ಚುನಾವಣೆ ಮೇಲೆ ಕೋವಿಡ್ ಕರಿನೆರಳು: ಆತಂಕ ಬದಿಗೊತ್ತಿ ಮತದಾನ ಮಾಡುತ್ತಾರೆಯೇ ಜನತೆ?

ದಿನಕಳೆಯುತ್ತಿದ್ದಂತೆ ಮಹಾಮಾರಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಈ ಬಾರಿಯ ಚುನಾವಣೆ ಮೇಲೆ ಕೊರೋನಾ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಂಗಳೂರು: ದಿನಕಳೆಯುತ್ತಿದ್ದಂತೆ ಮಹಾಮಾರಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದು, ಈ ಬಾರಿಯ ಚುನಾವಣೆ ಮೇಲೆ ಕೊರೋನಾ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

2019ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಮುಖ ಚುನಾವಣೆ ನಡೆಯುತ್ತಿದೆ. ಮುಂದಿನ ಸರ್ಕಾರವನ್ನು ಆಯ್ಕೆ ಮಾಡಲು 5 ಕೋಟಿಗೂ ಹೆಚ್ಚು ಜನರು ತಮ್ಮ ಹಕ್ಕು ಚಲಾಯಿಸಬೇಕಾಗಿದೆ ಆದರೆ, ಕೋವಿಡ್ ಸೋಂಕು ಈಗಾಗಲೇ ಹೆಚ್ಚಾಗುತ್ತಿದ್ದು, ಮತ್ತೆ ಜನರಲ್ಲಿ ಸೋಂಕಿನ ಆತಂಕ ಶುರುವಾಗಿದೆ. ಹೀಗಾಗಿ ಮತದಾನದ ಶೇಕಡವಾರು ಮೇಲೆ ಕೊರೋನಾ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಈಗಲೂ ಸಾಕಷ್ಟು ಜನರು ಕೋವಿಡ್ ಆತಂಕದಿಂದ ಇನ್ನೂ ಹೊರಬಂದಿಲ್ಲ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನದಟ್ಟಣೆ ಇರುವ ಸ್ಥಳಗಳಲ್ಲಿ ಹೋಗದಿರುವುದನ್ನು ಮುಂದುವರೆಸಿದ್ದಾರೆಂದು ವೈದ್ಯರು ಹೇಳಿದ್ದಾರೆ.

ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಯಾವುದೇ ಜನಸಂದಣಿ ಇರುವ ಸ್ಥಳಕ್ಕೆ ಭೇಟಿ ನೀಡದ ಮತ್ತು ತನ್ನ ಸ್ನೇಹಿತರೊಂದಿಗೆ ಕೂಡ ಕೈಕುಲುಕದ 60 ವರ್ಷದ ಸ್ಟಾಕ್ ವ್ಯಾಪಾರಿ ಆರನ್ (ಹೆಸರು ಬದಲಾಯಿಸಲಾಗಿದೆ) ಎಂಬುವುರು ಮಾತನಾಡಿ, ಈ ಬಾರಿ ಚುನಾವಣೆಯಿಂದ ದೂರವಿರಲು ನಿರ್ಧರಿಸಿದ್ದೇನೆಂದು ಹೇಳಿದ್ದಾರೆ.

