ಡಿ.ಕೆ.ಶಿವಕುಮಾರ್‌ ನನ್ನ ಬಳಿ ಕಮಿಷನ್‌ ಕೇಳಿಲ್ಲ: ಉಲ್ಟಾ ಹೊಡೆದ ಗುತ್ತಿಗೆದಾರರು; ಬಿಜೆಪಿಯ ಪ್ರತಿಭಟನೆ ಉತ್ಸಾಹಕ್ಕೆ ತಣ್ಣೀರು!

ಕಾಮಗಾರಿ ಬಿಲ್‌ ಪಾವತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ನೇರ ಆಪಾದನೆ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರ ಹೇಮಂತ್‌ ಯೂ ಟರ್ನ್ ಹೊಡೆದಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ಕಾಮಗಾರಿ ಬಿಲ್‌ ಪಾವತಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಮಿಷನ್‌ ಕೇಳುತ್ತಿದ್ದಾರೆ ಎಂದು ನೇರ ಆಪಾದನೆ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರ ಹೇಮಂತ್‌ ಯೂ ಟರ್ನ್ ಹೊಡೆದಿದ್ದಾರೆ.

ಬೆಂಗಳೂರಿನಲ್ಲಿ ಬಿಬಿಎಂಪಿ ವತಿಯಿಂದ ನಡೆದಿರುವ ಹಳೇ ಕಾಮಗಾರಿಗೆ ಬಿಲ್‌ ಪಾವತಿ ಮಾಡಲು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು 15 ಪರ್ಸೆಂಟ್‌ ಕಮಿಷನ್‌ ಕೇಳಿದ್ದಾರೆ. ಅವರು ಕೇಳಿಲ್ಲವೆಂದಾದರೆ ಅವರೇ ನಂಬಿರುವ ತುಮಕೂರಿನ ನೊಣವಿನಕೆರೆಯ ಅಜ್ಜಯ್ಯನ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು  ಬಿಬಿಎಂಪಿ ಗುತ್ತಿಗೆದಾರರು ಸವಾಲು ಹಾಕಿದ್ದರು.

ಬಿಬಿಎಂಪಿ ಗುತ್ತಿಗೆದಾರರ ಸಂಘದ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಅಧ್ಯಕ್ಷ ಮಂಜುನಾಥ್ ಮಾತನಾಡಿ, ಕಮಿಷನ್ ಆರೋಪ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರು ಈಗ ಯೂಟರ್ನ್ ಹೊಡೆದಿದ್ದಾರೆ. ನಮಗೆ ಯಾವುದೇ ರೀತಿಯ ಭಯ, ಒತ್ತಡ ಇಲ್ಲ. ನಮ್ಮ ಬಿಲ್ ಬರುವ ತನಕ ಹೋರಾಟ ಮುಂದುವರಿಸುತ್ತೇವೆ. ಕಮಿಷನ್ ಆರೋಪ ಮಾಡಿರೋದು ಮಧ್ಯವರ್ತಿಗಳು, ನಾವೂ ಯಾವುದೇ ರೀತಿ ಆರೋಪ ಮಾಡಿಲ್ಲ. ಯಾರೋ ಮಧ್ಯವರ್ತಿಗಳು ಈ ಕೆಲಸ ಮಾಡಿದ್ದಾರೆ. ಉಪ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇವೆ. ಅವರು ಏನು ಸಲಹೆ ಕೊಡುತ್ತಾರೋ ನೋಡಬೇಕು. ಡಿಸಿಎಂ ಅವರ ಭೇಟಿ ಬಳಿಕ ಡೆಡ್‌ಲೈನ್ ಕೊಡುತ್ತೇವೆ. ಡೆಡ್‌ಲೈನ್ ಮೀರಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇನ್ನು ಕಮಿಷನ್‌ ವಿಚಾರವಾಗಿ ಡಿ.ಕೆ. ಶಿವಕುಮಾರ್‌ ಅವರು ನೊಣವಿನಕೆರೆ ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದ ಗುತ್ತಿಗೆದಾರ ಹೇಮಂತ್ ಮಾತನಾಡಿ, ನಾನು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಉಪ ಮುಖ್ಯಮಂತ್ರಿ ವಿರುದ್ಧ ನಾನು ಭಾವುಕನಾಗಿ ಹೇಳಿಕೆ ಕೊಟ್ಟೆ. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಅನ್ನೋ ಹೇಳಿಕೆ ಹಿಂಪಡೆಯುತ್ತೇನೆ.

ಅವತ್ತು ಎಸ್‌ಐಟಿ ತನಿಖೆ ಅನ್ನೋ ಮಾಹಿತಿ ಬಂತು. ಅದರಿಂದ ಭಾವುಕನಾಗಿ ಆ ರೀತಿ ಹೇಳಿಕೆ ನೀಡಿದೆ. ಅದನ್ನು ಇಟ್ಟುಕೊಂಡು ವಿಪಕ್ಷ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನನ್ನ ಹೇಳಿಕೆಯನ್ನು ಇಲ್ಲಿಗೆ ಬಿಟ್ಟುಬಿಡಿ. ಎಲ್ಲರೂ ಆಣೆ ಮಾಡೋ ಅವಶ್ಯಕತೆ ಇಲ್ಲ. ಅಲ್ಲದೆ, ನನ್ನ ಹೇಳಿಕೆ ತಪ್ಪು ಎಂದು ಎಲ್ಲರೂ ಹೇಳಿದರು.

ನನ್ನ ಕಷ್ಟಗಳಿಂದ ಭಾವುಕನಾಗಿ ಹೇಳಿಕೆ ನೀಡಿದ್ದೆ. ಅಜ್ಜಯ್ಯನ ಮೇಲೆ ಆಣೆ ಮಾಡಲಿ ಅನ್ನೋದಕ್ಕೆ ಯಾವುದೇ ಒತ್ತಡ ಇರಲಿಲ್ಲ. ಈ ಬಗ್ಗೆ ನಾನು ಡಿಕೆಶಿ ಅವರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಮತ್ತೊಂದೆಡೆ, ಕಮಿಷನ್‌ ವಿಚಾರವನ್ನೇ ಅಸ್ತ್ರವಾಗಿಸಿಕೊಂಡು ದೊಡ್ಡ ಮಟ್ಟದ ಹೋರಾಟಕ್ಕೆ ಅಣಿಯಾಗಿದ್ದ ಪ್ರತಿಪಕ್ಷ ಬಿಜೆಪಿಗೆ ನಿರುತ್ಸಾಹ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com