ಕಡತ ವಿಲೇವಾರಿ: ಕಂದಾಯ ಇಲಾಖೆಗೆ 2ನೇ ಸ್ಥಾನ- ಸಚಿವ ಕೃಷ್ಣ ಬೈರೇಗೌಡ

ಯಾವುದೇ ವಿಳಂಬವಿಲ್ಲದೆ ಕಡತಗಳನ್ನು ತೆರವುಗೊಳಿಸಲು ಕಂದಾಯ ಇಲಾಖೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಂತೆ ಇತರೆ ಇಲಾಖೆಗಳ ಪೈಕಿ ಕಂದಾಯ ಇಲಾಖೆ 2ನೇ ಸ್ಥಾನದಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದರು.
ಸಚಿವ ಕೃಷ್ಣ ಬೈರೇಗೌಡ
ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಯಾವುದೇ ವಿಳಂಬವಿಲ್ಲದೆ ಕಡತಗಳನ್ನು ತೆರವುಗೊಳಿಸಲು ಕಂದಾಯ ಇಲಾಖೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರಂತೆ ಇತರೆ ಇಲಾಖೆಗಳ ಪೈಕಿ ಕಂದಾಯ ಇಲಾಖೆ 2ನೇ ಸ್ಥಾನದಲ್ಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಹೇಳಿದರು.

ರಾಜ್ಯದ 40 ಕ್ಕೂ ಹೆಚ್ಚು ಇಲಾಖೆಗಳ ಪೈಕಿ ಕಂದಾಯ ಇಲಾಖೆಯ ಕಾರ್ಯಕ್ಷಮತೆ ಎರಡನೇ ಸ್ಥಾನದಲ್ಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೊದಲ ಸ್ಥಾನದಲ್ಲಿದೆ. ಈವರೆಗೆ ಇಲಾಖೆಯಲ್ಲಿ ಬಾಕಿ ಉಳಿದಿದ್ದ ಕಡತಗಳನ್ನು ವಿಲೇವಾರಿ ಮಾಡಲು ಆದ್ಯತೆ ನೀಡಲಾಗಿದೆ. ಹೊಸದಾಗಿ 2,123 ಕಡತಗಳು ಬಂದಿವೆ. ಈ ಕಡತಗಳನ್ನೂ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

‘ಕಡತಗಳ ವಿಲೇವಾರಿ ವಿಚಾರದಲ್ಲಿ ಕಂದಾಯ ಇಲಾಖೆ ಈವರೆಗೆ 'ಎ' ವರ್ಗದ ಕಾರ್ಯಕ್ಷಮತೆ ಪ್ರದರ್ಶಿಸಿಲ್ಲ. ಆದರೆ, ನಾವು ಕಡತ ವಿಲೇವಾರಿ ವಿಚಾರದಲ್ಲಿ 'ಎ' ವರ್ಗದ ಜೊತೆಗೆ, ಎಲ್ಲ ಇಲಾಖೆಗಳ ಪೈಕಿ ಎರಡನೇ ಸ್ಥಾನದಲ್ಲಿದ್ದೇವೆ. ದೊಡ್ಡ ಇಲಾಖೆಗಳ ಪೈಕಿ ಮೊದಲ ಸ್ಥಾನದಲ್ಲಿದ್ದೇವೆ’ ಎಂದು ತಿಳಿಸಿದರು.

ಹಲವು ವರ್ಷಗಳಿಂದ ಬಾಕಿ ಇರುವ ಕಡತಗಳನ್ನು ತ್ವರಿತವಾಗಿ ತೆರವುಗೊಳಿಸುತ್ತೇವೆ. ಅಲ್ಲದೆ, ಪೇಪರ್‌ರಹಿತ ಡಿಜಿಟಲ್ ಸೇವೆ ಸೇರಿದಂತೆ ಏನೆಲ್ಲಾ ಸಾಧ್ಯತೆಗಳಿವೆಯೋ ಅದೆಲ್ಲವನ್ನೂ ಬಳಸಿಕೊಂಡು ಅತ್ಯಂತ ವೇಗವಾಗಿ ಕಡತಗಳನ್ನು ವಿಲೇವಾರಿ ಮಾಡಲು ಇಲಾಖೆ ಬದ್ಧವಾಗಿದೆ. ಉತ್ತಮ ಆಡಳಿತ ನಮ್ಮ ಗುರಿ’ ಎಂದರು.

‘ಕಂದಾಯ ಇಲಾಖೆಯಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿ ನೀಡಿದರು. ಅಧಿಕಾರ ವಹಿಸಿದ ಎರಡು ತಿಂಗಳಿನಿಂದ ಇಡೀ ಇಲಾಖೆಗೆ ಚುರುಕು ಮುಟ್ಟಿಸಿ ಎಲ್ಲಾ ಕಡತಗಳನ್ನೂ ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com