ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆಯು ಕೆಲವೇ ಬಾರಿ ಸದಸ್ಯರ ಅಮಾನತಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಸಣ್ಣ ವಿಚಾರವೊಂದಕ್ಕೆ 10 ಶಾಸಕರನ್ನು ವಿಧಾನಸಭೆಯಿಂದ ಅಮಾನತುಗೊಳಿಸಿರುವುದು 'ಕ್ಷಮಿಸಲಾಗದ' ವಿಚಾರ ಎಂದು ವಿಧಾನಸಭೆ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಿಟಿಜನ್ಸ್ ಫಾರ್ ಡೆಮಾಕ್ರಸಿ ಗುರುವಾರ ಇಲ್ಲಿ ಆಯೋಜಿಸಿದ್ದ 'ಶಾಸಕರ ಅಮಾನತು ಒಂದು ಮುಕ್ತ ಚರ್ಚೆ'ಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಗೇರಿ, ದೇಶದಲ್ಲಿ 50 ರಿಂದ 60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ, ಸದನದಲ್ಲಿ ಪೇಪರ್ ಹರಿದು ಹಾಕಿದ ಚಿಕ್ಕ ಘಟನೆಗೆ ಶಾಸಕರಿಗೆ ಅಮಾನತಿನ ಶಿಕ್ಷೆ ಕೊಡುವುದು ಸರಿಯಲ್ಲ ಎಂದು ಹೇಳಿದರು.
‘ಸಣ್ಣ ಘಟನೆಯನ್ನೇ ದೊಡ್ಡ ವಿಷಯವನ್ನಾಗಿಸಿ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ಯುಟಿ ಖಾದರ್ ಹಾಗೂ ರಾಜ್ಯ ಸರ್ಕಾರದ ಕ್ರಮ ಅಕ್ಷಮ್ಯ. ಮುಖ್ಯಮಂತ್ರಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಇದರಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ರಾಜಕೀಯಕ್ಕಾಗಿ ಸದನವನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಇದು ಅತ್ಯುತ್ತಮ ಉದಾಹರಣೆಯಾಗಿದೆ' ಎಂದು ಆರೋಪಿಸಿದರು.
ಸದನದ ಸುಗಮ ಕಲಾಪಕ್ಕೆ ಆಡಳಿತ ಪಕ್ಷದ ಪಾತ್ರವೂ ಮುಖ್ಯವಾಗಿದ್ದು, ಕಾಗದ ಹರಿದಿದ್ದಕ್ಕೆ ಶಾಸಕರನ್ನು ಅಮಾನತುಗೊಳಿಸುವುದು ಸೂಕ್ತವಲ್ಲ. ಇಂತಹ ಬೆಳವಣಿಗೆಗಳು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಊಟದ ವಿರಾಮ ನೀಡಿದ್ದರೆ, ಈ ಘಟನೆ ನಡೆಯುತ್ತಲೇ ಇರಲಿಲ್ಲ. ಈ ಹಿಂದೆ, ಯೋಗೀಶ್ ಭಟ್ ಉಪಸಭಾಪತಿಯಾಗಿದ್ದಾಗ ಸದಸ್ಯರು ಪೇಪರ್ ವೇಯ್ಟ್ ಎಸೆದಿದ್ದರು. ಆಗ ಅವರನ್ನು ಅಮಾನತು ಮಾಡಿರಲಿಲ್ಲ ಎಂದರು.
ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಪೇಪರ್ ಹರಿದ ಆರೋಪದ ಮೇಲೆ ಶಾಸಕರನ್ನು ಅಮಾನತು ಮಾಡಿರುವುದು ಜೇಬುಗಳ್ಳನಿಗೆ ಮರಣದಂಡನೆ ನೀಡಿದಂತೆ. ಸಂಸದೀಯ ವ್ಯವಹಾರಗಳ ಸಚಿವರ ನಡೆ ಅಸಮಾಧಾನ ತಂದಿದೆ ಎಂದರು.
ಮಾಜಿ ಶಾಸಕ ಎಟಿ ರಾಮಸ್ವಾಮಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ರಚನೆಯಾಗಿರುವ ವಿರೋಧ ಪಕ್ಷಗಳ ಒಕ್ಕೂಟವಾದ INDIA ಅನ್ನು 'ಈಸ್ಟ್ ಇಂಡಿಯಾ ಕಂಪನಿ' ಎಂದು ಕರೆದರು.
Advertisement