ಆಂಧ್ರ ಪ್ರದೇಶ, ತೆಲಂಗಾಣದಿಂದ ಅಕ್ಕಿ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ: ಸಚಿವ ಮುನಿಯಪ್ಪ

ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಖರೀದಿಸಲು ಆಂಧ್ರ ಪ್ರದೇಶ ಮತ್ತು ತೆಲಂಗಾಣದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಬುಧವಾರ ಹೇಳಿದರು.
ಸಚಿವ ಮುನಿಯಪ್ಪ
ಸಚಿವ ಮುನಿಯಪ್ಪ

ಬೆಂಗಳೂರು: ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಖರೀದಿಸಲು ಆಂಧ್ರ ಪ್ರದೇಶ ಮತ್ತು ತೆಲಂಗಾಣದೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ವೆಚ್ಚ ಹೊರತುಪಡಿಸಿ ಕೆಜಿಗೆ ರೂ.40ಕ್ಕೆ ಅಕ್ಕಿ ಪೂರೈಕೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ಆ ಅಕ್ಕಿಯನ್ನು ಖರೀದಿ ಮಾಡುವುದು, ಬಿಡುವ ಕುರಿತು ರಾಜ್ಯ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಶೀಘ್ರದಲ್ಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯಗಳ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಕೆಜಿಗೆ 34 ರೂ.ಗೆ ಅಕ್ಕಿಯನ್ನು ಖರೀದಿ ಮಾಡಿದರೆ, ಅದು ರಾಜ್ಯ ಸರ್ಕಾರಕ್ಕೆ ಸಹಾಯವಾಗಲಿದೆ. ಆದರೆ, ಎಫ್‌ಸಿಐ ರಾಜ್ಯ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳು ಕೆಜಿಗೆ 40 ರೂ.ಗೆ ಅಕ್ಕಿ ಮಾರಾಟ ಮಾಡಲು ಸಿದ್ಧವಾಗಿವೆ.

ಬೆಲೆ ಕಡಿಮೆ ಮಾಡುವಂತೆ ಎರಡೂ ರಾಜ್ಯಗಳಿಗೂ ಮನವಿ ಮಾಡಿಕೊಳ್ಳಲಾಗಿದೆ. ಈ ಕುರಿತು ಚಿಂತನೆ ನಡೆಸಿ, ನಿರ್ಧಾರ ಕೈಗೊಳ್ಳಲು 1 ವಾರ ಕಾಲಾವಕಾಶ ಕೇಳಿದ್ದಾರೆ. ಅಂತಿಮ ಬೆಲೆ ಬಗ್ಗೆ ಮಾಹಿತಿ ನೀಡಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು. ನಂತರ, ಈ ರಾಜ್ಯಗಳೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸುವುದಕ್ಕೂ ಮುನ್ನ ಸಿಎಂ ಜೊತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಅಕ್ಕಿಯನ್ನು ಪೂರೈಸಲು ರಾಜ್ಯ ಸರ್ಕಾರ ಬದ್ಧವಾಗಿದೆ, ಅಗತ್ಯವಿರುವ ಪ್ರಮಾಣದ ಅಕ್ಕಿ ಖರೀದಿಯನ್ನು ರಾಜ್ಯವು ಅಂತಿಮಗೊಳಿಸುವವರೆಗೆ ಡಿಬಿಟಿ ಮುಂದುವರಿಯುತ್ತದೆ. ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲಾಗಿ ನೀಡಬೇಕಾಗಿದ್ದ ಆಗಸ್ಟ್‌ ತಿಂಗಳ ಹಣವನ್ನು ಒಂದು ವಾರದಲ್ಲಿ ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುವುದು. ಪ್ರತಿ ತಿಂಗಳು 10 ಅಥವಾ 11ರ ವೇಳೆಗೆ ಅಕ್ಕಿ ನೀಡುತ್ತಿದ್ದೆವು. ಆದರೆ ಡಿಬಿಟಿ ವ್ಯವಸ್ಥೆಯಲ್ಲಿನ ಕೆಲ ಸಮಸ್ಯೆಯಿಂದ ಹಣ ವರ್ಗಾವಣೆ ತಡವಾಗಿದೆ. ಒಂದು ವರ್ಷದಿಂದ ಬಾಕಿ ಉಳಿದಿರುವ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com