ತದೆ. (ಮಾಜಿ ಮುಖ್ಯಮಂತ್ರಿ) ಯಡಿಯೂರಪ್ಪ ಲಿಂಗಾಯತ ಮತ್ತು ಅವರ ಸಮುದಾಯವನ್ನು ಬಣಜಿಗ ಎಂದು ಕರೆಯಲಾಗುತ್ತದೆ. ಎಲ್ಲರೂ ಮೀಸಲಾತಿ ಕೇಳಿದರೆ, ಏನು ಮಾಡಬೇಕು?

ಹೊಸ ಮೀಸಲಾತಿ ವರ್ಗಗಳಿಗೆ ಹೈಕೋರ್ಟ್ ತಡೆ ನೀಡಿದೆ. ಇದು ಸರ್ಕಾರಕ್ಕೆ ಹಿನ್ನಡೆಯುಂಟಾದಂತೆಯೇ?
ಯಾವುದೇ ಸರ್ಕಾರಿ ಆದೇಶವಿಲ್ಲದ ಕಾರಣ ಮತ್ತು ಸರ್ಕಾರದ ಯಾವುದೇ ನಿರ್ಧಾರವಿಲ್ಲದ ಕಾರಣ ಹೈಕೋರ್ಟ್ ಅದನ್ನು ಹೇಗೆ ತಡೆಹಿಡಿದಿದೆ ಮತ್ತು ವಿಷಯವನ್ನು ಹೇಗೆ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂಬುದು ನನಗೆ ತಿಳಿದಿಲ್ಲ. ಹಿಂದುಳಿದ ವರ್ಗಗಳ ಆಯೋಗವು ಶಿಫಾರಸು ಮಾಡಿರುವ ಪ್ರಸ್ತಾವನೆಯನ್ನು ನಾವು ಈಗಷ್ಟೇ ಚರ್ಚಿಸಿದ್ದೇವೆ. ಇದು ಮಧ್ಯಂತರ ವರದಿ ಎಂದು ಹೇಳಿದ್ದೇವೆ. ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ... ನಾವು ಇನ್ನೂ ಚರ್ಚೆಯ ಹಂತದಲ್ಲಿದ್ದೇವೆ.

ಇದನ್ನೂ ಓದಿ: ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ಖಚಿತ: ಸಿಎಂ ಬೊಮ್ಮಾಯಿ ಭರವಸೆ

ಮೀಸಲಾತಿ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ಇದು ಸರಿಯಾದ ಸಮಯವೇ?
ಇಲ್ಲ, ಇದು ಸರಿಯಾದ ಸಮಯವಲ್ಲ. ಆದರೆ ಅದನ್ನು ಬಿಡಲು ಅವರು ನಮಗೆ ಯಾವುದೇ ಅವಕಾಶವನ್ನು ನೀಡುತ್ತಿಲ್ಲ. ಪ್ರತಿ ದಿನ ಮುಷ್ಕರಗಳು ನಡೆಯುತ್ತಲೇ ಇವೆ... ಪ್ರತಿ ದಿನ ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾಗಿ ಸರಕಾರ ಸ್ಪಂದಿಸಬೇಕಾಗಿದೆ.

ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳವು ಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸುತ್ತೀರಾ?
ನಾವು ಸ್ವಲ್ಪವಾದರೂ ನ್ಯಾಯವನ್ನು ಮಾಡಿದ್ದೇವೆ ಎಂದು ನಾವು ಭಾವಿಸುತ್ತೇವೆ. ಈ ಸಮಸ್ಯೆಗಳನ್ನು ರಾಜಕೀಯ ಕೋನವಾಗಿ ನಾವು ನೋಡಿಲ್ಲ. ಇದನ್ನು ಖಚಿತವಾಗಿ ನಾನು ನಿಮಗೆ ಹೇಳಬಲ್ಲೆ.

