ಪಾದರಾಯನಪುರ' ಹಿಂದೂ ಸ್ಮಶಾನ ಅತಿಕ್ರಮಣ: ಸ್ಥಳಕ್ಕೆ ಲೋಕಾಯುಕ್ತ ಪೊಲೀಸರ ಭೇಟಿ, ಏ.12ರೊಳಗೆ ವರದಿ ಸಲ್ಲಿಕೆ

ಜೆಜೆ ನಗರ ಹಿಂದೂ ಸ್ಮಶಾನ ಅತಿಕ್ರಮಣ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.
ಜೆ.ಜೆ.ನಗರದಲ್ಲಿ ಬಿಬಿಎಂಪಿ ಕಚೇರಿ ನಿರ್ಮಿಸಲು ಸಮಾಧಿ ಧ್ವಂಸ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಬುಧವಾರ ಭೂಮಿ ಪರಿಶೀಲನೆ ನಡೆಸಿದರು.
ಜೆ.ಜೆ.ನಗರದಲ್ಲಿ ಬಿಬಿಎಂಪಿ ಕಚೇರಿ ನಿರ್ಮಿಸಲು ಸಮಾಧಿ ಧ್ವಂಸ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಬುಧವಾರ ಭೂಮಿ ಪರಿಶೀಲನೆ ನಡೆಸಿದರು.
Updated on

ಬೆಂಗಳೂರು: ಜೆಜೆ ನಗರ ಹಿಂದೂ ಸ್ಮಶಾನ ಅತಿಕ್ರಮಣ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು.

ಜೆಜೆ ನಗರ ವಾರ್ಡ್‌ನ ಗೋರಿಪಾಳ್ಯದಲ್ಲಿದ್ದ ಹಿಂದೂ ಸಮುದಾಯಕ್ಕೆ ಸೇರಿದ ಸ್ಮಶಾನವನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದ್ದು, ಸ್ಥಳದಲ್ಲಿ ಅಕ್ರಮವಾಗಿ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಮೊದಲು ಸ್ಮಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಬಿಬಿಎಂಪಿ, ನಂತರ ಸ್ಥಳದಲ್ಲಿ ಕಚೇರಿಯನ್ನು ನಿರ್ಮಿಸಿತ್ತು. ಇದೀಗ ಸ್ಥಳದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸುತ್ತಿದೆ ಎಂದು ಹಿಂದೂಪರ ಹೋರಾಟಗಾರರು ಆರೋಪಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡಿರುವ ಲೋಕಾಯುಕ್ತ ಪೊಲೀಸರು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಪ್ರಕರಣ ಸಂಬಂಧ ಏಪ್ರಿಲ್ 12ರೊಳಗೆ ವರದಿ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಗಣೇಶ್ ಮತ್ತು ತಂಡವು ಸ್ಥಳಕ್ಕೆ ಭೇಟಿ ನೀಡಿ, ದೂರುದಾರ ಎಸ್ ಭಾಸ್ಕರನ್ ಮತ್ತು ಇತರ ಅರ್ಜಿದಾರರೊಂದಿಗೆ ಮಾತಕತೆ ನಡೆಸಿ ಮಾಹಿತಿ ಪಡೆದುಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಭಾಸ್ಕರನ್ ಅವರು, ಬಿಬಿಎಂಪಿ ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ, ಭೂಮಿಯು ಹಿಂದೂಗಳ ಸಮಾಧಿ ಸ್ಥಳವಾಗಿದ್ದು, ಇಲ್ಲಿ ಸಾವಿರಾರು ಸಮಾಧಿಗಳಿವೆ. ಆದರೆ ಇಲ್ಲಿ ಕೆಲ ವರ್ಷಗಳ ಹಿಂದೆ ಬಿಬಿಎಂಪಿ ಕಚೇರಿ ತಲೆ ಎತ್ತಿದ್ದು, ಇದೀಗ 1 ಕೋಟಿ ರೂ.ವೆಚ್ಚದಲ್ಲಿ ಭೂಮಿ ಸಂಖ್ಯೆ 136-10034-115 ಮತ್ತು 136-10034-117ರಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಈ ಭೂಮಿ ಕನ್ನಡ ಮತ್ತು ತಮಿಳು ಮಾತನಾಡುವ ಹಿಂದೂಗಳಿಗೆ ಸೇರಿದ ಸ್ಮಶಾನವಾಗಿತ್ತು ಎಂದು ಹೇಳಿದ್ದಾರೆ.

