ಸಕಲೇಶಪುರ: ಹೆರಿಗೆ ವೇಳೆ ಆನೆ ಸಾವು

ಮರಿಗೆ ಜನ್ಮ ನೀಡಲು ಹೆಣಗಾಡಿದ ಗರ್ಭಿಣಿ ಆನೆಯೊಂದು ಸಾವನ್ನಪ್ಪಿರುವ ಘಟನೆಯೊಂದು ಸಕಲೇಶಪುರದ ಉಡೆಯಾವರ ಗ್ರಾಮದ ಕಾಫಿ ಎಸ್ಟೇಟ್‌ವೊಂದರಲ್ಲಿ ಸೋಮವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಮರಿಗೆ ಜನ್ಮ ನೀಡಲು ಹೆಣಗಾಡಿದ ಗರ್ಭಿಣಿ ಆನೆಯೊಂದು ಸಾವನ್ನಪ್ಪಿರುವ ಘಟನೆಯೊಂದು ಸಕಲೇಶಪುರದ ಉಡೆಯಾವರ ಗ್ರಾಮದ ಕಾಫಿ ಎಸ್ಟೇಟ್‌ವೊಂದರಲ್ಲಿ ಸೋಮವಾರ ನಡೆದಿದೆ.

ಬೈರಯ್ಯ ಎಂಬುವರಿಗೆ ಸೇರಿದ ಕಾಫಿ ಎಸ್ಟೇಟ್‌ನಲ್ಲಿ 30 ವರ್ಷದ ಗರ್ಭಿಣಿ ಆನೆ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಸುದ್ದಿ ತಿಳಿದ ಕೂಡಲೇ ನವೀನ್ ನೇತೃತ್ವದ ಪಶುವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿದೆ.

ಮೃತ ಆನೆಯ ಗರ್ಭಕೋಶದಲ್ಲಿ ಗಂಡು ಭ್ರೂಣವೊಂದನ್ನು ಪಶುವೈದ್ಯರು ಪತ್ತೆ ಮಾಡಿದ್ದಾರೆ. ಗರ್ಭಿಣಿ ಆನೆ ಮರಿಗೆ ಜನ್ಮ ನೀಡಲು ಹರಸಾಹಸ ಪಟ್ಟಿದ್ದು, ಕೊನೆಗೆ ಸೆಪ್ಟಿಸಿಮಿಯಾದಿಂದ ರಕ್ತ ವಿಷಪೂರಿತವಾಗಿ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆಯೇ ಆನೆ ಮೃತಪಟ್ಟಿದ್ದು. ನಂತರ ಮೃತದೇಹ ಕೊಳೆಯಲಾರಂಭಿಸಿದೆ. ಆನೆ ಸಾವನ್ನಪ್ಪಿದ ಸ್ಥಳದಲ್ಲಿ ಆನೆ ಹೆರಿಗೆ ನೋವಿಗೆ ಹೆಣಗಾಡಿರುವ ಗುರುತುಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶವ ಪರೀಕ್ಷೆ ಬಳಿಕ ಅರಣ್ಯಾಧಿಕಾರಿಗಳು, ಅಂತ್ಯಸಂಸ್ಕಾರ ನಡೆಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಆನೆಯ ರಕ್ತ ಮತ್ತು ಮೃತದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವೇ ಸಾವಿಕೆ ನಿಖರ ಕಾರಣಗಲು ತಿಳಿದುಬರಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಮಾನವ-ಆನೆ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಎಲ್ಲಾ ಪ್ರಯತ್ನಗಳ ಬಳಿಕವೂ ಈ ಸಂಘರ್ಷಗಳು ಮುಂದುವರೆಯುತ್ತಲೇ ಇವೆ ಎಂದು ತಿಳಿಸಿದ್ದಾರೆ.

ಸಕಲೇಶಪುರದ ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವ ಯಸಳೂರು ಮತ್ತು ಹನಬಾಳ ಹೋಬಳಿಗಳಲ್ಲಿ ಮೂರು ತಿಂಗಳಲ್ಲಿ ಮೂರು ಆನೆಗಳು ನಿಗೂಢವಾಗಿ ಸಾವನ್ನಪ್ಪಿದ್ದವು.

ಆಲೂರು, ಸಕಲೇಶಪುರ, ಅರಕಲಗೂಡು, ಬೇಲೂರು ತಾಲೂಕಿನ ಗಡಿ ಭಾಗದ ಗ್ರಾಮಗಳಿಗೆ ನುಗ್ಗಿರುವ ಆನೆಗಳು, ಮನೆಗಳ ಮೇಲೆ ದಾಳಿ ಮಾಡುತ್ತಿವೆ. ಹಗಲು ಹೊತ್ತಿನಲ್ಲೇ ನುಗ್ಗುತ್ತಿರುವ ಆನೆಗಳು, ಜನರಿಗೆ ನಿದ್ದೆಯಿಲ್ಲದಂತೆ ಮಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com