ತಿರುಪತಿಗೆ ನಂದಿನಿ ತುಪ್ಪ ಸ್ಥಗಿತ: ಕೆಎಂಎಫ್ ಆರೋಪ ತಿರಸ್ಕರಿಸಿದ ಟಿಟಿಡಿ; 'ವರ್ಷದ ಹಿಂದಿನ ವಿಚಾರ' ಎಂದ ಸಿಎಂ ಸಿದ್ದರಾಮಯ್ಯ

ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಅನುಮತಿ ನೀಡಿಲ್ಲ ಎಂಬ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಅಧ್ಯಕ್ಷ ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಟಿಟಿಡಿ ಮಂಗಳವಾರ ಸ್ಪಷ್ಟಪಡಿಸಿದೆ.
ನಂದಿನಿ ತುಪ್ಪ ಮತ್ತು ಟಿಟಿಡಿ
ನಂದಿನಿ ತುಪ್ಪ ಮತ್ತು ಟಿಟಿಡಿ
Updated on

ಬೆಂಗಳೂರು: ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡಲು ಅನುಮತಿ ನೀಡಿಲ್ಲ ಎಂಬ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್‌) ಅಧ್ಯಕ್ಷ ಹೇಳಿರುವ ಮಾತು ಸತ್ಯಕ್ಕೆ ದೂರವಾದದ್ದು ಎಂದು ಟಿಟಿಡಿ ಮಂಗಳವಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಟಿಟಿಡಿಯ ಧರ್ಮಾರೆಡ್ಡಿ ಅವರು, ‘ಕೆಎಂಎಫ್‌ ಅಧ್ಯಕ್ಷರು ನೀಡಿರುವ ಹೇಳಿಕೆ ಸರಿಯಲ್ಲ. ತುಪ್ಪವೂ ಸೇರಿ ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ಟಿಟಿಡಿ ಇ–ಟೆಂಡರ್‌ ಮೂಲಕ ಸಂಗ್ರಹಿಸುತ್ತದೆ. ಇ–ಟೆಂಡರ್ ಮೂಲಕ ಭಾರತದಾದ್ಯಂತ ಬಿಡ್‌ಗಳನ್ನು ಆಹ್ವಾನಿಸಲಾಗುತ್ತದೆ. ಟೆಂಡರ್ ತೆರೆಯುವವರೆಗೂ ಯಾರೆಲ್ಲಾ ಬಿಡ್‌ ಸಲ್ಲಿಸಿದ್ದಾರೆ ಎನ್ನುವ ಮಾಹಿತಿಯೂ ನಮಗೆ ಇರುವುದಿಲ್ಲ. ಟಿಟಿಡಿ ಸರ್ಕಾರಿ ಸಂಸ್ಥೆಯಾಗಿರುವುದರಿಂದ ಇ-ಟೆಂಡರ್ ನಿಯಮಗಳ ಪ್ರಕಾರ ನಾವು ಬಿಡ್ ಅಂತಿಮಗೊಳಿಸುತ್ತೇವೆ. ಇ-ಟೆಂಡರ್ ನಲ್ಲಿ ಯಾರು ಕಡಿಮೆ ಮೊತ್ತಕ್ಕೆ ಗುಣಮಟ್ಟದ ತುಪ್ಪ ಸರಬರಾಜು ಮಾಡಲು ಒಪ್ಪಿಗೆ ನೀಡಿರುತ್ತಾರೆಯೋ ಅವರಿಗೆ ಗುತ್ತಿಗೆ ನೀಡುತ್ತೇವೆ ಎಂದು ರೆಡ್ಡಿ ಹೇಳಿದ್ದಾರೆ.