ಮೀಸಲಾತಿ ವ್ಯವಸ್ಥೆ ಇನ್ನು ಎಷ್ಟು ದಿನ ಬೇಕು?
ಅಸಮಾನತೆ ಇರುವವರೆಗೆ, ಇಂದಿಗೂ ಪರಿಶಿಷ್ಟ ಜಾತಿಯ ಜನರನ್ನು ಬೇರೆ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತದೆ. ಇನ್ನೂ ಅವರಿಗೆ ಯಾವುದೇ ಸಾಮಾಜಿಕ ಸ್ಥಾನಮಾನ ನೀಡಲಾಗಿಲ್ಲ. ಆದ್ದರಿಂದ ಮೀಸಲಾತಿ ನೀಡುವುದು ಮಾನವೀಯವಾಗಿದೆ. ಎಸ್ಸಿ ಹುಡುಗನಿಗೆ ಕೆಲಸ ಸಿಕ್ಕರೆ ಆ ಕುಟುಂಬ ಜೀವನಪೂರ್ತಿ ಉಳಿಯುತ್ತದೆ. ಶಿಕ್ಷಣ ಪಡೆದು ಸರ್ಕಾರಿ ಸೇವೆಯಲ್ಲಿರುವ ವ್ಯಕ್ತಿ ಇಂದು ‘ಅಸ್ಪೃಶ್ಯ’ ಎಂದು ಪರಿಗಣಿಸಲ್ಪಡುವ ವ್ಯಕ್ತಿ ನಾಳೆ ‘ಸ್ಪೃಶ್ಯ’ನಾಗುತ್ತಾನೆ. ಅವರ ಸ್ಥಿತಿಯು ಅವರ ಆರ್ಥಿಕ ಮಟ್ಟದೊಂದಿಗೆ ಮತ್ತು ರಾಜಕೀಯವಾಗಿಯೂ ಬದಲಾಗುತ್ತದೆ.

ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25 ಮೀಸಲಾತಿ ನೀಡುವಂತೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಗೆ ಪತ್ರ ಬರೆದಿದ್ದೀರಿ, ಆದರೆ ಈ ಬಗ್ಗೆ ಇನ್ನೂ ಸ್ಪಷ್ಟತೆಗಳು ಸಿಕ್ಕಿಲ್ಲ...?
ಹೈಕೋರ್ಟ್ ರದ್ದುಪಡಿಸಿದ ಕಾನೂನಿಗೆ ತಿದ್ದುಪಡಿ ತಂದಿದ್ದೇವೆ. ಅದರ ಬೆನ್ನಲ್ಲೇ ನಾವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇವೆ. ವಿಚಾರಣೆಯ ಸಂದರ್ಭದಲ್ಲಿ, ಇತರ ರಾಜ್ಯಗಳ ರಾಷ್ಟ್ರೀಯ ಕಾಲೇಜುಗಳನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ತನ್ನ ದೃಷ್ಟಿಯಲ್ಲಿ ವಸತಿ ಮೀಸಲಾತಿ ಇದ್ದಾಗ ಅದನ್ನು ಕರ್ನಾಟಕದಲ್ಲಿ ಏಕೆ ಜಾರಿಗೆ ತರಲಿಲ್ಲ. 25 ರಷ್ಟು ಮೀಸಲಾತಿ ಒದಗಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ಎಲ್‌ಎಸ್‌ಐಯು ವಿಸಿಗೆ ಸೂಚನೆ ನೀಡಿದರು. ಆದರೆ, ವಿಸಿ ಕನ್ನಡಿಗ ವಿದ್ಯಾರ್ಥಿಗಳ ವಿಭಾಗೀಕರಣವನ್ನು ಪ್ರಾರಂಭಿಸಿದರು, ಅವರಲ್ಲಿ ಉತ್ತಮ ಶ್ರೇಯಾಂಕ ಪಡೆದವರಿಗೆ ಶೇ. 7-8 ರಷ್ಟು ಮೀಸಲಾತಿ ನೀಡಲಾಗಿದೆ. ಮೀಸಲಾತಿಯನ್ನು ಸರಿಸಮ ರೀತಿಯಲ್ಲಿ ನೀಡಲಾಗಿದೆ ಎಂದು ವಿಸಿ ಹೇಳಿದ್ದಾರೆ. ಆದರೆ, ಅದನ್ನು ಲಂಬ ರೀತಿಯಲ್ಲಿ ನೀಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಕರ್ನಾಟಕದ ಎಸ್‌ಸಿ ವಿದ್ಯಾರ್ಥಿಗಳ ವಿಚಾರದಲ್ಲಿಯೂ ಇದೇ ರೀತಿಯಾಗಿದೆ. ನಮ್ಮ ರಾಜ್ಯದಲ್ಲಿ ಎಸ್‌ಸಿ ವರ್ಗದಲ್ಲಿ ಪಟ್ಟಿ ಮಾಡದಿದ್ದರೂ ಹೊರ ರಾಜ್ಯದಿಂದ ಬಂದವರಿಗೆ ಮೀಸಲಾತಿ ಅಡಿಯಲ್ಲಿ ಸ್ಥಾನ ನೀಡಲು ಅವಕಾಶವಿದೆ. ನಮ್ಮ ಸರ್ಕಾರ ಮತ್ತು ಸಂಸ್ಥೆ (ಎನ್‌ಎಲ್‌ಎಸ್‌ಐಯು) ನೀಡಿದ ಭೂಮಿ, ಮೂಲಸೌಕರ್ಯ ಮತ್ತು ನಿಧಿಗಳ ಹೊರತಾಗಿಯೂ ಅವರು ನಮ್ಮ ಕಾನೂನಿಗೆ ಬದ್ಧವಾಗಿಲ್ಲ, ಹೀಗಿರುವಾಗ ಮೀಸಲಾತಿ ನೀಡಿ ಏನು ಪ್ರಯೋಜನ? ನಮ್ಮ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡದ ಹೊರತು ನಾವು ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ.

