ಕೃಷಿ ಸಚಿವ ಚಲುವರಾಯಸ್ವಾಮಿ
ಕೃಷಿ ಸಚಿವ ಚಲುವರಾಯಸ್ವಾಮಿ

ಕೃಷಿ ಸಚಿವ ಚಲುವರಾಯಸ್ವಾಮಿಯಿಂದ ಹಣಕ್ಕೆ ಬೇಡಿಕೆ ಆರೋಪ: ತನಿಖೆಗೆ ರಾಜ್ಯಪಾಲರ ಸೂಚನೆ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಮಂಡ್ಯದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಬೆಂಗಳೂರು: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಮಂಡ್ಯದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಮಂಡ್ಯದ 7 ಸಹಾಯಕ ಕೃಷಿ ನಿರ್ದೇಶಕರು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ನೀಡಿರುವ ಪತ್ರ ವೈರಲ್ ಆಗಿದೆ. ಆದರೆ, ಸಚಿವ ಚೆಲುವರಾಯಸ್ವಾಮಿಯವರು ಅದು ನಕಲಿ ಪತ್ರ ಎಂದು ಹೇಳಿದ್ದಾರೆ.

ಆದರೆ, ಈ ನಡುವೆ ತಮಗೆ ಬಂದಿರುವ ಪತ್ರದಲ್ಲಿನ ಆರೋಪವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ.

ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ  ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಿದ್ದರಾಮಯ್ಯನವರ ಸರ್ಕಾರದಲ್ಲಿ ‘ಟ್ರಾನ್ಸ್‌ಪರೆನ್ಸಿ’ ಎಂದರೆ ವರ್ಗಾವಣೆಗೆ ‘ಹರಾಜು’. ಹೆಚ್ಚಿನ ಹರಾಜು, ಅತ್ಯಧಿಕ ಪೋಸ್ಟ್. ಸಿದ್ದರಾಮಯ್ಯನವರ ಸರ್ಕಾರದಲ್ಲಿ ವರ್ಗಾವಣೆಗಳು ಬಹಳ ಸುಲಭವಾಗಿದೆ ಕ್ಯಾಷ್ ಅ್ಯಂಡ್ ಕ್ಯಾರಿ ಆಗಿದೆ. ವರ್ಗಾವಣೆಯಲ್ಲಿನ ಭ್ರಷ್ಟಾಚಾರದ ಮಟ್ಟಗಳು ಗರಿಷ್ಠ ಮಿತಿಯನ್ನು ಮೀರಿವೆ. ಸಚಿವ ಚಲುವರಾಯಸ್ವಾಮಿ ವಿರುದ್ಧ 8 ಕೃಷಿ ಸಹಾಯಕ ನಿರ್ದೇಶಕರು ರಾಜ್ಯಪಾಲರಿಗೆ ಪತ್ರ ಬರೆದು ಪೋಸ್ಟಿಂಗ್ ಕೊಡಿಸಲು 6-8 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿದ್ದಾರೆ. ನಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿ ಇಲ್ಲ ಎಂದೂ ಹೇಳಿದ್ದಾರೆಂದು ಹೇಳಿದ್ದಾರೆ.

ಮತ್ತೊಂದು ಟ್ಟೀಟ್ ನಲ್ಲಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ವರ್ಗಾವಣೆಗಳು ಬಹಳ ಸುಲಭವಾಗಿದೆ. ಕ್ಯಾಷ್ ಅ್ಯಂಡ್ ಕ್ಯಾರಿ ಎಂಬಂತಾಗಿದೆ. ಈಗ ಪೊಲೀಸ್ ಇಲಾಖೆಯಲ್ಲಂತೂ ವರ್ಗಾವಣೆಯ ಸುಗ್ಗಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಕೆ.ಎಸ್.ಆರ್.ಪಿ ಗೆಸ್ಟ್ ಹೌಸ್ ನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯಷ್ಟೇ ಪವರ್ಫುಲ್ ವ್ಯಕ್ತಿಯೊಬ್ಬರಿದ್ದಾರಂತೆ, ಬೆಂಗಳೂರಿನ ಕೆಲವು ಎಸಿಪಿ ವರ್ಗಾವಣೆಯಲ್ಲಿ ಅವರದ್ದೇ ಮೇಲುಗೈ. ಪೊಲೀಸ್ ಎಸ್ಟಾಬ್ಲಿಶ್​​ಮೆಂಟ್ ​ಬೋರ್ಡ್​​ ಈಗ ಪಿಎಸ್​ವೈ ಬೋರ್ಡ್ ಆಗಿದೆ ಎಂದು ಟೀಕಿಸಿದ್ದಾರೆ.

ವರ್ಗಾವಣೆಗಳಲ್ಲಿ 2 ವಿಧ. ಮಾನ್ಯ ಮುಖ್ಯಮಂತ್ರಿಗಳ ಕಚೇರಿಯಿಂದ ಬರುವ ಟಿಪ್ಪಣಿಯಲ್ಲಿ ವರ್ಗಾಯಿಸಲು ಕೋರಿದೆ ಎಂದು ಬರೆದಿದ್ದರೆ ಅದು ಬೋರ್ಡ್ನಲ್ಲಿ ಪಾಸ್ ಆಗುವುದಿಲ್ಲ, ವರ್ಗಾಯಿಸಲು ಸೂಚಿಸಲಾಗಿದೆ ಎಂದು ಬರೆದಿದ್ದರೆ ಅದು ಮಾಜಿ ಶಾಸಕರೊಬ್ಬರು ಮುಖ್ಯಮಂತ್ರಿಗಳ ಕಾರ್ಯಾಲಯದಲ್ಲಿ ಅನುಮೋದನೆ ನೀಡಿದ್ದಾರೆ ಎಂದು ಅರ್ಥ ಎಂದು ತಿಳಿಸಿದ್ದಾರೆ.

ಈ ನಡುವೆ ಆಮ್ ಆದ್ಮಿ ಪಕ್ಷ ಕೂಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಚಿವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಿಕೊಂಡಿದೆ. ಸಚಿವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ,

ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ವಿ.ಎಸ್ ಅವರು ಮಾತನಾಡಿ, ಹಣ ವಸೂಲಿ ಮಾಡುವಂತೆ ನಮ್ಮ ಮೇಲೆ ಯಾವುದೇ ರೀತಿಯ ಒತ್ತಡಗಳಿಲ್ಲ. ಇದು ನಕಲಿ ಪತ್ರ ಇರಬೇಕು. ಇಲಾಖೆಗೆ ಕಳಂಕ ತರುವ ಯತ್ನ ಇದಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮಂಡ್ಯ ಎಸ್ಪಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ಪತ್ರ ಬರೆದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಶಾಸಕರು ಮಂಡ್ಯ ಎಸ್‌ಪಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಸರಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಹತಾಶರಾಗಿರುವವರು ಸಚಿವರ ವಿರುದ್ಧ ನಡೆಸುತ್ತಿರುವ ಷಡ್ಯಂತ್ರ ಇದಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪತ್ರ ಬರೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com