“2011 ರಿಂದ 2019 ರವರೆಗೆ, 5,800 ಮೃತರನ್ನು ಇಲ್ಲಿ ಸಮಾಧಿ ಮಾಡಲಾಗಿದೆ. ಆದರೆ, ಇದೀಗ 3,000 ಕ್ಕೂ ಹೆಚ್ಚು ಸಮಾಧಿಗಳು ನಾಪತ್ತೆಯಾಗಿರುವುದು ಕಂಡು ಬಂದಿದೆ. ಕಾಣೆಯಾಗಿರುವ ಶವವನ್ನು ಪತ್ತೆ ಮಾಡಬೇಕಿದೆ. ಇದಕ್ಕೆ ಕಾರಣರಾದವರ ವಿರುದ್ಧ ಎಫ್ಐಆರ್ ದಾಖಲಿಸಬೇಕಿದೆ ಎಂದು ತಿಳಿಸಿದ್ದಾರೆ.

ಪರಿಶೀಲನೆಯ ನಂತರ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

“ಹಿಂದೂ ಸಮಾಧಿ ಸ್ಥಳದ ಪಕ್ಕದಲ್ಲಿರುವ ಜನತಾ ಕಾಲೋನಿಯಲ್ಲಿ ಸುಮಾರು 4,500 ಕುಟುಂಬಗಳು ವಾಸಿಸುತ್ತಿವೆ. ಕೆಲವು ದಶಕಗಳ ಹಿಂದೆ, ಇಡೀ ಸುತ್ತಮುತ್ತಲಿನ ಪ್ರದೇಶವನ್ನು ಪಾದರಾಯನಪುರ ಎಂದು ಕರೆಯಲಾಗುತ್ತಿತ್ತು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಇದನ್ನು ಮೂರು ವಾರ್ಡ್ ಗಳಾಗಿ ವಿಂಗಡಿಸಲಾಯಿತು. ಜೆಜೆ ನಗರ ವಾರ್ಡ್ ನಂ. 136, ಪಾದರಾಯನಪುರ ವಾರ್ಡ್ ನಂ. 135 ಮತ್ತು ರಾಯಪುರಂ ವಾರ್ಡ್ ನಂ. 137 ಎಂದು ವಿಂಗಡಿಸಲಾಯಿತು.

ಆದರೆ, ಸ್ಥಳೀಯರು ಅರ್ಜಿದಾರರ ಹೇಳಿಕೆಗೆ ಭಿನ್ನವಾಗಿ ಹೇಳಿಕೆ ನೀಡಿದ್ದಾರೆ. ಈ ಪ್ರದೇಶವು ಜಮೀನ್ದಾರರ ಒಡೆತನದಲ್ಲಿದ್ದ ಸಣ್ಣ ಗುಡ್ಡವಾಗಿತ್ತೇ ಹೊರತು, ಸ್ಮಶಾನವಾಗಿರಲಿಲ್ಲ ಎಂದು ಹೇಳಿದ್ದಾರೆ.

ಸ್ಮಶಾನ ಎಂದು ಹೇಳಿಕೊಳ್ಳುವ ಸ್ಥಳವು ಜನತಾ ಕಾಲೋನಿಯ ಪಕ್ಕದಲ್ಲಿದೆ ಮತ್ತು ಅದು ಸ್ಮಶಾನವಲ್ಲ. ನಾನು ಇಲ್ಲಿ ಬೆಳೆದ ವ್ಯಕ್ತಿ. ನಾನೊಬ್ಬ ಹಿಂದು. ಯಾರಾದರೂ ಬಂದು ಸಮಾಧಿಗಳನ್ನು ಧ್ವಂಸ ಮಾಡಿದರೆ, ಹಿಂದೂವಾಗಿ ನಾನು ಸುಮ್ಮನಿರುತ್ತೇನೆಯೇ? ಎಂದು ಸ್ಥಳೀಯ ನಿವಾರಿ ಚಂದ್ರಶೇಖರ್ ಎಂಬುವವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com