ಇದನ್ನೂ ಓದಿ: ಕನ್ನಡಿಗರಿಗೆ ಶೇ.25ರಷ್ಟು ವಸತಿ ಮೀಸಲಾತಿ ನೀಡದ ಎನ್‌ಎಲ್‌ಎಸ್‌ಐಯು ವಿರುದ್ಧ ಸಚಿವ ಮಾಧುಸ್ವಾಮಿ ಕಿಡಿ

2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯ ಹೇಗಿದೆ?
ನಾವು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿರುವುದರಿಂದ ಗೆಲ್ಲುವ ವಿಶ್ವಾಸ ನಮಗಿದೆ. ಶೇ.60-70ರಷ್ಟು ಬಿಜೆಪಿ ನಾಯಕರು ಮತ್ತು ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳಷ್ಟೇ ಅಲ್ಲದೆ, ನಮ್ಮ ಕ್ಷೇತ್ರದ ಮತದಾರರ ಕೆಲಸಗಳನ್ನೂ ಮಾಡುತ್ತಿದ್ದೇವೆ. ಇಂದು ವಿಧಾನಸೌಧಕ್ಕೆ ಭೇಟಿ ನೀಡಿದರೆ ಮೂರ್ನಾಲ್ಕು ಜನ ಸಚಿವರು ಸಿಗುವುದು ಕಷ್ಟ, ಉಳಿದವರು ಅವರವರ ಕ್ಷೇತ್ರಗಳ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಪಕ್ಷದ ಪರಿಸ್ಥಿತಿ ಹೇಗಿದೆ?
ನಾನು ಗ್ರಾಮೀಣ ಹಿನ್ನೆಲೆಯುಳ್ಳ ಮನುಷ್ಯ. ನಾವು ಈ ಪ್ರದೇಶದ ಜನರ ಮನಸ್ಸಿನಲ್ಲಿದ್ದೇವೆಂಬುದು ನನ್ನ ಭಾವನೆ.

