ಹಿಂಡಲಗಾ ಜೈಲಿನಲ್ಲಿ ಕೈದಿಗಳ ಮಾರಾಮಾರಿ‌ ಪ್ರಕರಣ: ಇಬ್ಬರು ಸಿಬ್ಬಂದಿಗಳ ಅಮಾನತು

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಹಿರಿಯ ವೀಕ್ಷಕ ಬಿ.ಎಲ್‌.ಮೆಳವಂಕಿ, ವೀಕ್ಷಕ ವಿ.ಟಿ.ವಾಘಮೋರೆ ಅಮಾನತುಗೊಂಡ ಜೈಲಿನ ಸಿಬ್ಬಂದಿಗಳಾಗಿದ್ದಾರೆ. ಉತ್ತರ ವಲಯದ ಕಾರಾಗೃಹಗಳ ಉಪಮಹಾನಿರೀಕ್ಷಕ ಟಿ.ಪಿ.ಶೇಷ ಆದೇಶ ಹೊರಡಿಸಿದ್ದಾರೆ.

ಇಬ್ಬರು ಕೈದಿಗಳ ಮಧ್ಯೆ ಗಲಾಟೆ ನಡೆಯದಂತೆ ನೋಡಿಕೊಳ್ಳುವಲ್ಲಿ ಸಿಬ್ಬಂದಿ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಸಾಯಿಕುಮಾರ್‌ ಮತ್ತು ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಂಕರಪ್ಪ ಕೊರವರ ಮಧ್ಯೆ ಜುಲೈ 29ರಂದು ಗಲಾಟೆ ನಡೆದಿತ್ತು.

ಮಂಡ್ಯ ಮೂಲದ ಸಾಯಿಕುಮಾರ್‌ಗೆ ಶಂಕರಪ್ಪ ಕೊರವರ ಬಲವಾಗಿ ಹಲ್ಲೆ ಮಾಡಿದ್ದ. ಸ್ಕ್ರೂಡ್ರೈವರ್‌ನಿಂದ ಎದೆಗೆ ಐದು ಬಾರಿ ಚುಚ್ಚಿದ್ದ. ಸಾಯಿಕುಮಾರ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಮರು ಹೊಡೆತದಿಂದ ಶಂಕರಪ್ಪ ಕೂಡಾ ಗಾಯಗೊಂಡಿದ್ದ. ಇಬ್ಬರೂ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆ ಮುಂದೆ ಪೊಲೀಸ್​ ಬಂದೋಬಸ್ತ್ ವಹಿಸಲಾಗಿದೆ. ಹಿಂಡಲಗಾ ಜೈಲಿನಲ್ಲಿ ನಡೆದಿದ್ದ ಈ ಗಲಾಟೆ ತೀವ್ರ ಟೀಕೆಗೆ ಗ್ರಾಸವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.

ಕೆಲವು ಜೈಲು ಅಧಿಕಾರಿಗಳು ಹಲವಾರು ಕೈದಿಗಳಿಗೆ ಮೊಬೈಲ್ ಪೋನ್ ಬಳಸಲು ಹಾಗೂ ಹಲವು ಸೌಲಭ್ಯಗಳನ್ನು ಕಾನೂನುಬಾಹಿರವಾಗಿ ನೀಡುತ್ತಿದ್ದು, ಜೈಲಿನ ಹೊರಗಿನ ಜನರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಕಾರಾಗೃಹದ ಉನ್ನತಾಧಿಕಾರಿಯೊಬ್ಬರು ಮಾತನಾಡಿ, ಜೈಲಿನ ಒಳಗಿನಿಂದ ವರದಿಯಾಗುತ್ತಿರುವ ಎಲ್ಲಾ ಅಕ್ರಮ ಚಟುವಟಿಕೆಗಳಿಗೆ ಪ್ರಮುಖವಾಗಿ ಜವಾಬ್ದಾರರಾಗಿರುವ ಜೈಲಿನ ಉನ್ನತ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳದ ಹೊರತು, ಇಂತಹ ಬೆಳವಣಿಗೆಗಳು ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.

ಜೈಲಿನಲ್ಲಿರುವ ಪಾತಕಿಯೊಬ್ಬ ಜೈಲಿನಲ್ಲಿ ನಡೆಯುತ್ತಿರುವ ಹಲವಾರು ಅಕ್ರಮ ಚಟುವಟಿಕೆಗಳನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಅದೇ ವಿಡಿಯೋಗಳೇ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂದು ಮೂಲಗಳು ತಿಳಿಸಿವೆ.

ಕಾರಾಗೃಹದಲ್ಲಿದ್ದ ಕೈದಿಯೊಬ್ಬ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ರೂ.100 ಕೋಟಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ. ಈ ಸಂಬಂಧ ಮಹಾರಾಷ್ಟ್ರ ಎಟಿಎಸ್ ಪೊಲೀಸರ ತಂಡ ಇತ್ತೀಚೆಗಷ್ಟೇ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿ ಜಯೇಶ್ ಪೂಜಾರಿಯನ್ನು ಕಸ್ಟಡಿಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಕೈದಿಗಳ ಮಾರಾಮಾರಿ ಘಟನೆಯು ಕಾರಾಗೃಹದ ಕಾರ್ಯವೈಖರಿಯ ಕುರಿತು ಹಲವು ಪ್ರಶ್ನೆಗಳು ಹಾಗೂ ಟೀಕೆಗಳು ಆರಂಭವಾಗುವಂತೆ ಮಾಡಿವೆ.

ಸುಮಾರು 850 ಕೈದಿಗಳು ತಂಗಿರುವ ಜೈಲಿನಲ್ಲಿ ಹಲವಾರು ಸಿಬ್ಬಂದಿಗಳು ಮತ್ತು ಅಧಿಕಾರಿಗಳು, ಕೈದಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಹಣ ವಸೂಲಿ ಮಾಡುವಲ್ಲಿ ತೊಡಗಿದ್ದಾರೆಂದು ಜೈಲಿನ ಉನ್ನತ ಮೂಲಗಳು ತಿಳಿಸಿವೆ.

ಕಾರಾಗೃಬದ ಸಿಬ್ಬಂದಿಗಳ ಬೆಂಬಲವಿಲ್ಲದೆ ಕೈದಿಗಳು  ಮೊಬೈಲ್ ಫೋನ್ ಬಳಸುವುದು, ಆಹಾರ ಮತ್ತು ಮದ್ಯವನ್ನು ಪಡೆಯುವುದು, ವಿವಿಧ ಸೌಲಭ್ಯಗಳನ್ನು ಪಡೆಯುವುದು ಅಸಾಧ್ಯ ಎಂದು ಮೂಲಗಳು ತಿಳಿಸಿವೆ,

ಕಾರಾಗೃಹದಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಜೈಲಿನ ಉನ್ನತಾಧಿಕಾರಿಗಳಿಗೆ ತಿಳಿದೇ ಇದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com