ಕಿಚ್ಚು ಹೊತ್ತಿಸಿದ ಇನ್ಸ್ ಪೆಕ್ಟರ್ ಗಳ ವರ್ಗಾವಣೆ: ಸಿದ್ದರಾಮಯ್ಯ ಕ್ಯಾಂಪ್ ಗೆ ಮನ್ನಣೆ; ಡಿಕೆ ಶಿವಕುಮಾರ್ ಪಾಳೆಯದ ಬವಣೆ!

ವರ್ಗಾವಣೆ ವಿಚಾರದಲ್ಲಿ ತಮ್ಮ ಪತ್ರಕ್ಕೆ ಸಚಿವರು ಬೆಲೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರು ಸಿಡಿದೆದ್ದು ವಾರ ಕಳೆಯುವಷ್ಟರಲ್ಲೇ, ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ ಅಸಮಾಧಾನದ ಕಿಚ್ಚು ಹೊತ್ತಿಸಿದೆ.
ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್

ಬೆಂಗಳೂರು: ವರ್ಗಾವಣೆ ವಿಚಾರದಲ್ಲಿ ತಮ್ಮ ಪತ್ರಕ್ಕೆ ಸಚಿವರು ಬೆಲೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರು ಸಿಡಿದೆದ್ದು ವಾರ ಕಳೆಯುವಷ್ಟರಲ್ಲೇ, ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ ಅಸಮಾಧಾನದ ಕಿಚ್ಚು ಹೊತ್ತಿಸಿದೆ.

ಕಾಂಗ್ರೆಸ್ ಸರ್ಕಾರಕ್ಕೆ ಪೊಲೀಸ್ ಅಧಿಕಾರಿಗಳ ವರ್ಗಾವಣೆಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 24 ಗಂಟೆಗಳಲ್ಲಿ ಮೂರು ಆದೇಶಗಳನ್ನು ಹೊರಡಿಸಿದ ಸರ್ಕಾರ,  211 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡುವ ಅಂತಿಮ ಆದೇಶವನ್ನು ಹಿಂಪಡೆಯಿತು.

ಕಾಂಗ್ರೆಸ್ ಹೈಕಮಾಂಡ್ ಬುಧವಾರ ನವದೆಹಲಿಯಲ್ಲಿ ಕರ್ನಾಟಕದ ನಾಯಕರ ಸಭೆ ನಡೆಸುತ್ತಿರುವ ವೇಳೆಯೇ ಈ ವಿಷಯ ಮುನ್ನೆಲೆಗೆ ಬಂದಿದೆ. ಗೃಹ ಸಚಿವ ಜಿ.ಪರಮೇಶ್ವರ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಹೋದ್ಯೋಗಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ವರ್ಗಾವಣೆಗೆ ಹಣದ ವಿಚಾರ ಪ್ರಸ್ತಾಪಿಸಿರುವ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್  ಹೋರಾಟಕ್ಕೆ ಮತ್ತಷ್ಟು ಮಣೆ ಹಾಕುವ ಸಾಧ್ಯತೆ ಇದೆ. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ 211 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಕೆಲವು ಕಾಂಗ್ರೆಸ್ ನಾಯಕರು ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಗೊಂದಲ ಪ್ರಾರಂಭವಾಯಿತು.

ಮೊದಲ ಆದೇಶದಲ್ಲಿ ವಜ್ರಮುನಿ ಕೆ ಅವರನ್ನು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (BDDS) ನಿಂದ ಸಿಟಿ ಮಾರ್ಕೆಟ್‌ಗೆ ವರ್ಗಾಯಿಸುವುದನ್ನು  ರದ್ಧುಗೊಳಿಸಿತು,  ಬೇಗೂರಿನಿಂದ ಮಲ್ಲೇಶ್ವರಕ್ಕೆ ಅನಿಲ್ ಕುಮಾರ್ ಎಚ್.ಡಿ,  ಜಿಗಣಿಗೆ ಹೈಕೋರ್ಟ್ ವಿಜಿಲೆನ್ಸ್ ನಿಂದ ಎಡ್ವಿನ್ ಪ್ರದೀಪ್ ಎಸ್ ಹಾಗೂ ಹಲಸೂರು ಗೇಟ್ ನಿಂದ ಕುಮಾರಸ್ವಾಮಿ ಲೇಔಟ್ ವರೆಗೆ ಜಗದೀಶ್ ಆರ್. ಅವರ ವರ್ಗಾವಣೆಯನ್ನು ಸ್ಥಗಿತಗೊಳಸಿಲಾಯಿತು. ನಂತರ  ಸರ್ಕಾರ ಇನ್ನೂ ಎರಡು ಆದೇಶಗಳನ್ನು ಹೊರಡಿಸಿ ಕ್ರಮವಾಗಿ 11 ಮತ್ತು ಎಂಟು ಅಧಿಕಾರಿಗಳ ವರ್ಗಾವಣೆಯನ್ನು ರದ್ಧುಗೊಳಿಸಿತು.

ಬೆಂಗಳೂರು ಮತ್ತು ಸುತ್ತಮುತ್ತ ಹೆಚ್ಚಾಗಿ ಪೋಸ್ಟಿಂಗ್ ಪಡೆದಿರುವ ಈ ಕೆಲವು ಅಧಿಕಾರಿಗಳಿಗೆ ಸಿದ್ದರಾಮಯ್ಯ ಪಾಳೆಯದ ಬೆಂಬಲವಿದೆ. ಇದು ಡಿಕೆ ಶಿವಕುಮಾರ್ ಪಾಳಯಕ್ಕೆ ಸರಿ ಹೋಗಲಿಲ್ಲ. ಸರ್ಕಾರದ ಸೂಚನೆಗಳನ್ನು ಅನುಸರಿಸಿ ಪೊಲೀಸ್ ಇಲಾಖೆಯು ಮುಂದಿನ ಆದೇಶದವರೆಗೆ ಅಧಿಕಾರ ವಹಿಸಿಕೊಳ್ಳದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಿಗ್ಗೆ ನಡೆದ ರಾಜ್ಯ ಪೊಲೀಸ್‌ ಸಿಬ್ಬಂದಿ ಮಂಡಳಿ (ಪಿಇಬಿ) ಸಭೆಯಲ್ಲಿ, 211 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿತ್ತು. ಮಂಡಳಿಯ ನಿರ್ಣಯದಂತೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಈ ಪಟ್ಟಿಯಲ್ಲಿ 211 ಇನ್‌ಸ್ಪೆಕ್ಟರ್‌ಗಳಿಗೆ ಸ್ಥಳ ತೋರಿಸಿದ್ದರೆ, ಆ ಸ್ಥಾನಗಳಲ್ಲಿದ್ದ ಹಲವರಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com