ಖಾಸಗಿ ಕಂಪನಿ ನೌಕರರ ವಾಹನಕ್ಕೂ ಬಿಎಚ್‌ ಸರಣಿಯಡಿ ನೋಂದಣಿ: ಆದೇಶ ಎತ್ತಿಹಿಡಿದ ಹೈಕೋರ್ಟ್‌

ನಗರದ ಎರಡು ಖಾಸಗಿ ಕಂಪೆನಿಗಳ ನೌಕರರಿಬ್ಬರ ಹೊಸ ಸಾರಿಗೇತರ ವಾಹನಗಳನ್ನು 'ಭಾರತ್‌' (ಬಿಎಚ್‌) ಸರಣಿಯಡಿ ನೋಂದಣಿ ಮಾಡುವಂತೆ ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಎರಡು ಖಾಸಗಿ ಕಂಪೆನಿಗಳ ನೌಕರರಿಬ್ಬರ ಹೊಸ ಸಾರಿಗೇತರ ವಾಹನಗಳನ್ನು 'ಭಾರತ್‌' (ಬಿಎಚ್‌) ಸರಣಿಯಡಿ ನೋಂದಣಿ ಮಾಡುವಂತೆ ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸಾರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರ್ಲೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್‌. ಕಮಲ್‌ ಅವರಿದ್ದ ವಿಭಾಗೀಯ ಪೀಠ, ಆದೇಶಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಹೇಳಿದೆ.

ಖಾಸಗಿ ವಲಯದ ನೌಕರರ ಸಾರಿಗೇತರ ವಾಹನಗಳಿಗೆ ಬಿಎಚ್ ಸರಣಿ ನೋಂದಣಿ ಮಾಡದಂತೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು 2021ರ ಡಿ.20ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಎರಡು ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳಾದ ಟಿ.ಶಾಲಿನಿ ಹಾಗೂ ಕೆ.ಪಿ. ರಂಜಿತ್ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರ್ಕಾರ 2021ರ ಆ.26ರಂದು ಹೊರಡಿಸಿರುವ ಅಧಿಸೂಚನೆಯಂತೆ ಅಖಿಲ ಭಾರತ ಸೇವೆಗಳು, ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಅಧಿಕಾರಿಗಳು ಸೇರಿ ಅಂತಾರಾಜ್ಯ ವರ್ಗಾವಣೆ ಹೊಂದಿರುವವರ ವಾಹನಗಳಿಗೆ ಬಿಎಚ್ ಸರಣಿ ನೋಂದಣಿಗೆ ಅವಕಾಶವಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕಚೇರಿ - ವ್ಯವಹಾರ ಹೊಂದಿರುವ ಖಾಸಗಿ ವಲಯದ ನೌಕರರಿಗೂ ಬಿಎಚ್ ಸರಣಿಯಡಿ ವಾಹನಗಳ ನೋಂದಣಿ ಮಾಡಬೇಕು ಎಂಬುದಾಗಿದೆ. ಆದರೆ, ಬಿಎಚ್ ಸರಣಿಯಡಿ ನೋಂದಣಿಗೆ ಸಾರಿಗೆ ಇಲಾಖೆ ನಿರಾಕರಿಸಿದೆ. ಈ ಸಂಬಂಧ ಸಾರಿಗೆ ಆಯುಕ್ತರು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಹಾಗೂ ತಮ್ಮ ವಾಹನಗಳಿಗೆ ಬಿಎಚ್ ಸರಣಿ ನೋಂದಣಿ ಮಾಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರ ಕೋರಿದ್ದರು.

ಅರ್ಜಿಯನ್ನು ಆಕ್ಷೇಪಿಸಿದ್ದ ಸರ್ಕಾರ, ಖಾಸಗಿ ಕಂಪನಿಗಳ ಬಹುತೇಕ ನೌಕರರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ. ಜತೆಗೆ, ಅವರು ಆಗಾಗ ಸಂಸ್ಥೆಗಳನ್ನು ಬದಲಿಸುತ್ತಿರುತ್ತಾರೆ. ಇದರಿಂದ, ತೆರಿಗೆ ಅವಧಿ ಮುಗಿದ ನಂತರ ಅವರಿಂದ ತೆರಿಗೆ ಸಂಗ್ರಹಿಸಲು ಮೊದಲಿದ್ದ ಸಂಸ್ಥೆಯಲ್ಲೇ ಇರುತ್ತಾರೆ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಹೀಗಾಗಿ ಅರ್ಜಿದಾರರ ಮನವಿ ಪುರಸ್ಕರಿಸಬಾರದು ಎಂದು ನ್ಯಾಯಾಲಯವನ್ನು ಕೋರಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಖಾಸಗಿ ಕಂಪನಿ ನೌಕರರ ಅರ್ಜಿಯನ್ನು 2022ರ ಡಿ.16ರಂದು ಮಾನ್ಯ ಮಾಡಿದ್ದ ಏಕಸದಸ್ಯ ಪೀಠ, 2021ರ ಡಿ.20ರಂದು ಸಾರಿಗೆ ಆಯುಕ್ತರು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿತ್ತು.

ಅಲ್ಲದೆ, ಕೇಂದ್ರ ಸರ್ಕಾರಿ ನೌಕರರು ಸೇರಿ ಕೆಲ ವರ್ಗದ ಸಿಬ್ಬಂದಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾರಿಗೇತರ ವಾಹನಗಳ ಸುಗಮ ಸಂಚಾರಕ್ಕೆ ಬಿಎಚ್ ಸರಣಿಯಡಿ ನೋಂದಣಿಗೆ ಅವಕಾಶ ಕಲ್ಪಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಆ.26ರಂದು ತಿದ್ದುಪಡಿ ನಿಯಮಗಳ ಅಧಿಸೂಚನೆ ಹೊರಡಿಸಿದೆ. ಇದು ಬೇರೆ ರಾಜ್ಯಗಳಿಗೆ ವರ್ಗಾವಣೆಯಾಗುವ ಖಾಸಗಿ ವಲಯದ ಕಂಪನಿಗಳ ಸಿಬ್ಬಂದಿಗೂ ಅನ್ವಯಿಸಲಿದೆ. ಆದ್ದರಿಂದ, ಸಾರಿಗೆ ಆಯುಕ್ತರು ಅರ್ಜಿದಾರರ ಸಾರಿಗೇತರ ವಾಹನಗಳನ್ನು ಕೇಂದ್ರದ ಅಧಿಸೂಚನೆಯಂತೆ ಬಿಎಚ್ ಸರಣಿಯಡಿ ನೋಂದಣಿ ಮಾಡಬೇಕು. ಜತೆಗೆ, ಕೇಂದ್ರ ಮೋಟಾರು ವಾಹನಗಳ (20ನೇ ತಿದ್ದುಪಡಿ) ನಿಯಮ-2021 ಅನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com