ಕೆಎಂಎಫ್‌ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದೇನು?
‘ಲಡ್ಡು ತಯಾರಿಕೆಗೆ ಅಗತ್ಯವಿರುವ ತುಪ್ಪ ಪೂರೈಸಲು ಟಿಟಿಡಿ ಟೆಂಡರ್‌ ಕರೆದಿತ್ತು. ಆದರೆ, ನಮ್ಮ ಉತ್ಪನ್ನದ ಗುಣಮಟ್ಟ ಹಾಗೂ ಅದಕ್ಕೆ ತಕ್ಕಂತೆ ದರ ಹೆಚ್ಚಿರುವುದರಿಂದ ಪಾಲ್ಗೊಂಡಿಲ್ಲ’ ಎಂದು ಕೆಎಂಎಫ್‌ ಅಧ್ಯಕ್ಷ ಭೀಮನಾಯ್ಕ ತಿಳಿಸಿದ್ದರು. ‘2005ರಿಂದಲೂ ಕೆಎಂಎಫ್‌ ತುಪ್ಪವನ್ನು ಪೂರೈಸುತ್ತಿತ್ತು. ತಿರುಪತಿಯಲ್ಲಿ ತಯಾರಾಗುತ್ತಿದ್ದ ಲಡ್ಡುಗಳಿಗೆ ಶೇ 45ರಷ್ಟು ನಂದಿನಿ ಬ್ರ್ಯಾಂಡ್‌ ತುಪ್ಪವನ್ನೇ ಬಳಸಲಾಗುತ್ತಿತ್ತು. 2022ರಲ್ಲಿ ಕೋರಿಕೆಯ ಮೇರೆಗೆ ಮಾತ್ರ ಪ್ರತಿ ಕೆ.ಜಿ.ಗೆ 349 ರೂನಂತೆ 345 ಟನ್‌ ತುಪ್ಪ ಪೂರೈಸಲಾಗಿತ್ತು. ಆದರೆ, ಈ ಬಾರಿ ತುಪ್ಪದ ಬೇಡಿಕೆ ನಮ್ಮ ರಾಜ್ಯದಲ್ಲೇ ಹೆಚ್ಚಾಗಿದ್ದು, ಸಂಗ್ರಹದ ಕೊರತೆಯೂ ಇದೆ. ಜತೆಗೆ, ನಿರೀಕ್ಷೆಗೆ ತಕ್ಕಂತೆ ನಮಗೆ ದರ ದೊರೆತಿಲ್ಲ. ಟಿಟಿಡಿ ಟೆಂಡರ್‌ನಲ್ಲಿ ನಾವು ನಿಗದಿಪಡಿಸಿದ ದರ ಮೂರನೇ ಸ್ಥಾನದಲ್ಲಿದೆ. ಹೀಗಾಗಿ, ಕೆಎಂಎಫ್‌ ತುಪ್ಪ ಪೂರೈಸುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.

'ವರ್ಷದ ಹಿಂದಿನ ವಿಚಾರ' ಎಂದ ಸಿಎಂ ಸಿದ್ದರಾಮಯ್ಯ
ಇನ್ನು ತಿರುಪತಿಗೆ ನಂದಿನಿ ತುಪ್ಪ ಸ್ಥಗಿತವಾದ ವಿಚಾರದ ಕುರಿತು ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 'ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ. ಕಳೆದ ಒಂದೂವರೆ ವರ್ಷದ ಹಿಂದೆಯೇ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರುಪತಿಗೆ ತುಪ್ಪ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ 'ಮಾನ್ಯ ಸಂಸದ ನಳೀನ್ ಕುಮಾರ್ ಕಟೀಲ್  ಅವರೇ ಈಗ ಹೇಳಿ, ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಿಂದೂ ಧಾರ್ಮಿಕ ಶ್ರದ್ಧಾ ಭಕ್ತಿಯ ವಿರೋಧಿಯೋ? ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮಾತ್ರ ಹಿಂದೂ ವಿರೋಧಿಯೋ? ನಮಗೆ ಜನರ ಧಾರ್ಮಿಕ ನಂಬಿಕೆಯ ಜೊತೆಗೆ ಹೈನುಗಾರರ ಬದುಕು ಮುಖ್ಯ. ಹೀಗಾಗಿ ನಾಡಿನ ರೈತರ ಹಿತದೃಷ್ಟಿಯಿಂದ ನಾವು ಕೇಳುವ ದರ ನೀಡಲು ತಿರುಪತಿ ದೇವಾಲಯದವರು ಒಪ್ಪುವುದಾದರೆ ತುಪ್ಪ ಪೂರೈಸಲು ನಮಗೆ ಯಾವ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com