ಒತ್ತುವರಿಯಾದ ಸರ್ಕಾರಿ ಭೂಮಿಗಳ ಪಟ್ಟಿ ಮಾಡಿ: ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಒತ್ತುವರಿ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಿ ಹಾಗೂ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಸೂಚನೆ ನೀಡಿದ್ದಾರೆ.
ಕಂದಾಯ ಸಚಿವ ಕೃಷ್ಣಬೈರೇಗೌಡ
ಕಂದಾಯ ಸಚಿವ ಕೃಷ್ಣಬೈರೇಗೌಡ

ಬೆಂಗಳೂರು: ಸರ್ಕಾರಿ ಒತ್ತುವರಿ ಜಮೀನುಗಳ ಪ್ರಾಥಮಿಕ ಒತ್ತುವರಿ ಪಟ್ಟಿಯನ್ನು ಶೀಘ್ರದಲ್ಲಿ ತಯಾರಿಸಿ ಹಾಗೂ ಪ್ರತೀ ವಾರಾಂತ್ಯದಲ್ಲಿ ಒತ್ತುವರಿ ತೆರವಿಗೆ ಮುಂದಾಗಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೋಮವಾರ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ/ಗ್ರಾಮೀಣ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಆಯುಕ್ತರೊಂದಿಗೆ ಸಭೆ ನಡೆಸಿದ ಅವರು, ಅತಿಕ್ರಮಣ ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಸರಕಾರಿ ಭೂಮಿ ಅತಿಕ್ರಮಣ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಿ ಭೂಮಿಯನ್ನು ಭೂ ಮಾಫಿಯಾ ಕಬಳಿಕೆ ಮಾಡುತ್ತಿದೆ. ಇದರಿಂದ ಸರಕಾರಕ್ಕೆ ಸಾಕಷ್ಟು ಆದಾಯ ನಷ್ಟವಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಆದಷ್ಟು ಬೇಗ ಒತ್ತುವರಿ ಭೂಮಿಗಳ ಪ್ರಾಥಮಿಕ ಪಟ್ಟಿ ಸಿದ್ಧಪಡಿಸಿ, ಪ್ರತಿ ಶನಿವಾರ ಮತ್ತು ಭಾನುವಾರ ಒತ್ತುವರಿ ತೆರವಿಗೆ ಮುಂದಾಗಬೇಕು ಎಂದು ಸೂಚಿಸಿದರು.

ಕಳೆದ ಅಧಿವೇಶನದಲ್ಲಿ ಸರಕಾರಿ ಭೂಮಿ ಒತ್ತುವರಿ ತೆರವು ಮಾಡುವಂತೆ ಸರಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾರಕ್ಕೊಮ್ಮೆ ಸಭೆ ನಡೆಸಿ, ಒತ್ತುವರಿ ತೆರವು ಮಾಡುವುದರ ಜತೆಗೆ ಜಮೀನುಗಳಿಗೆ ಬೇಲಿ ಹಾಕಲು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಭೂಮಾಪಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ತಹಶೀಲ್ದಾರ್ ನೇತೃತ್ವದಲ್ಲಿ ಸರ್ಕಾರಿ ದಾಖಲೆಗಳಲ್ಲಿರುವ ಪ್ರತಿಯೊಂದು ನಿವೇಶನವನ್ನು ಮರು ಸರ್ವೆ ಮಾಡಿ, ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆಯೂ ಸೂಚಿಸಿದರು.

ಭೂಸುಧಾರಣೆ-ಬಗರ್ ಹುಕುಂ ಸಮಿತಿಗಳಡಿ ಭೂಮಿ ಮಂಜೂರಾದ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಮಾಫಿಯಾಗಳು ಸರ್ಕಾರಿ ದಾಖಲೆಗಳನ್ನು ಕದ್ದೊಯ್ಯುವ ಅಥವಾ ತಿದ್ದುವ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮರುಸರ್ವೇ ಅಗತ್ಯವಿದೆ. ಈ ಭೂಮಿಗಳಷ್ಟೇ ಅಲ್ಲದೆ, ಗೋಮಾಳ, ಸ್ಮಶಾನ ಭೂಮಿ, ಕೆರೆ, ಕೊಳಗಳು ಕೂಡ ಒತ್ತುವರಿಯಾಗಿದೆ. ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com