'ಹಂತಕರ ಬಿಡುವ ಪ್ರಶ್ನೆಯೇ ಇಲ್ಲ': ಪ್ರವೀಣ್ ಕಮ್ಮಾರ್ ಅಂತಿಮ ದರ್ಶನ ಪಡೆದ ಪ್ರಹ್ಲಾದ್‌ ಜೋಶಿ ಕಿಡಿ

ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಧಾರವಾಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕಮ್ಮಾರ್ ಹಂತಕರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.
ಪ್ರಹ್ಲಾದ್ ಜೋಶಿ ಮತ್ತು ಪ್ರವೀಣ್ ಕಮ್ಮಾರ್
ಪ್ರಹ್ಲಾದ್ ಜೋಶಿ ಮತ್ತು ಪ್ರವೀಣ್ ಕಮ್ಮಾರ್

ಧಾರವಾಡ: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಧಾರವಾಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕಮ್ಮಾರ್ ಹಂತಕರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.

 ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಧಾರವಾಡದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕಮ್ಮಾರ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ಪ್ರವೀಣ ಕಮ್ಮಾರ (Praveen Kammar) ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತಡ ರಾತ್ರಿ ಪ್ರವೀಣ ಅವರ ಹೊಟ್ಟೆಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಇದೀಗ ಪ್ರವೀಣ ಕಮ್ಮಾರ ಮೃತದೇಹ ಇರುವ ಎಸ್‌ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶಾಸಕ ಅಮೃತ ದೇಸಾಯಿ ಅವರು ಭೇಟಿ ನೀಡಿದ್ದಾರೆ. ಪ್ರವೀಣ ಕಮ್ಮಾರ ಬಿಜೆಪಿ ಮುಖಂಡರಾಗಿದ್ದು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಿಜೆಪಿ ಯುವ ಮುಖಂಡನ ಅಂತಿಮ ದರ್ಶನ ಪಡೆದರು.

ಇತ್ತ ಕೋಟೂರಿನಲ್ಲಿ ನೀರವ ಮೌನ ಆವರಿಸಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಕೂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿಯೇ ಈ ಹತ್ಯೆ ನಡೆದಿದ್ದು, ಯಾವುದೇ ಗಲಾಟೆಗಳು ಉಂಟಾಗದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಹತ್ಯೆ ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದ್ದು, ತಂಡವನ್ನು ಕೂಡ ರಚನೆ ಮಾಡಲಾಗಿದೆ.

ಹಂತಕರ ವಿರುದ್ಧ ಜೋಶಿ ಕಿಡಿ
ಇನ್ನು ಪ್ರವೀಣ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಪ್ರಹ್ಲಾದ್ ಜೋಶಿ ಸರಣಿ ಟ್ವೀಟ್ ಮೂಲಕ ಹಂತಕರ ವಿರುದ್ಧ ಕಿಡಿಕಾರಿದ್ದಾರೆ. 'ಕೋಟೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಯುವಮೋರ್ಚಾ ಕಾರ್ಯಕಾರಣಿ ಸದಸ್ಯನಾಗಿ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಪ್ರವೀಣ್ ಕಮ್ಮಾರ್ ಅವರ ಸಾವು ಮನಸ್ಸಿಗೆ ಆಘಾತ ಉಂಟುಮಾಡಿದೆ.

ನಮ್ಮ ಕಾರ್ಯಕರ್ತರ ಸಾವಿಗೆ ಕಾರಣವಾದ ಹಂತಕರನ್ನು ಸುಮ್ಮನೆ ಬಿಡುವ ಮಾತೇ ಇಲ್ಲ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತೃಪ್ತಿ ಪಡುವ ಅತೃಪ್ತ ಆತ್ಮಗಳನ್ನು ಸಮಾಜದ ಮುಂದೆ ಬೆತ್ತಲಾಗಿಸುವ ಕಾಲ ಸನ್ನಿಹಿತವಾಗಿದೆ. ವಿಷಯ ತಿಳಿದು ಎಸ್ ಡಿ ಎಂ ಆಸ್ಪತ್ರೆಗೆ ಧಾವಿಸಿ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದೆ.

ಮೃತ ಪ್ರವೀಣನ ಆತ್ಮಕ್ಕೆ ಭಗವಂತನು ಸದ್ಗತಿ ಕರುಣಿಸಲಿ ಹಾಗೂ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com