ರಾಜ್ಯದಲ್ಲಿ ರಂಗೇರುತ್ತಿರುವ ಚುನಾವಣಾ ಕಣ: ಹೆಲಿಕಾಪ್ಟರ್ ಗಳಿಗೆ ಹೆಚ್ಚಿದ ಬೇಡಿಕೆ!

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಪ್ರಚಾರ ಕಾರ್ಯಕ್ಕೆ ಸಜ್ಜುಗೊಳ್ಳುತ್ತಿರುವ ರಾಜಕೀಯ ಪಕ್ಷಗಳಿಂದ ಹೆಲಿಕಾಪ್ಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ಪ್ರಚಾರ ಕಾರ್ಯಕ್ಕೆ ಸಜ್ಜುಗೊಳ್ಳುತ್ತಿರುವ ರಾಜಕೀಯ ಪಕ್ಷಗಳಿಂದ ಹೆಲಿಕಾಪ್ಟರ್ ಗಳಿಗೆ ಬೇಡಿಕೆಗಳು ಹೆಚ್ಚಾಗುತ್ತಿದೆ.

ಏಪ್ರಿಲ್ 13 ರಂದು ನಾಮಪತ್ರ ಸಲ್ಲಿಕೆ ಆರಂಭವಾದಾಗಿನಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪ್ರಚಾರಕ್ಕೆ ಸಜ್ಜಾಗೊಳ್ಳುತ್ತಿರುವ ರಾಜಕೀಯ ಪಕ್ಷಗಳಿಗೆ. ರಾಜ್ಯದ ದೂರ ಪ್ರದೇಶ ಸೇರಿದಂತೆ 3-4 ಸ್ಥಳಕ್ಕೆ ಭೇಟಿ ನೀಡಿ ಪ್ರಚಾರ ನಡೆಸಬೇಕಿದ್ದು, ಈ ವೇಳೆ ಹೆಲಿಕಾಪ್ಟರ್ ಗಳ ಅಗತ್ಯತೆಗಳು ಹೆಚ್ಚಾಗುತ್ತಿವೆ.

ಶಿವಮೊಗ್ಗ ಮತ್ತು ಕಲಬುರಗಿ ಸೇರಿದಂತೆ ಹಲವೆಡೆ ವಿಮಾನ ನಿಲ್ದಾಣಗಳು ನಿರ್ಮಾಣಗೊಂಡಿದ್ದು, ಅನೇಕ ನಾಯಕರು ಈ ಪಟ್ಟಣಗಳನ್ನು ತಲುಪಲು ಹೆಲಿಕಾಪ್ಟರ್ ಗಳ ಬಳಕೆಗೆ ಮುಂದಾಗಿದ್ದಾರೆಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

ನಾಯಕರಿಗೆ ಸೂಕ್ತವಾದ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ನೀಡುವ ಹೆಚ್ಚಿನ ಸಂಸ್ಥೆಗಲು ರಾಜ್ಯದಲ್ಲಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ನವದೆಹಲಿಯ ಸಂಸ್ಥೆಗಳನ್ನು ಸಂಪರ್ಕಿಸುತ್ತಿದೆ ಎಂದು ತಿಳಿದುಬಂದಿದೆ.

ಇತರೆ ಪಕ್ಷಗಳಿಗೆ ಹೋಲಿಸಿದರೆ, ಬಿಜೆಪಿ ಹೆಚ್ಚಿನ ಸಂಖ್ಯೆಯ ಹೆಲಿಕಾಪ್ಟರ್‌ಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.

ಈ ಬಾರಿಯ ಚುನಾವಣಾ ಪ್ರಚಾರಕ್ಕೆ ಬಿಜೆಪಿಯಿಂದ ಸ್ಥಳೀಯ ನಾಯಕರ ಹೊರತುಪಡಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ದೇಶದ ವಿವಿಧ ಭಾಗಗಳ ನಾಯಕರ ದಂಡೇ ರಾಜ್ಯಕ್ಕೆ ಹರಿದು ಬರುತ್ತಿದೆ.

ನಮಗೆ ದಿನಕ್ಕೆ ಕನಿಷ್ಠ 40 ಹೆಲಿಕಾಪ್ಟರ್‌ಗಳು ಬೇಕಾಗಬಹುದು, ಕೇವಲ ನಾಯಕರಷ್ಟೇ ಅಲ್ಲ, ಅವರ ಭದ್ರತಾ ಸಿಬ್ಬಂದಿ ಮತ್ತು ಇತರರು ಕೂಡ ಅವರೊಂದಿಗೆ ಇರುವುದರಿಂದ ಹೆಲಿಕಾಪ್ಟರ್ ಗಳ ನೇಮಕ ಅಗತ್ಯವಿದೆ. ಕೆಲವು ಪ್ರಚಾರಕರಿಗೆ ಪಕ್ಷವು ಇಡೀ ತಿಂಗಳು ಕಾಲ ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವ ನಿರೀಕ್ಷೆಯಲ್ಲಿರುವ ತಮ್ಮ ಸ್ಟಾರ್ ಪ್ರಚಾರಕರಿಗೆ ಕಾಂಗ್ರೆಸ್ ಹೆಲಿಕಾಪ್ಟರ್‌ಗಳನ್ನು ನೀಡಿದೆ ಎಂದು ತಿಳಿದುಬಂದಿದೆ.

