ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಆಸ್ತಿ ಘೋಷಣೆ ಮಾಡದಿರುವುದೂ ಭ್ರಷ್ಟಾಚಾರಕ್ಕೆ ಸಮ: ಹೈಕೋರ್ಟ್‌

ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ, ಕುಟುಂಬ ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು ಘೋಷಿಸದಿದ್ದರೆ ಅಥವಾ ಮರೆ ಮಾಚಿದರೆ ಅದೂ ಕೂಡ ಭ್ರಷ್ಟಾಚಾರ ಎನಿಸಲಿದ್ದು, ಇದು ಅನರ್ಹತೆಗೂ ಕಾರಣವಾಗಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ, ಕುಟುಂಬ ಮತ್ತು ಅವಲಂಬಿತರ ಆಸ್ತಿ ವಿವರಗಳನ್ನು ಘೋಷಿಸದಿದ್ದರೆ ಅಥವಾ ಮರೆ ಮಾಚಿದರೆ ಅದೂ ಕೂಡ ಭ್ರಷ್ಟಾಚಾರ ಎನಿಸಲಿದ್ದು, ಇದು ಅನರ್ಹತೆಗೂ ಕಾರಣವಾಗಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಗ್ರಾಮ ಪಂಚಾಯ್ತಿ ಸದಸ್ಯರು ಅನರ್ಹತೆಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಕಲಬುರಗಿ ಪೀಠದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ನಾಯ್ಕಲ್‌ ಗ್ರಾಮ ಪಂಚಾಯಿತಿ ಸದಸ್ಯೆ ಅಬೀದಾ ಬೇಗಂ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

“ಅರ್ಜಿದಾರರು ಆಸ್ತಿ ವಿವರ ಸಲ್ಲಿಸದೇ ಇರುವುದು ಅವರ ಚುನಾವಣೆಯ ಮೇಲೆ ಪೂರಕ ಪರಿಣಾಮ ಬೀರಿದೆಯೇ ಎಂಬುದನ್ನು ಹೇಳಲಾಗದು. ಆದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993 ಅನ್ವಯ ಅಭ್ಯರ್ಥಿ ಆಸ್ತಿ ವಿವರ ಸಲ್ಲಿಸದೇ ಇರುವುದು ಸೆಕ್ಷನ್ 9(1)(ಬಿ) ಪ್ರಕಾರ ಅನರ್ಹತೆಗೆ ದಾರಿಯಾಗಲಿದೆ” ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಅಬೀದಾ ಬೇಗಂ ಸದಸ್ಯತ್ವ ರದ್ದುಗೊಳಿಸಿ ಅಧೀನ ನ್ಯಾಯಾಲಯ ಮಾಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಈ ಪ್ರಕರಣದಲ್ಲಿ ಮೂಲ ಅರ್ಜಿದಾರರು ಗೆದ್ದ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿರುವುದು ಮಾತ್ರವಲ್ಲದೆ ತಮ್ಮನ್ನು ವಿಜಯಿ ಎಂದು ಘೋಷಿಸುವಂತೆ ಕೋರಿದ್ದಾರೆ. ಈ ಸಂಬಂಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲರನ್ನೂ ಪ್ರತಿವಾದಿಗಳನ್ನಾಗಿ ಮಾಡಬೇಕಿತ್ತು. ಅವರ ಉಪಸ್ಥಿತಿಯಲ್ಲಿಯೇ ಯಾರು ವಿಜಯಿ ಎಂದು ಘೋಷಿಸಬೇಕಾಗುತ್ತದೆ. ಇಬ್ಬರೇ ಅಭ್ಯರ್ಥಿಗಳಿದ್ದಾಗ ಒಬ್ಬ ಅಭ್ಯರ್ಥಿ ಅನರ್ಹ ಎಂದು ಘೋಷಿಸಿದರೆ ಸಹಜವಾಗಿಯೇ ಮತ್ತೊಬ್ಬರು ಅರ್ಹರು ಅಥವಾ ವಿಜಯಿಯಾಗುತ್ತಾರೆ. ಆದರೆ ಈ ಪ್ರಕರಣದಲ್ಲಿ ಇತರೆ ಸ್ಪರ್ಧಿಗಳಿದ್ದು, ಯಾರು ವಿಜಯಿ ಎಂದು ನಿರ್ಣಯಿಸುವುದು ಕಷ್ಟ’’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಏನಿದು ಪ್ರಕರಣ?
ಅಬೀದಾ ಬೇಗಂ ಅವರು ಚುನಾವಣೆ ನಂತರ ತಮ್ಮ ಹಾಗೂ ಅವರ ಪತಿಯ ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಹೀಗಾಗಿ ಅವರನ್ನು ಅನರ್ಹಗೊಳಿಸಬೇಕು ಎಂದು ಮೊಹಮ್ಮದ್ ಇಸ್ಮಾಯಿಲ್ ಅಧೀನ ನ್ಯಾಯಾಲಯದಲ್ಲಿ ಚುನಾವಣಾ ತಕರಾರು ಅರ್ಜಿ ಹೂಡಿದ್ದರು. ಬೇಗಂ ಆಯ್ಕೆ ಅಸಿಂಧುಗೊಳಿಸಿ, ತನ್ನನ್ನು ಚುನಾಯಿತ ಎಂದು ಘೋಷಿಸುವಂತೆ ಕೋರಿದ್ದರು. 2022ರ ಅಕ್ಟೋಬರ್‌ 31ರಂದು ಅಬೀದಾ ಬೇಗಂ ಆಯ್ಕೆಯನ್ನು ಅಧೀನ ನ್ಯಾಯಾಲಯವು ಅಸಿಂಧುಗೊಳಿಸಿತ್ತು.

ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಬೇಗಂ ಅವರು ಇಸ್ಮಾಯಿಲ್ ತಮ್ಮ ಅರ್ಜಿಯಲ್ಲಿ ಎಲ್ಲ ಸ್ಪರ್ಧಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿರಲಿಲ್ಲ. ಇದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಸೆಕ್ಷನ್ 15(2)(ಎ)ಗೆ ವಿರುದ್ಧವಾಗಿದೆ. ಆಸ್ತಿ ವಿವರ ಸಲ್ಲಿಸದೇ ಇರುವುದು ಭ್ರಷ್ಟಾಚಾರವಾಗುವುದಿಲ್ಲ ಮತ್ತು ಅದೇ ಕಾರಣಕ್ಕೆ ಅನರ್ಹಗೊಳಿಸಲಾಗದು ಎಂದು ವಾದಿಸಿದ್ದರು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರೆ ಅಭ್ಯರ್ಥಿಗಳನ್ನು ತಮ್ಮ ಚುನಾವಣಾ ತಕರಾರು ಅರ್ಜಿಯಲ್ಲಿ ಇಸ್ಮಾಯಿಲ್‌ ಅವರು ಪ್ರತಿವಾದಿಗಳನ್ನಾಗಿ ಮಾಡಲು ವಿಫಲವಾಗಿರುವ ಕಾರಣದಿಂದ ಅಬೀದಾ ಬೇಗಂ ಅರ್ಜಿಯನ್ನು ಪುರಸ್ಕರಿಸಿದೆ.

ಅಬೀದಾ ಬೇಗಂ ಅವರನ್ನು ವಕೀಲ ವಿ ಕೆ ನಾಯಕ್‌ ಪ್ರತಿನಿಧಿಸಿದ್ದರು. ವಕೀಲರಾದ ಶ್ರವಣ್‌ ಕುಮಾರ್‌ ಮಠ ಅವರು ಮೊಹಮ್ಮದ್‌ ಇಸ್ಮಾಯಿಲ್‌ ಅವರನ್ನು, ಸಂಬಂಧಿಸಿದ ಚುನಾವಣಾ ಪ್ರಾಧಿಕಾರವನ್ನು ಸರ್ಕಾರದ ವಕೀಲೆ ಟಿ ಆರ್‌ ಮಾಯಾ ಪ್ರತಿನಿಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com