ಏರ್ ಏಷ್ಯಾ ವಿರುದ್ಧ ದಾಖಲಿಸಿದ್ದ ದೂರು ವಾಪಸ್ ಪಡೆದ ರಾಜ್ಯಪಾಲರ ಕಚೇರಿ!

ತಡವಾಗಿ ಬಂದರು ಎಂಬ ಕಾರಣಕ್ಕಾಗಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ತೆರಳಿದ್ದ ಏರ್ ಏಷ್ಯಾ ವಿಮಾನ ಸಂಸ್ಥೆಯ ಹಾಗೂ ಅದರ ಇಬ್ಬರು ಸಿಬ್ಬಂದಿಗಳ ವಿರುದ್ಧ ದಾಖಲಿಸಿದ್ದ ದೂರನ್ನು ರಾಜ್ಯಪಾಲರ ಕಚೇರಿ ಹಿಂಪಡೆದುಕೊಂಡಿದೆ.
ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್‌
ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್‌

ಬೆಂಗಳೂರು: ತಡವಾಗಿ ಬಂದರು ಎಂಬ ಕಾರಣಕ್ಕಾಗಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಬಿಟ್ಟು ತೆರಳಿದ್ದ ಏರ್ ಏಷ್ಯಾ ವಿಮಾನ ಸಂಸ್ಥೆಯ ಹಾಗೂ ಅದರ ಇಬ್ಬರು ಸಿಬ್ಬಂದಿಗಳ ವಿರುದ್ಧ ದಾಖಲಿಸಿದ್ದ ದೂರನ್ನು ರಾಜ್ಯಪಾಲರ ಕಚೇರಿ ಹಿಂಪಡೆದುಕೊಂಡಿದೆ.

ರಾಜ್ಯಪಾಲರನ್ನು ಬಿಟ್ಟು ತೆರಳಿದ್ದ ಹಿನ್ನೆಲೆಯಲ್ಲಿ ಸಂಸ್ಥೆ ವಿರುದ್ಧ ರಾಜಭವನ ದೂರು ದಾಖಲಿಸಿದ್ದು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಏರ್‍ಏಷ್ಯಾ ಸಂಸ್ಥೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಹಾಗೂ ಇತರೆ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಸೇವೆಯಿಂದ ಅಮಾನತುಗೊಳಿಸಿತ್ತು.

ಈ ನಡುವಲ್ಲೇ ವಿಮಾನಯಾನ ಅಧಿಕಾರಿಯೊಬ್ಬ ಪತ್ರವೊಂದನ್ನು ಬರೆದು, ಕ್ಷಮೆಯಾಚಿಸಿದ್ದರು. ಈ ಎಲ್ಲಾ ಬೆಳವಣಿಗೆ ನಡುವಲ್ಲೇ ದೂರು ಹಿಂಪಡೆದುಕೊಳ್ಳಲು ರಾಜ್ಯಪಾಲರು ನಿರ್ಧರಿಸಿದ್ದಾರೆ.

ಯಾವುದೇ ವ್ಯಕ್ತಿಯ ಉದ್ಯೋಗ ನಷ್ಟವಾಗುವುದನ್ನು ನಾವು ಬಯಸುವುದಿಲ್ಲ. ಈ ವಿಚಾರವನ್ನು ಮುಂದುವರೆಸಲು ರಾಜ್ಯಪಾಲರು ಬಯಸುವುದಿಲ್ಲ. ಹೀಗಾಗಿ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆಂದು ರಾಜ್ಯಪಾಲರ ಕಚೇರಿ ಮೌಖಿಕವಾಗಿ ತಿಳಿಸಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ನಡುವೆ ಪ್ರಕರಣ ಸಂಬಂಧ ಏರ್ ಏಷ್ಯಾ ಇಂಡಿಯಾ ಆಂತರಿಕ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ರಾಜ್ಯಪಾಲರನ್ನು ಬಿಟ್ಟು ಹಾರಿದ್ದ ವಿಮಾನಯಾನ ಸಂಸ್ಥೆಯ ವಿರುದ್ಧ ರಾಜ್ಯಪಾಲರ ಕಚೇರಿ ಶಿಷ್ಟಾಚಾರ ಉಲ್ಲಂಘನೆ ದೂರು ದಾಖಲಿಸಿತ್ತು. ರಾಜ್ಯಪಾಲರ ಶಿಷ್ಟಾಚಾರದ ಅಧಿಕಾರಿ ಎಂ.ವೇಣುಗೋಪಾಲ್ ಅವರು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com