ಎತ್ತಿನಹೊಳೆ ಯೋಜನೆ ಯಾವಾಗ ಪೂರ್ಣಗೊಳ್ಳುತ್ತದೆ?
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಭೂಸ್ವಾಧೀನ ಸಮಸ್ಯೆ ಇದ್ದು, 6 ಟಿಎಂಸಿ ಅಡಿ ನೀರು ಸಂಗ್ರಹಿಸಲು ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರದಿಂದ ತಲಾ 2,750 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ. ಹಾಗಾಗಿ ಅಣೆಕಟ್ಟಿನ ಸಂಗ್ರಹ ಸಾಮರ್ಥ್ಯವನ್ನು ಕಡಿಮೆ ಮಾಡಿ ದೊಡ್ಡಬಳ್ಳಾಪುರಕ್ಕೆ ಸೀಮಿತಗೊಳಿಸುತ್ತಿದ್ದೇವೆ. ಈ ಸಮಸ್ಯೆ ಹೊರತು ಪಡಿಸಿದರೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.

ನೀವು ರಾಜಕೀಯಕ್ಕೆ ಸೇರಲು ಪ್ರೇರಣೆ ನೀಡಿದ್ದು ಯಾವುದು? ರಾಜಕಾರಣಿಯಾಗದಿದ್ದರೆ ನೀವೇನು ಮಾಡುತ್ತಿದ್ದಿರಿ?
ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಅವರ ಕರೆಗೆ ಓಗೊಟ್ಟು ವಿದ್ಯಾರ್ಥಿಗಳ ಚಳವಳಿಯ ಭಾಗವಾಗಿದ್ದೆ.  ಎಂದಿಗೂ ನಾನು ರಾಜಕೀಯಕ್ಕೆ ಸೇರುವ ಕನಸು ಕಂಡಿರಲಿಲ್ಲ, ಹೋರಾಟವು ಜನರ ಕಲ್ಯಾಣಕ್ಕಾಗಿ ಆಗಿದೆ. ಆ ಪ್ರಯಾಣದ ಮೂಲಕ ನಾನು ರಾಜಕಾರಣಿಯಾಗಿ ರೂಪುಗೊಂಡಿದ್ದೇನೆ. ರಾಜಕಾರಣಿಯಾಗದಿದ್ದರೆ ನಾನು ವಕೀಲನಾಗುತ್ತಿದ್ದೆ, ಇಲ್ಲದಿದ್ದರೆ ಕೃಷಿಕನಾಗುತ್ತಿದ್ದೆ.

ವಕೀಲರ ಸಮುದಾಯವು ಅವರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೆ ಒತ್ತಾಯಿಸುತ್ತಿದೆ?
ಪ್ರಜಾಸತ್ತಾತ್ಮಕ ದೇಶದಲ್ಲಿ ವಿಶೇಷ ಕಾಯಿದೆಯಡಿ ಸವಲತ್ತು ಹೊಂದಿರುವ ಯಾವುದೇ ವರ್ಗವನ್ನು ಸಂವಿಧಾನದಲ್ಲಿ ನಿರಾಕರಿಸಲಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಈ ಹಿಂದೆ ಶಾಸಕರು ಮತ್ತು ಸಂಸದರ ವಿಶೇಷಾಧಿಕಾರದ ಬಗ್ಗೆಯೂ ಸಂವಿಧಾನದ ಸಭೆ ಮೂರು ದಿನಗಳ ಕಾಲ ಚರ್ಚೆ ನಡೆಸಿತ್ತು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ನೀವು ಹೇಳಿದಾಗ ಒಬ್ಬರು ಹೇಗೆ ಹೆಚ್ಚುವರಿ ಬೆಂಬಲ, ಪ್ರಯೋಜನ, ಭದ್ರತೆ ಅಥವಾ ಕಾನೂನಿನ ಅಡಿಯಲ್ಲಿ ರಕ್ಷಣೆ ಪಡೆಯಬಹುದು? ನೀವು ಸಂವಿಧಾನವನ್ನು ಗೌರವಿಸಿದರೆ ಯಾರಿಗೂ ವಿಶೇಷ ಸವಲತ್ತು ನೀಡಲು ಸಾಧ್ಯವಿಲ್ಲ ಎಂದು ಸಾ.ರಾ.ಮಹೇಶ್ ಅವರು ವಿಧಾನಸಭೆಯಲ್ಲಿ ಹೇಳಿದಾಗ ಅವರಿಗೆ ವಿಶೇಷ ಸವಲತ್ತು ಇದೆ ಎಂದು ಹೇಳಿದ್ದೆ. ಒಬ್ಬ ಶಾಸಕ ಮತ್ತು ಸಂಸದನಾಗಿ, ತನ್ನ ಕರ್ತವ್ಯಗಳನ್ನು ನಿರ್ವಹಿಸುವ ಪ್ರಕ್ರಿಯೆಯಲ್ಲಿ ಅಡ್ಡಿಪಡಿಸದ ಹೊರತು ಸವಲತ್ತುಗಳನ್ನು ಹೊಂದಲು ಸಾಧ್ಯವಿಲ್ಲ, ಅದು ಸವಲತ್ತು ಉಲ್ಲಂಘನೆಯಾಗುತ್ತದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ಹೊಸ ಮೀಸಲಾತಿ 2ಸಿ, 2ಡಿಗೆ ಹೈಕೋರ್ಟ್ ತಡೆ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ

ನಾನು ಸವಲತ್ತು ಪಡೆದ ವರ್ಗಕ್ಕೆ ಒಳಪಟ್ಟಿಲ್ಲ. ಅವರು (ವಕೀಲರು) ಅವರಿಗಾಗಿ ವಿಶೇಷ ಕಾನೂನು ಹೊಂದಲು ಬಯಸುತ್ತಾರೆ ಮತ್ತು ಅವರು ನನ್ನ ಸಹಿಗಾಗಿ ಕರಡು ನೀಡಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಯಾವುದೇ ಕಾರಣಕ್ಕೂ ವಕೀಲರನ್ನು ಯಾರೂ ಬಂಧಿಸಬಾರದು ಮತ್ತು ಡಿವೈಎಸ್ಪಿ ಮತ್ತು ಮೇಲಿನ ಹಂತದ ಅಧಿಕಾರಿಗಳು ಮಾತ್ರ ಪ್ರಕರಣದ ಬಗ್ಗೆ ಗಮನಹರಿಸಬೇಕೆಂದು ಹೇಳಿದ್ದಾರೆ.

ಸಾಮಾನ್ಯ ಜನರು ಅಥವಾ ಮುಖ್ಯಮಂತ್ರಿಗಳ ವಿರುದ್ಧವೂ ಕೂಡ ಠಾಣಾಧಿಕಾರಿ (ಎಸ್‌ಎಚ್‌ಒ), ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ಪ್ರಕರಣ ದಾಖಲಿಸಲು ಅಧಿಕಾರವಿದೆ. ಡಿವೈಎಸ್‌ಪಿಗಳು ಎಫ್‌ಐಆರ್‌ ದಾಖಲಿಸಬಾರದು. ವಕೀಲರು ಕೆಲಸದ ಸಮಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಯಾವುದೇ ಅಡೆತಡೆಗಳು ಅಥವಾ ಸಮಸ್ಯೆಗಳನ್ನು ಎದುರಿಸಿದರೆ ಈ ಬಗ್ಗೆ ರಕ್ಷಣೆ ನೀಡುವ ಬಗ್ಗೆ ನಾವು ಯೋಚಿಸಬಹುದು. ಇದು ಈಗಾಗಲೇ ಇದೆ, ನ್ಯಾಯಾಧೀಶರು ಪೊಲೀಸರನ್ನು ಒದಗಿಸುವ ಮೂಲಕ ಅವರಿಗೆ ರಕ್ಷಣೆ ನೀಡಬಹುದು. ಆದರೆ, ವಕೀಲರು ತಮ್ಮ ಸಂಪೂರ್ಣ ಜೀವನಶೈಲಿಗೆ ರಕ್ಷಣೆ ಬಯಸುತ್ತಿದ್ದಾರೆ. ಅವರು ದೇಶದ ಇತರ ನಾಗರಿಕರಿಗಿಂತ ಹೇಗೆ ಭಿನ್ನರಾಗಿದ್ದಾರೆ ಎಂಬುದನ್ನು ನಾನು ಪ್ರಶ್ನಿಸುತ್ತೇನೆ, ಹೀಗಾಗಿಯೇ ಅವರು ನನ್ನನ್ನು ವಿಲನ್ ಎಂದು ಬಿಂಬಿಸುತ್ತಿದ್ದಾರೆ.

