ವಾರ್ಷಿಕ ವೇತನ ಹೆಚ್ಚಳಕ್ಕೆ ನಿವೃತ್ತಿ ದಿನಾಂಕ ಬಾಧಕವಲ್ಲ: ಸರ್ಕಾರಿ ನೌಕರರ ಇನ್ಕ್ರಿಮೆಂಟ್ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು, KPTCLಗೆ ಹಿನ್ನಡೆ
ನವದೆಹಲಿ: ಸರ್ಕಾರಿ ನೌಕರರ ವಾರ್ಷಿಕ ವೇತನ ಹೆಚ್ಚಳಕ್ಕೆ ಅವರ ನಿವೃತ್ತಿ ದಿನಾಂಕ ಬಾಧಕವಲ್ಲ. ಸರ್ಕಾರಿ ನೌಕರರು ಮಾರನೇ ದಿನ ನಿವೃತ್ತರಾಗುತ್ತಿದ್ದರೂ ಅಂತಹ ನೌಕರರಿಗೆ ವೇತನ ಹೆಚ್ಚಳ ಅಥವಾ ಇನ್ಕ್ರಿಮೆಂಟ್ ಪಡೆಯುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕೆಪಿಟಿಸಿಎಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರ ಪೀಠ ಆದೇಶ ನೀಡಿದೆ. ಇನ್ ಕ್ರಿಮೆಂಟ್ ನೀಡುವುದು ನೌಕರರ ದಕ್ಷ ಕಾರ್ಯನಿರ್ವಹಣೆಗೆ ಮತ್ತು ಒಳ್ಳೆಯ ನಡತೆಗಾಗಿ. ಈ ಪ್ರಕರಣದಲ್ಲಿ ನೌಕರರ ಸೇವೆಯ ಕುರಿತಾಗಿ ಯಾವುದೇ ಆಕ್ಷೇಪಣೆ ಇಲ್ಲ. ಹೀಗಾಗಿ ನೌಕರ ಇನ್ಕ್ರಿಮೆಂಟ್ ಪಡೆದುಕೊಳ್ಳಲು ಅರ್ಹರು ಎಂದು ತಿಳಿಸಿದ ನ್ಯಾಯಪೀಠ ಕೆಪಿಟಿಸಿಎಲ್ ಅರ್ಜಿಯನ್ನು ವಜಾಗೊಳಿಸಿದೆ.
ವಾರ್ಷಿಕ ವೇತನ ಹೆಚ್ಚಳ ನೌಕರರಿಗೆ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನೀಡುವ ಪ್ರೋತ್ಸಾಹವಾಗಿದೆ. ಕೆಲವು ದಿನಗಳಲ್ಲಿ ನಿವೃತ್ತರಾಗುವ ನೌಕರರಿಗೆ ಇದನ್ನು ಮಂಜೂರು ಮಾಡುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವಾದ ಮಂಡಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ನ್ಯಾಯಪೀಠ ಇದನ್ನು ತಳ್ಳಿ ಹಾಕಿದೆ. ಕೆಪಿಟಿಸಿಎಲ್ ನೌಕರರ ಸೇವಾ ನಿಯಮದ ಪ್ರಕಾರ ಹಿಂದಿನ ವರ್ಷದ ಸೇವೆಯಲ್ಲಿನ ಉತ್ತಮ ನಡತೆ ಅನುಸರಿಸಿ ಇನ್ಕ್ರಿಮೆಂಟ್ ನೀಡಲಾಗುತ್ತದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಹೀಗಾಗಿ ಕೆಪಿಟಿಸಿಎಲ್ ವಾದದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತಾಗಿ ಕರ್ನಾಟಕ ಹೈಕೋರ್ಟ್ ನೀಡಿರುವ ನೌಕರನಿಗೆ ಇನ್ಕ್ರಿಮೆಂಟ್ ಮಂಜೂರು ಮಾಡುವ ಸೂಚನೆ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ. ಸರ್ಕಾರಿ ನೌಕರರು ಆರ್ಥಿಕ ಲಾಭ ಗಳಿಸಿದ ಒಂದು ದಿನದ ನಂತರ ನಿವೃತ್ತಿಯಾದರೂ ವಾರ್ಷಿಕ ಇನ್ಕ್ರಿಮೆಂಟ್‌ಗೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ಮರುದಿನವೇ ನಿವೃತ್ತಿಯಾಗಲಿದ್ದರೂ ಸಹ ನೌಕರರು ವಾರ್ಷಿಕ ಇನ್ಕ್ರಿಮೆಂಟ್‌ಗೆ ಅರ್ಹರು ಎಂಬ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಲಿಮಿಟೆಡ್ (ಕೆಪಿಟಿಸಿಎಲ್) ಸಲ್ಲಿಸಿದ ಮೇಲ್ಮನವಿಯ ಮೇಲೆ ಮಹತ್ವದ ತೀರ್ಪು ಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