ಪ್ರಯಾಣದ ಸಮನ್ವಯ ಮತ್ತು ಹೆಲಿಕಾಪ್ಟರ್‌ಗಳ ನೇಮಕಕ್ಕೆ ಪಕ್ಷವು ತಂಡವೊಂದನ್ನು ರಚಿಸಿದ್ದು, ದಿನಕ್ಕೆ 10 ರಿಂದ 20 ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆಯುವ ನಿರೀಕ್ಷೆಗಳಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಗಳು ತಿಳಿಸಿವೆ.

ಇಂಜಿನ್ ಸಾಮರ್ಥ್ಯ ಮತ್ತು ಆಸನಗಳ ಆಧಾರದ ಮೇಲೆ ಬಾಡಿಗೆಗಳು ಬದಲಾಗುತ್ತವೆ. ಕೆಲವು ಏಜೆನ್ಸಿಗಳು ಗಂಟೆಗೆ 2.10 ಲಕ್ಷದಿಂದ 2.30 ಲಕ್ಷದವರೆಗೆ ಬಾಡಿಗೆಗೆ ನೀಡಿದರೆ, ಇನ್ನು ಕೆಲವು ಸಂಸ್ಥೆಗಳು ಸಿಂಗಲ್ ಇಂಜಿನ್‌ಗೆ 7 ಲಕ್ಷ ಮತ್ತು ಡಬಲ್ ಎಂಜಿನ್‌ಗೆ 10 ಲಕ್ಷ ರೂ ಪಡೆಯುತ್ತಿವೆ ಎಂದು ತಿಳಿದುಬಂದಿದೆ.

ನಾಲ್ಕು ಆಸನಗಳು ಎಲ್ಲಾ ಹೆಲಿಕಾಪ್ಟರ್‌ಗಳು, ಆರು ಆಸನಗಳ ಹೆಲಿಕಾಪ್ಟರ್‌ಗಳನ್ನು ಹೈದರಾಬಾದ್‌ನಿಂದ ಬಾಡಿಗೆಗೆ ಪಡೆಯಲಾಗುತ್ತದೆ. ಎಂಟು ಆಸನಗಳ ಸಾಮರ್ಥ್ಯದ ವಿಶೇಷ ವಿಮಾನಗಳ ಬಾಡಿಗೆರ ರೂ. 12 ಲಕ್ಷದಿಂದ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ.

ಈ ನಡುವೆ ಚುನಾವಣಾ ಆಯೋಗದ ಅಧಿಕಾರಿಗಳು ಬಾಡಿಗೆಗೆ ಪಡೆಯುವ ಹೆಲಿಕಾಪ್ಟರ್‌ಗಳು ಮತ್ತು ಅವುಗಳ ವೆಚ್ಚದ ಮೇಲೆ ನಿಗಾ ಇರಿಸಿದ್ದಾರೆಂದು ವರದಿಗಳು ತಿಳಿಸಿವೆ.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ಅವರು ಮಾತನಾಡಿ, ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ನೀಡುವ ವೆಚ್ಚವು ನಾಯಕರು ಬಳಸುವ ವಾಹನಗಳ ಬಾಡಿಗೆಯಂತೆಯೇ ಇರುತ್ತದೆ ಎಂದು ಹೇಳಿದ್ದಾರೆ.

ಸ್ಟಾರ್ ಪ್ರಚಾರಕರು ಹೆಲಿಕಾಪ್ಟರ್ ಬಳಸಿ ಅಭ್ಯರ್ಥಿಯ ಹೆಸರನ್ನು ಹೇಳದೆ ಅಥವಾ ಅಭ್ಯರ್ಥಿಯೊಂದಿಗೆ ವೇದಿಕೆ ಹಂಚಿಕೊಳ್ಳದೆ ಭಾಷಣ ಮಾಡಿದರೆ, ಆಗ ಸಂಪೂರ್ಣ ಖರ್ಚು ಪಕ್ಷದ ಮೇಲೆ ಬೀಳುತ್ತದೆ. ಒಂದು ವೇಳೆ ಪ್ರಚಾರಕರು ಅಭ್ಯರ್ಥಿಯ ಹೆಸರನ್ನು ಬಳಸಿದರೆ ಅಥವಾ ಅಭ್ಯರ್ಥಿಯೊಂದಿಗೆ ವೇದಿಕೆ ಹಂಚಿಕೊಂಡರೆ, ವೆಚ್ಚವನ್ನು ಪಕ್ಷ ಮತ್ತು ಅಭ್ಯರ್ಥಿಯ ನಡುವೆ ತಲಾ 50 ಪ್ರತಿಶತದಂತೆ ಸಮಾನವಾಗಿ ವಿಂಗಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೆಲಿಕಾಪ್ಟರ್ ಬಳಸಲು ಬಯಸುವವರು ಜಿಲ್ಲಾ ಚುನಾವಣಾಧಿಕಾರಿ, ಸ್ಥಳೀಯ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಸುವಿಧಾ ಆ್ಯಪ್ ಮೂಲಕ ಹೆಲಿಕಾಪ್ಟರ್ ಸೇರಿದಂತೆ ವಾಹನಗಳನ್ನು ಬಾಡಿಗೆಗೆ ಪಡೆಯುವಾಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com