ಎನ್ಇಪಿ ರದ್ದತಿಗೆ ನಿರ್ಧಾರ: ಅಕ್ಷಮ್ಯ ಎಂದ ಬಿಜೆಪಿ, ಕಾಂಗ್ರೆಸ್ ತಿರುಗೇಟು

ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷ ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ.

ರಾಜಕೀಯ ಕಾರಣಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ, ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೇವಲ ರಾಜಕೀಯ ಕಾರಣಗಳಿಗಾಗಿ ಇಂತಹ ನಿರ್ಧಾರಗಳನ್ನು ಕೈಗೊಂಡು, ವಿದ್ಯಾರ್ಥಿಗಳ ಭವಿಷ್ಯವನ್ನು ಕಡೆಗಣಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ರಚಿಸಿದ ಡಾ.ಕೆ.ಕಸ್ತೂರಿರಂಗನ್ ಅವರೇ ಎನ್‌ಇಪಿಯನ್ನೂ ರಚಿಸಿದ್ದಾರೆ. “ದೇಶದಾದ್ಯಂತ ಪ್ರಚಲಿತದಲ್ಲಿರುವ ವ್ಯವಸ್ಥೆಯನ್ನು ನಾವು ಹೊಂದಿಲ್ಲದಿದ್ದರೆ ನಮ್ಮ ವಿದ್ಯಾರ್ಥಿಗಳು ಹೇಗೆ ಪೈಪೋಟಿ ಮಾಡುವುದು ಹೇಗೆ? ಸರ್ಕಾರದ ನಿರ್ಧಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಹಿನ್ನಡೆಯಾಗಲಿದೆ. ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು. ಇಲ್ಲವಾದರೆ ಪಾಲಕರು, ಶಿಕ್ಷಣ ಸಂಸ್ಥೆಗಳ ಜೊತೆಗೂಡಿ ಬಿಜೆಪಿ ದೊಡ್ಡ ಆಂದೋಲನ ಮಾಡುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿಗೆ ಮತ ಕೊಡುವವರು ರಾಕ್ಷಸರು ಎಂಬ ಸುರ್ಜೇವಾಲಾರ ಹೇಳಿಕೆ ಅತ್ಯಂತ ಖಂಡನೀಯ ಎಂದು ತಿಳಿಸಿದರು.

ದೇಶದ ನಾಗರಿಕರಿಗೆ ಮಾಡಿದ ಈ ಅವಮಾನವನ್ನು ಪ್ರತಿಯೊಬ್ಬ ನಾಗರಿಕರೂ ಖಂಡಿಸಬೇಕು. ಕಾಂಗ್ರೆಸ್ ಏನು ಸ್ವಚ್ಛವಾಗಿ ತೊಳೆದ ಮುತ್ತೇ? ಅಲ್ಲಿ ಎಲ್ಲರೂ ಹರಿಶ್ಚಂದ್ರರೇ ಇದ್ದಾರಾ? 75 ವರ್ಷದ ಟ್ರ್ಯಾಕ್ ರೆಕಾರ್ಡ್ ಪರಿಶೀಲಿಸಿದರೆ ಅತ್ಯಂತ ಭ್ರಷ್ಟ, ಜನವಿರೋಧಿ ಸರಕಾರಗಳನ್ನು ನಾವು ನೋಡಿದ್ದೇವೆ. ಎಷ್ಟು ಜನ ಕಾಂಗ್ರೆಸ್ ನಾಯಕರು ಜೈಲಿನಲ್ಲಿದ್ದಾರೆ? ಎಷ್ಟು ಕೇಸುಗಳಿವೆ? ಎಂದು ಪ್ರಶ್ನೆ ಹಾಕಿದರು. ಇವರಿಗೆ ನಾಚಿಕೆ ಆಗಬೇಕು ಎಂದರು. ಇದು ಅಮಾನವೀಯ, ಅಸಾಂವಿಧಾನಿಕ ಮತ್ತು ಅಕ್ಷಮ್ಯ ಅಪರಾಧ ಎಂದು ನುಡಿದರು.

ಈ ನಡುವೆ ಬಿಜೆಪಿಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಎನ್‌ಇಪಿಯನ್ನು "ನಾಗ್ಪುರ ಶಿಕ್ಷಣ ನೀತಿ" ಎಂದು ಹೇಳಿದ್ದಾರೆ.

ಈ ನೀತಿಯು ಬಿಜೆಪಿಯ ರಾಜಕೀಯ ಅಜೆಂಡಾವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅದರ ಅಗತ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಬೇರೆ ರಾಜ್ಯಗಳ ಬಿಜೆಪಿ ಸರಕಾರಗಳು ಎನ್ಇಪಿಯನ್ನೇಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಇಪಿಯನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಇದು ರಾಜ್ಯದ ವಿಚಾರ. ಬಿಜೆಪಿಯವರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com