ರಾಗಿ, ಜೋಳ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ರಾಗಿ ಹಾಗೂ ಜೋಳಕ್ಕೆ 2023–24ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಆಗ್ರಹಿಸಿದೆ.
ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ
ಆಹಾರ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ

ನವದೆಹಲಿ: ರಾಗಿ ಹಾಗೂ ಜೋಳಕ್ಕೆ 2023–24ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಆಗ್ರಹಿಸಿದೆ.

ಕೇಂದ್ರ ವಾಣಿಜ್ಯ ಹಾಗೂ ಆಹಾರ ಸಚಿವ ಪಿಯೂಷ್‌ ಗೋಯಲ್ ಅವರನ್ನು ಸೋಮವಾರ ಭೇಟಿ ಮಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅವರು, ಈ ಕುರಿತು ಮನವಿ ಮಾಡಿಕೊಂಡರು.

2023-24ನೇ ಸಾಲಿಗೆ ರಾಗಿ ಎಂಎಸ್‌ಪಿಯನ್ನು ಈಗಿನ ದರ ರೂ.3846ರಿಂದ ರೂ.5 ಸಾವಿರಕ್ಕೆ ಹೆಚ್ಚಿಸಬೇಕು. ಜೋಳದ (ಮಾಲ್ದಂಡಿ) ಬೆಂಬಲ ಬೆಲೆಯನ್ನು ರೂ.3,225ರಿಂದ ರೂ.4,500ಕ್ಕೆ ಜೋಳದ (ಹೈಬ್ರಿಡ್‌) ಬೆಲೆಯನ್ನು ರೂ.3,180ರಿಂದ ರೂ.4,500 ಕ್ಕೆ ಜಾಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಕಳೆದ ಹತ್ತು ವರ್ಷಗಳಲ್ಲಿ ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಬೆಲೆ ಮೂರು ಸಲ ಹೆಚ್ಚಾಗಿದೆ. ಇದರಿಂದ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೇಂದ್ರ ಸಚಿವರೊಂದಿಗೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಗ್ರಾಹಕರಿಗೆ ವಿತರಿಸಲು 8 ಲಕ್ಷ ಟನ್ ರಾಗಿ ಮತ್ತು 3 ಲಕ್ಷ ಟನ್ ಜೋಳವನ್ನು ಖರೀದಿಸಲು ಗೋಯಲ್ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಅನ್ನ ಭಾಗ್ಯ ಯೋಜನೆಗೆ ತಿಂಗಳಿಗೆ 2.28 ಲಕ್ಷ ಟನ್‌ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಲ್ಲ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿ ಮಾಡಲು ಯೋಜಿಸಲಾಗಿದೆ. ಬೆಲೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಈಗ ಪಡಿತರ ಚೀಟಿದಾರರಿಗೆ ರೂ.5 ಕೆ.ಜಿ. ಅಕ್ಕಿ ಬದಲು ಹಣ ನೀಡಲಾಗುತ್ತಿದೆ. ಶೀಘ್ರದಲ್ಲಿ ಅಕ್ಕಿ ನೀಡಲಾಗುವುದು ಎಂದರು.

ತಿರುಪತಿ ಸೇರಿದಂತೆ ಪ್ರಮುಖ ಖರೀದಿದಾರರಿಗೆ ನಂದಿನಿ ತುಪ್ಪ ಒದಗಿಸುವ ಬಗ್ಗೆ ಮಾತುಕತೆ ನಡೆಸಲು ಹಾಗೂ ತುಪ್ಪ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಕಾರ ಸಚಿವರಿಗೆ ಸಲಹೆ ನೀಡುವುದಾಗಿ ತಿಳಿಸಿದರು.

ನಂದಿನಿ ತುಪ್ಪ ತುಂಬಾ ಚೆನ್ನಾಗಿದೆ. ಅದನ್ನು ಬಳಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ತಿರುಪತಿಗೆ ಪೂರೈಕೆಯನ್ನು ಮುಂದುವರಿಸುವಂತೆ ಸಚಿವರಿಗೆ ತಿಳಿಸುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com