ಬೆಂಗಳೂರು: ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ನೇಮಕಾತಿಯ ಹಗರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮರು ಪರೀಕ್ಷೆ ನಡೆಸಲು ಉದ್ದೇಶಿಸಿರುವ ತೀರ್ಮಾನದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲಾಗದು ಎಂದು ಹೈಕೋರ್ಟ್ ಶುಕ್ರವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ ನೂರಾರು ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್‌ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಆರಂಭದಲ್ಲಿ ಪೀಠವು “ಪಿಎಸ್‌ಐ ನೇಮಕಾತಿಯಂಥ ಪ್ರಮುಖ ಆಯ್ಕೆ ಪ್ರಕ್ರಿಯೆ ನಿಲ್ಲಬಾರದು. ಸರ್ಕಾರವು ಪ್ರಕ್ರಿಯೆ ಮುಂದುವರಿಸಲಿ. ಸರ್ಕಾರ ಮರು ಪರೀಕ್ಷೆ ನಡೆಸುವ ನಿರ್ಧಾರ ಮಾಡುವುದರಿಂದ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಎಲ್ಲರೂ ಪರೀಕ್ಷೆ ಬರೆಯಲಿ ಬಿಡಿ” ಎಂದು ಮೌಖಿಕವಾಗಿ ಹೇಳಿತು.
ಆಗ ಅರ್ಜಿದಾರರ ಪರ ವಕೀಲರು “ವಿಚಾರಣಾರ್ಹತೆಯ ಮೇಲೆ ವಾದ ಮಂಡಿಸುತ್ತೇವೆ. ಹೀಗಾಗಿ, ವಿಚಾರಣೆ ನಡೆಸಬೇಕು” ಎಂದು ಕೋರಿದರು. ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರೂ ಇದಕ್ಕೆ ಧ್ವನಿಗೂಡಿಸಿದರು. ಇದನ್ನು ಆಲಿಸಿದ ಪೀಠವು ಅರ್ಜಿದಾರರ ಪರ ಬಹುತೇಕ ವಕೀಲರು ಹಾಜರಿಲ್ಲದಿದ್ದರಿಂದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
Advertisement