ಸಚಿವರಾಗಿ ನಿಮ್ಮ ಕೆಲಸ ತೃಪ್ತಿ ತಂದಿದೆಯೇ?
ನಾನು ಅತ್ಯಂತ ತೃಪ್ತಿ ಹೊಂದಿದ್ದೇನೆ, ಏಕೆಂದರೆ ನಾನು ಕಾನೂನು ರಚನೆ ಪ್ರಕ್ರಿಯೆಯಲ್ಲಿ ಮತ್ತು ಸಣ್ಣ ನೀರಾವರಿ ಸಚಿವನಾಗಿ ತೊಡಗಿಸಿಕೊಂಡಿದ್ದೇನೆ.

ಗುತ್ತಿಗೆದಾರರ ಆರೋಪಗಳು ಸೇರಿದಂತೆ ಹಲವಾರು ಆರೋಪಗಳು ಸರ್ಕಾರದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತವೆ ಎಂದು ನೀವು ಭಾವಿಸುತ್ತೀರಾ?
ಇಲ್ಲ.. ಸಾಬೀತುಪಡಿಸಲು ಶೇ.1ರಷ್ಟು ಪುರಾವೆಯೂ ಇಲ್ಲದಿರುವುದರಿಂದ ಅವೆಲ್ಲವೂ ರಾಜಕೀಯ ಪ್ರೇರಿತವಾಗಿವೆ. ಕೆಲ ಗುತ್ತಿದಾರರ ಸಂಘದ ಆಧ್ಯಕ್ಷರು ಆರೋಪಿಸಿದ್ದಾರೆಂದು ಪ್ರತಿಪಕ್ಷದ ನಾಯಕರು ಸದನದಲ್ಲಿ ವಿಷಯ ಪ್ರಸ್ತಾಪಿಸಿದರು. ಇದು ಸರಿಯಲ್ಲ. ಪ್ರಾಥಮಿಕ ಸಾಕ್ಷಿ ಮತ್ತು ನಿರ್ದಿಷ್ಟ ಪ್ರಕರಣವಿದ್ದರೆ ಮಾತ್ರ ಜನರು ಗಮನಹರಿಸುತ್ತಾರೆ. ನಮ್ಮದು ಶೇ.100ರಷ್ಟು ಭ್ರಷ್ಟಾಚಾರ ಮುಕ್ತ ಸರ್ಕಾರ ಎಂದು ನಾನು ಹೇಳುವುದಿಲ್ಲ. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳೆಲ್ಲವೂ ಸುಳ್ಳು ಎಂದೂ ನಾನು ಹೇಳುವುದಿಲ್ಲ.

ಮತಾಂತರ ವಿರೋಧಿ ಕಾನೂನಿನ ಪರಿಣಾಮವೇನು?
ಸಂವಿಧಾನದಲ್ಲಿ ಮತಾಂತರ ವಿರೋಧಿ ಕಾನೂನು ಇತ್ತು. ನಾವು ಹೊಸ ಕಾನೂನನ್ನು ಜಾರಿಗೆ ತಂದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಕೆಲವು ನಿಬಂಧನೆಗಳನ್ನು ಮಾಡಿದ್ದೇವೆ. ಬಲವಂತದ ಮತಾಂತರ ಅಥವಾ ಲಂಚ ಅಥವಾ ಇನ್ನಾವುದೇ ರೀತಿಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ತೆಗೆದುಕೊಳ್ಳಬೇಕಾದ ಕ್ರಮವನ್ನು ನಾವು ಸೇರಿಸಿದ್ದೇವೆ. ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಬೇರೆ ಧರ್ಮಕ್ಕೆ ಮತಾಂತರಗೊಂಡರೆ, ಅದೇ ಕಾನೂನು ಅನ್ವಯಿಸುತ್ತದೆ. ಕಾನೂನು ಹಿಂದೂ ಧರ್ಮಕ್ಕೆ ಸೀಮಿತವಾಗಿಲ್ಲ.

