ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ: ಶಾಲೆ ಬಂದ್ ಮಾಡುವಂತೆ ಕೆಎಸ್‌ಪಿಸಿಆರ್‌ ಶಿಫಾರಸು

ನಗರದ ಖಾಸಗಿ ಶಾಲೆಯೊಂದರಲ್ಲಿ 10 ವರ್ಷದ ಬಾಲಕಿಯ ಮೇಲೆ ಶಾಲೆಯ ಪ್ರಾಂಶುಪಾಲನೇ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಪಿಸಿಆರ್) ಶಿಫಾರಸು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರಲ್ಲಿ 10 ವರ್ಷದ ಬಾಲಕಿಯ ಮೇಲೆ ಶಾಲೆಯ ಪ್ರಾಂಶುಪಾಲನೇ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಪಿಸಿಆರ್) ಶಿಫಾರಸು ಮಾಡಿದೆ.

ಶಾಲೆಯ 2ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪದಡಿ ಪ್ರಾಂಶುಪಾಲ ಲ್ಯಾಂಬರ್ಟ್ ಪುಷ್ಪರಾಜ್‌ (65) ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಕೃತ್ಯದ ಬಗ್ಗೆ ಮಾಹಿತಿ ಪಡೆದ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ, ಸದಸ್ಯ ಶಶಿಧರ ಕೋಸಂಬಿ ನೇತೃತ್ವದ ತಂಡ, ಸಂತ್ರಸ್ತ ಬಾಲಕಿ ಮನೆ ಹಾಗೂ ಶಾಲೆಗೆ ಶನಿವಾರ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತು.

ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕಿನ ದಕ್ಷಿಣ ವಲಯ–4ರ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್. ರಾಮಮೂರ್ತಿ, ಮಕ್ಕಳ ಕಲ್ಯಾಣ ಅಧಿಕಾರಿ ಶಿವಕುಮಾರ್ ಜೊತೆಗಿದ್ದರು.

ವರ್ತೂರು ಠಾಣೆ ಪಿಎಸ್‌ಐ ಶ್ರೀನಿವಾಸ್ ಶಿರೂರ, ಶಾಲೆಯಲ್ಲಾದ ಕೃತದ ಬಗ್ಗೆ ತಂಡಕ್ಕೆ ವಿವರಣೆ ನೀಡಿದರು. ತಂಡದ ಸದಸ್ಯರು, ಅದನ್ನು ದಾಖಲಿಸಿಕೊಂಡರು.

ಇದೇ ವೇಳೆ ಶಾಲೆ ಕಟ್ಟಡದ ಮೊದಲ ಮಹಡಿಯಲ್ಲಿರುವ ಆರೋಪಿ ಪುಷ್ಪರಾಜ್ ಮನೆಗೂ ಭೇಟಿ ನೀಡಿದ ತಂಡ,  ಹೆಚ್ಚಿನ ಮಾಹಿತಿ ಕಲೆಹಾಕಿತು.

ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆ. ನಾಗಣ್ಣಗೌಡ ಅವರು, ‘ಸಂತ್ರಸ್ತ ವಿದ್ಯಾರ್ಥಿನಿ ಹಾಗೂ ಪೋಷಕರಿಗೆ ಸಾಂತ್ವನ ಹೇಳಲಾಗಿದೆ. ಕೃತ್ಯ ನಡೆದಿರುವ ಶಾಲೆ ಬಂದ್ ಮಾಡಿಸುವಂತೆ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.

‘ಶಾಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ 140 ಮಕ್ಕಳು ಓದುತ್ತಿದ್ದಾರೆ. ಏಕಾಏಕಿ ಶಾಲೆ ಮುಚ್ಚಿದರೆ ಅವರಿಗೆ ಸಮಸ್ಯೆಯಾಗಲಿದೆ. ಹೀಗಾಗಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ (ಆ. 7) ಪೋಷಕರ ಸಭೆ ನಡೆಸಲಾಗುವುದು. ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಎಲ್ಲ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಶಾಲೆ ಕಟ್ಟಡದ ಮೇಲೆಯೇ ಪ್ರಾಂಶುಪಾಲ ಮನೆ ಇದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯಾ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಜೊತೆಗೆ ತ್ವರಿತವಾಗಿ ಶಾಲೆಯನ್ನು ಮುಚ್ಚಲು ಕ್ರಮ ಕೈಗೊಳ್ಳಿ ಎಂದು ಶಿಫಾರಸು ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com