ಮತಗಟ್ಟೆ ಮತ್ತು ಚುನಾವಣಾ ಪ್ರಚಾರಕ್ಕಾಗಿ ಬರುವ ಯಾವುದೇ ವ್ಯಕ್ತಿಯನ್ನು ಹತ್ತಿರ ಬರಲು ಬಿಡುತ್ತಿಲ್ಲ. ನನ್ನ ಮನೆಯಲ್ಲಿ ವಯಸ್ಸಾದ ನನ್ನ ತಾಯಿ ಇದ್ದಾರೆ. ಈಗಾಗಲೇ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬ ಎಲ್ಲಾ ಸದಸ್ಯರು ಅವರನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಯಾವುದೇ ಪರಿಸ್ಥಿತಿಗಳು ಎದುರಾದರೂ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಲಸಿಕೆ ಹಾಕಿಸಿಕೊಂಡವರಲ್ಲಿ ಸೋಂಕು ಎದುರಾದರೂ ತೀವ್ರತರ ಅನಾರೋಗ್ಯ ಉಂಟು ಮಾಡುವುದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಏನೇ ಆದರೂ, ಕೊರೋನಾಗೆ ಚಂದಾದಾರನಾಗಲು ನಾನು ಬಯಸುವುದಿಲ್ಲ. ಮತಗಟ್ಟೆಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಮಾತ್ರ ನಿರ್ಧಾರ ಮರುಪರಿಶೀಲಿಸುವ ಪ್ರಯತ್ನ ಮಾಡುತ್ತೇನೆಂದು ತಿಳಿಸಿದ್ದಾರೆ.

ಮಂಗಳೂರಿನ ವೈದ್ಯಾಧಿಕಾರಿ ಡಾ.ಅಣ್ಣಯ್ಯ ಕುಲಾಲ್ ಮಾತನಾಡಿ, ಸಾಕಷ್ಟು ಜನರು ಕೋವಿಡ್ ಆತಂಕದಿಂದ ಹೊರಬಂದಿದ್ದಾಸೆ. ಎಲ್ಲೋ ಒಂದಷ್ಟು ಜನರ ಮಾತ್ರ ಪ್ರಮುಖವಾಗಿ ಶ್ರೀಮಂತರು ಹಾಗೂ ನಗರವಾಸಿಗಳಲ್ಲಿ ವೈರಸ್ ಆತಂಕವಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಮತ್ತು ಇತರೆ ದೊಡ್ಡ ನಗರಗಳಲ್ಲಿರುವ ಜನರ ವರ್ತನೆಯಿಂದ ಇದು ಸಾಬೀತಾಗಿದೆ. ಈಗಲೂ ಅಲ್ಲಿನ ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಇತರರೊಂದಿಗೆ ಊಟ ಮಾಡದಿರುವುದು, ಕೈ ಕುಲುಕದಿರುವುದರಿಂದ ಕಂಡು ಬರುತ್ತಿದೆ. ಇಲ್ಲಿನ ಜನರು ಮತದಾನದಿಂದ ದೂರ ಉಳಿಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಜೀವವೇ ಹೋದರೆ ಮತದಾನ ಮಾಡಿ ಏನು ಪ್ರಯೋಜನ ಎಂಬ ಭಾವನೆ ಇಲ್ಲಿನ ಜನರಲ್ಲಿದೆ. ಇಂತಹ ನಿರಾಸಕ್ತಿ ಅಧಿಕಾರಿಗಳು ದೂರಾಗಿಸಬೇಕೆಂದು ಹೇಳಿದ್ದಾರೆ.

ದಕ್ಷಿಣ ಕನ್ನಡದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರು ಮಾತನಾಡಿ, ಒಂದು ಸಣ್ಣ ವರ್ಗದ ಜನರು ಇನ್ನೂ ಕೋವಿಡ್ ಬಗ್ಗೆ ಭಯಪಡುತ್ತಿದ್ದಾರೆ. ಆದರೆ ಇದು ಮತದಾನದ ಶೇಕಡಾವಾರು ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್ ಅವರು ಮಾತನಾಡಿ, ಚುನಾವಣಾ ಆಯೋಗವು ನಿಗದಿಪಡಿಸಿದ ಕೋವಿಡ್ ಮಾನದಂಡಗಳನ್ನು ಅನುಸರಿಸಿದರೆ ಮತದಾನದ ಶೇಕಡಾವಾರು ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಯಾವುದೇ ಹೊಸ ಮಾರ್ಗಸೂಚಿಗಳ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ತೋರುತ್ತಿದೆ. ನಾಗರಿಕರು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು. ರೋಗಲಕ್ಷಣಗಳು ಕಂಡು ಬಂದ ಕೂಡಲೇ ಪರೀಕ್ಷೆಗೊಳಗಾಗಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com