ನೀವು ಮತ್ತು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು...?
ನಾವು ಕಾಲೇಜು ದಿನಗಳಿಂದಲೂ ಒಳ್ಳೆ ಗೆಳೆಯರು. ನಮ್ಮ ವಿಚಾರಧಾರೆಗಳೂ ಹಾಗೆಯೇ ಇದ್ದವು. ಆದರೆ ಸಮಯವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಇರಿಸಿದೆ. ನಾವಿಬ್ಬರೂ ಒಂದೇ ಗುಂಪಿನಲ್ಲಿ ಇದ್ದೆವು. ಒಂದು ಕಾಲದಲ್ಲಿ. ರಾಮಕೃಷ್ಣ ಹೆಗಡೆ ಜೊತೆ ಹೋಗಿದ್ದೆ, ನಂತರ ನಾನು ಜೆಡಿಯುಗೆ ಸೇರಿದೆ, ಸಿದ್ದರಾಮಯ್ಯ ಜೆಡಿಎಸ್ ಸೇರಿದರು. ಈಗ ಜೆಡಿಯು ಇಲ್ಲ. ಆಗ ನಾವು ಐವರು ಶಾಸಕರಾಗಿದ್ದೆವು. ನಮ್ಮ ಉಳಿವಿಗಾಗಿ ಇಬ್ಬರೂ ಬೇರೆ ಬೇರೆ ಪಕ್ಷ ಸೇರಿದರು. ಮತ್ತೆ ಒಂದಾಗುವ ಪ್ರಶ್ನೆಯೇ ಇಲ್ಲ... ಅವರು ಕಾಂಗ್ರೆಸ್ ಬಿಡುವುದೂ ಇಲ್ಲ, ನಾನು ಬಿಜೆಪಿ ಬಿಡುವುದೂ ಇಲ್ಲ.

ಇದನ್ನೂ ಓದಿ: ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳ: ನಾಗಮೋಹನದಾಸ ವರದಿ ಜಾರಿಗೆ ಸರ್ಕಾರಕ್ಕೆ ಗಡುವು ನೀಡಿದ ಕಾಂಗ್ರೆಸ್

ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಮುಂಚೂಣಿಯಲ್ಲಿದ್ದು ಸಿಎಂ ಅಭ್ಯರ್ಥಿಯಾಗಿದ್ದರು. ಈ ಬಾರಿ ಅವರು ಸಿಎಂ ಅಭ್ಯರ್ಥಿ ಅಲ್ಲ. ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆಯೇ?
ಈ ಬಾರಿಯೂ ಯಡಿಯೂರಪ್ಪ ಮುಂಚೂಣಿಯಲ್ಲಿರುತ್ತಾರೆ. ಅವರು ಜನಸಾಮಾನ್ಯರ ನಾಯಕ.

ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಯಾವುದೇ ಧರ್ಮದ ಹೊರತಾಗಿ ಮಹಿಳೆಯರಿಗೆ ರಕ್ಷಣೆ ನೀಡಬೇಕು. ಸುಪ್ರೀಂ ಕೋರ್ಟ್ ಏಕರೂಪ ನಾಗರಿಕ ಸಂಹಿತೆಯ ಪರವಾಗಿತ್ತು, ಆದರೆ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅದನ್ನು ಹಾಳು ಮಾಡಿದರು. ಒಂದು ಧರ್ಮದಲ್ಲಿ ಹೆಣ್ಣಿನ ಮದುವೆಯ ವಯಸ್ಸು 18 ವರ್ಷ, ಇನ್ನೊಂದು ಧರ್ಮದಲ್ಲಿ 15 ವರ್ಷ ಎಂದು ಹೇಳುವುದು ಹೇಗೆ? ಒಂದು ದೇಶದಲ್ಲಿ ವಿಭಿನ್ನ ಕಾನೂನುಗಳು ಇರುವಂತಿಲ್ಲ. ಇದಕ್ಕೆ ತಿದ್ದುಪಡಿ ತರಬೇಕಿದೆ ಎಂದು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp